ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಯುಕೆಪಿಗಾಗಿ ಭೂಮಿ ಕಳೆದುಕೊಂಡಿರುವ ರೈತರು ಪರಿಹಾರ ಕೇಳುತ್ತಿದ್ದಾರೆ, ಭಿಕ್ಷೆಯನ್ನಲ್ಲ. ಸರ್ಕಾರ ನಡೆಸುವವರು ಕಲ್ಲು ಹೃದಯರಾಗದೇ ನ್ಯಾಯಯುತ ಬೇಡಿಕೆಗೆ ಸ್ಪಂದಿಸುವ ಕೆಲಸವಾಗಬೇಕು ಎಂದು ಕೊಲ್ಲಾಪುರ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಒತ್ತಾಯಿಸಿದರು.ಇಲ್ಲಿನ ಜಿಲ್ಲಾಡಳಿತದ ಎದುರು ಕೃಷ್ಣಾ ಮೇಲ್ದಂಡೆ ಯೋಜನೆ ಬಾಧಿತ ಸಂತ್ರಸ್ತರ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 8ನೇ ದಿನವಾದ ಸೋಮವಾರ ಪಾಲ್ಗೊಂಡು ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ರೈತರ ಬಗ್ಗೆ ತಾತ್ಸಾರ ಹೆಚ್ಚಾಗುತ್ತಿದೆ. ಹಗಲಿರುಳು ಎನ್ನದೇ ದುಡಿಯುವ ರೈತರ ಬಗ್ಗೆ ಅನುಕಂಪ ಇಲ್ಲದಾಗಿದೆ. ನ್ಯಾಯಯುತ ಪರಿಹಾರ ಕೇಳುತ್ತಿರುವ ಈ ಹೋರಾಟದಲ್ಲಿ ಕೇವಲ ಮಾತನಾಡಿ ಹೋಗುವ ಕೆಲಸವಾಗಬಾರದು. ಉತ್ತರ ಕರ್ನಾಟಕದ ಮುಖಂಡರು ಪಕ್ಷಾತೀತವಾಗಿ ಇದರ ಪರವಾಗಿ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.
ಏನಾದರೂ ಭರವಸೆ ನೀಡಿ ಹೋರಾಟ ನಿಲ್ಲಿಸಲು ಅಥವಾ ಒಡೆಯುವ ಕೆಲಸಗಳು ನಡೆಯುವುದರಲ್ಲಿ ಎರಡು ಮಾತಿಲ್ಲ. ಒಡೆಯುವವರ ಬಳಿ ಬಹಳ ತಂತ್ರಗಳಿವೆ. ಬೇಡಿಕೆ ಈಡೇರುವವರೆಗೂ ಹೋರಾಟದಿಂದ ಹಿಂದೆ ಸರಿಯಬಾರದು ಎಂದರು.ಶಿರಹಟ್ಟಿ ಫಕ್ಕಿರೇಶ್ವರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಜಗತ್ತಿಗೆ ಅನ್ನ ನೀಡುವ ರೈತ ಇಂದು ಬೀದಿಗೆ ಬಂದು ನೀರಾವರಿಗಾಗಿ ಜಮೀನು ಕಳೆದುಕೊಂಡಿರುವುದಕ್ಕೆ ಅಹೋರಾತ್ರಿ ಹೋರಾಟ ಆರಂಭಿಸಿದ್ದಾರೆ. ಪ್ರತಿಯೊಬ್ಬರು ರೈತರ ಬೆಂಬಲಕ್ಕೆ ನಿಲ್ಲಬೇಕು. ಅವರು ಕೇಳುತ್ತಿರುವ ಬೇಡಿಕೆ ನ್ಯಾಯಯುತವಾಗಿದ್ದು, ಅವರಿಗಾಗಿ ಮಠಾಧೀಶರು ಎಂತಹ ಹೋರಾಟಕ್ಕೂ ಸಿದ್ಧ ಎಂದರು.
ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರದಲ್ಲಿ ಎಲ್ಲ ಸರ್ಕಾರಗಳು ನಿರ್ಲಕ್ಷ್ಯ ಧೋರಣೆ ವಹಿಸಿವೆ. ನಮ್ಮ ಕೃಷ್ಣೆ ಮಕ್ಕಳು, ರೈತರ ಹಕ್ಕಿಗಾಗಿ ಹೋರಾಟ ಆರಂಭಗೊಂಡಿದೆ. ಸರ್ಕಾರ ಸಭೆ ನೋಡಿಕೊಂಡು ಡಿ.11ರಂದು ಹೋರಾಟ ಮುಂದಿನ ತೀರ್ಮಾನ ಮಾಡಲಾಗುವುದು ಎಂದು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಘೋಷಣೆ ಮಾಡಿದರು.ಆಂಧ್ರಪ್ರದೇಶ, ತೆಲಂಗಾಣಗಳಂತೆ ಬದ್ಧತೆ ಇರುವ ಸರ್ಕಾರಗಳು ಕಾಣುತ್ತಿಲ್ಲ. ಅಲ್ಲಿ ಭೂಮಿ ಪೂಜೆ ದಿನವೇ ಉದ್ಘಾಟನೆ ದಿನಾಂಕ ಘೋಷಣೆ ಮಾಡುತ್ತಾರೆ. ನಮ್ಮಲ್ಲಿ ವರ್ಷಗಳು ಗತಿಸಿದರೂ ಯೋಜನೆ ಪೂರ್ಣಗೊಳ್ಳುವುದಿಲ್ಲ ಎಂದ ಅವರು, ಇಂದು 147ಕ್ಕೂ ಹೆಚ್ಚು ಸ್ವಾಮೀಜಿಗಳು ಭಾಗವಹಿಸಿದ್ದಾರೆ. ಸರ್ಕಾರ ಗಮನ ಕೊಡಬೇಕು. ಬದ್ಧತೆ ನಿರ್ಧಾರ ಪ್ರಕಟಿಸಬೇಕು. ಇಲ್ಲವಾದಲ್ಲಿ ಎಂಟು ಜಿಲ್ಲೆಯ 500ಕ್ಕೂ ಹೆಚ್ಚು ಮಠಾಧೀಶರು ಬೆಳಗಾವಿ ವಿಧಾನ ಸೌಧಕ್ಕೆ ಧಾವಿಸುತ್ತೇವೆ. ಮಠಾಧೀಶರು ಹೋರಾಟ ಕೈಗೊಂಡರೇ ಸರ್ಕಾರಗಳು ಅಲುಗಾಡುವುದು ಪಕ್ಕಾ ಎಂದು ಎಚ್ಚರಿಕೆ ನೀಡಿದರು.
ಮಾಜಿ ಸಚಿವ ಎಸ್.ಆರ್.ಪಾಟೀಲ ಮಾತನಾಡಿ, ಸಿದ್ದರಾಮಯ್ಯ ಅವರು ವಿಜಯಪುರದಲ್ಲಿ ನಡೆದ ಸಮಾವೇಶದಲ್ಲಿ ಹೇಳಿದಂತೆ ನಡೆದುಕೊಳ್ಳಬೇಕು. ಆಂಧ್ರಪ್ರದೇಶ, ತೆಲಂಗಾಣದಲ್ಲಿ ಎರಡು ಲಕ್ಷ ಕೋಟಿ ನೀರಾವರಿ ಯೋಜನೆಗಳು ಮೂರು ವರ್ಷದಲ್ಲಿ ಮುಗಿಯುತ್ತವೆ. ನಮ್ಮಲ್ಲಿ ಮೂವತ್ತು, ಆರುವತ್ತು ವರ್ಷವಾದರು ಮುಗಿಯುವುದಿಲ್ಲ ಎಂದರು.ಭಾರತೀಯ ವೈದ್ಯಕೀಯ ಸಂಘದ ಬೆಂಬಲ:
ಯುಕೆಪಿ ಸಂತ್ರಸ್ತರು ನಡೆಸುತ್ತಿರುವ ಹೋರಾಟಕ್ಕೆ ಭಾರತೀಯ ವೈದ್ಯರ ಸಂಘ ಜಿಲ್ಲಾ ಘಟಕವು ಬೆಂಬಲ ನೀಡಿದೆ. ಸಂಘದ ಅಧ್ಯಕ್ಷ ಡಾ.ಸುಭಾಷ ಪಾಟೀಲ, ಡಾ.ಶೇಖರ ಮಾನೆ, ಡಾ.ಅರುಣ ಮಿಸ್ಕಿನ, ಡಾ.ದೇವರಾಜ ಪಾಟೀಲ, ಡಾ.ಎಚ್.ಆರ್.ಕಟ್ಟಿ, ಡಾ.ಸಂದೀಪ ಹುಯಿಲಗೋಳ ಸೇರಿದಂತೆ ಇತರರಿದ್ದರು.ಕೋರ್ಟ್ ಕಲಾಪ ಬಹಿಷ್ಕರಿಸಿ ಬೆಂಬಲ:ಜಿಲ್ಲೆಯ ಕೋರ್ಟ್ ಕಲಾಪಗಳನ್ನು ಬಹಿಷ್ಕರಿಸಿ ವಕೀಲರ ಸಂಘ ಯುಕೆಪಿ ಸಂತ್ರಸ್ತರ ಹೋರಾಟಕ್ಕೆ ಬೆಂಬಲ ಸೂಚಿಸಿದವು.
