ನಟ ಪುನೀತ್ ರಾಜಕುಮಾರ್ ಹುಟ್ಟುಹಬ್ಬವನ್ನು ರಾಜ್ಯದೆಲ್ಲೆಡೆ ಅಭಿಮಾನಿಗಳು ವಿವಿಧ ಸಾಮಾಜಿಕ ಸೇವಾ ಕಾರ್ಯದ ಮೂಲಕ ಮಾರ್ಚ್ ತಿಂಗಳಿನಲ್ಲಿ ಹಬ್ಬದಂತೆ ಆಚರಿಸುತ್ತಿದ್ದಾರೆ

ಕನ್ನಡಪ್ರಭ ವಾರ್ತೆ ಮಲ್ಕುಂಡಿ

ಪುನೀತ್ ರಾಜಕುಮಾರ್ ಭೌತಿಕವಾಗಿ ಮರೆಯಾಗಿದ್ದರೂ ಅವರು ಜೀವಿತಾವಧಿಯಲ್ಲಿ ಸಲ್ಲಿಸಿದ ಹಲವು ಸಮಾಜಮುಖಿ ಸೇವಾ ಕಾರ್ಯಗಳು ಹಾಗೂ ತಮ್ಮ ಸರಳ ವ್ಯಕ್ತಿತ್ವದಿಂದ ಜನರ ಮನಸ್ಸಿನಲ್ಲಿ ಸದಾಕಾಲಕ್ಕೂ ಉಳಿಯಲಿದ್ದಾರೆ ಎಂದು ಉದ್ಯಮಿ ಹಾಗೂ ಜಿಲ್ಲಾ ಆರ್ಯ ಈಡಿಗರ ಸಂಘದ ಉಪಾಧ್ಯಕ್ಷ ಮಾಂಬಳ್ಳಿ ಕೆ. ರಾಜಶೇಖರ್ ಹೇಳಿದರು.

ನಂಜನಗೂಡು ತಾಲೂಕು ಮಲ್ಕುಂಡಿ ಗ್ರಾಮದಲ್ಲಿ ಪುನೀತ್ ರಾಜಕುಮಾರ್ ಅಭಿಮಾನಿಗಳು ಆಯೋಜಿಸಿದ್ದ ಪುನಿತ್ 51ನೇ ಹುಟ್ಟುಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಟಿ. ಗಿರೀಶ್ ಮಾತನಾಡಿ, ನಟ ಪುನೀತ್ ರಾಜಕುಮಾರ್ ಹುಟ್ಟುಹಬ್ಬವನ್ನು ರಾಜ್ಯದೆಲ್ಲೆಡೆ ಅಭಿಮಾನಿಗಳು ವಿವಿಧ ಸಾಮಾಜಿಕ ಸೇವಾ ಕಾರ್ಯದ ಮೂಲಕ ಮಾರ್ಚ್ ತಿಂಗಳಿನಲ್ಲಿ ಹಬ್ಬದಂತೆ ಆಚರಿಸುತ್ತಿದ್ದಾರೆ ಎಂದು ಹೇಳಿದರು.

ಈ ವೇಳೆ ಗ್ರಾಮದ ಈಡಿಗರ ಬೀದಿಯಲ್ಲಿರುವ ಶ್ರೀ ರಾಮ ಮಂದಿರದ ಆವರಣದಲ್ಲಿ ಮಜ್ಜಿಗೆ, ಪಾನಕ ಹಾಗೂ ಪ್ರಸಾದ ವಿತರಿಸಲಾಯಿತು.

ಮೈಸೂರಿನ ಕದಂಬ ಕಲಾಪೀಠದ ಅಧ್ಯಕ್ಷ ಬಿ. ವಿದ್ಯಾಸಾಗರ ಕದಂಬ, ಜಿಲ್ಲಾ ಈಡಿಗರ ಸಂಘದ ಸಂಘಟನಾ ಕಾರ್ಯದರ್ಶಿ ಎನ್.ಆರ್. ಮೋಹಲ್ಲಾ ಶ್ರೀನಿವಾಸ್, ಸಿದ್ಧಪ್ಪ, ಡಾ. ರಾಜು, ಶಾದನಹಳ್ಳಿ ನಾರಾಯಣ್, ಆನಂದ್ ಕುಮಾರ್, ನಂಜನಗೂಡು ತಾಲೂಕು ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ನಾರಾಯಣ್, ಎಂ. ಆನಂದ್ ಕುಮಾರ್, ಸೋಮು ಮೊದಲಾದವರು ಇದ್ದರು.