ಕಲಬುರಗಿ ಚನ್ನರುದ್ರ ಶಿವಾಚಾರ್ಯ ಸ್ವಾಮೀಜಿ, ಗುಳೇದಗುಡ್ಡದ ಬ್ರಹನ್ಮಠದ ಪಟ್ಟಧಾರೆ ಶ್ರೀ, ಸಿಂದಗಿಯ ಸಾರಂಗ ಮಠದ ಸ್ವಾಮೀಜಿ, ಗುಳೇದಗುಡ್ಡದ ಒತೇಶ್ವರ ಸ್ವಾಮೀಜಿ, ಅಮೀನಗಡದ ಶಂಕರರಾಜೇಂದ್ರ ಸ್ವಾಮೀಜಿ, ಕಮತಗಿಯ ಹುಚ್ಚೇಶ್ವರ ಸ್ವಾಮೀಜಿ, ಆಲಮೇಲದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು.ಮಾಜಿ ಸಚಿವ ಮುರುಗೇಶ್ ನಿರಾಣಿ ಬೆಂಬಲಬಾಗಲಕೋಟೆಯಲ್ಲಿ ನಡೆಯುತ್ತಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ ಅನುಷ್ಟಾನದ ಹೋರಾಟಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷರು ಆಗಿರುವ ಮಾಜಿ ಸಚಿವ ಮುರುಗೇಶ್ ನಿರಾಣಿ ಬೆಂಬಲ ನೀಡಿದರು.
ತಮ್ಮ ಬೆಂಬಲಿಗರೊಂದಿಗೆ ಪಾದಯಾತ್ರೆ ಮೂಲಕ ಹೋರಾಟದ ವೇದಿಕೆಗೆ ಆಗಮಿಸಿದ ನಿರಾಣಿ ಮಾತನಾಡಿ, ಮಗು ಅತ್ತಾಗ ಮಾತ್ರ ತಾಯಿ ಹಾಲು ಕುಡಿಸುತ್ತಾಳೆ. ಹೋರಾಟಗಳು ಹಾಗೇ ಆಗಿವೆ. ಹೀಗಾಗಿ ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ, ಪ್ರಹ್ಲಾದ್ ಜೋಷಿಯವರ ಜೊತೆ ಮಾತಾಡುತ್ತೇನೆ. ಎಲ್ಲರೂ ಸೇರಿ ನಿಯೋಗ ಹೋಗೋಣ. ನೀವು ಎಷ್ಟು ಜನ ಬರುತ್ತೀರಿ ಹೇಳಿ.. ನಾನು ಕರೆದೊಯ್ಯುತ್ತೇನೆ ಎಂದ ನಿರಾಣಿ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಒಮ್ಮತ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.ಎಲ್ಲ ಪಕ್ಷದ ಒಮ್ಮತದ ಅಭಿಪ್ರಾಯ, ಬದ್ಧತೆ ಅಗತ್ಯ
ಉತ್ತರ ಕರ್ನಾಟಕ ಭಾಗದ ಪ್ರಮುಖ ಯೋಜನೆಯಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತ ಅನುಷ್ಠಾನಕ್ಕೆ ಕೇಂದ್ರ, ರಾಜ್ಯ ಸರ್ಕಾರ ಹಾಗೂ ಎಲ್ಲ ಪಕ್ಷದ ಒಮ್ಮತದ ಅಭಿಪ್ರಾಯ, ಬದ್ಧತೆ ಬೇಕಿದೆ ಎಂದು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರಕ್ಷಿತಾ ಭರತಕುಮಾರ ಈಟಿ ಆಗ್ರಹಿಸಿದರು.ಯೋಜನೆ ಹಿನ್ನಡೆ, ಮುನ್ನಡೆ ಅಂತ ಭಾವಿಸುವ ಅಗತ್ಯವಿಲ್ಲ. ಮೊದಲ, ಎರಡನೇ ಹಂತದ ಯೋಜನೆಯಿಂದಾಗಿ ಲಕ್ಷಾಂತರ ಹೇಕ್ಟೆರ್ ನೀರಾವರಿ ಆಗಿದೆ. ಮೂರನೇ ಹಂತದ ಅನುಷ್ಠಾನದಿಂದ ವಿಜಯಪುರ- ಬಾಗಲಕೋಟೆ ಜಿಲ್ಲೆಯ ಸಂತ್ರಸ್ತರ, ರೈತರು, ಜನ ಸಾಮಾನ್ಯರ ಬದುಕು ಹಸನಗೊಳ್ಳಲಿದೆ ಎನ್ನುವುದು ಮುಖ್ಯ. ಯೋಜನೆ ಅನುಷ್ಠಾನದಿಂದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಬೆಳವಣಿಗೆ ಅಡಗಿದೆ. ಕೃಷ್ಣೆಯ ಒಡಲಿನ ಮಕ್ಕಳ ಹಕ್ಕು ಇದೆ. ಯೋಜನೆ ಅನುಷ್ಠಾನಕ್ಕೆ ನಮ್ಮ ಬೆಂಬಲ ಸದಾ ಇದೆ. ಬೃಹತ್ ಮಟ್ಟದ ಅನುದಾನ ಇರುವ ಕಾರಣಕ್ಕೆ ಹಂತ ಹಂತವಾಗಿ ಯೋಜನೆ ಜಾರಿಗೊಳಿಸಿ ಶೀಘ್ರಗತಿಯಲ್ಲಿ ಯೋಜನೆ ಜಾರಿ ಬರಲಿ ಎಂದರು.