ಸಾರಾಂಶ
ಕೊಳ್ಳೇಗಾಲದಲ್ಲಿ ಇಲ್ಲದ ನಕಲಿ ಅಬ್ದುಲ್ ಕಲಾಂ ಸಂಸ್ಥೆಗೆ ಡಿಡಿಪಿಐ ರಾಮಚಂದ್ರರಾಜೇ ಅರಸ್ ಅವರ ನಿಯಮ ಮೀರಿದ ಆದೇಶ ತೋರಿಸಿ ನೂರಾರು ಮಂದಿಗೆ ಕೆಲಸದ ಆಸೆಯೊಡ್ಡಿ ಲಕ್ಷಾಂತರ ರು. ವಂಚಿಸಲಾಗಿದೆ. ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಸಂಸ್ಥೆಯಿಂದ ವಂಚನೆಗೊಳಗಾದ 50ಕ್ಕೂ ಅಧಿಕ ಮಂದಿ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿಗೆ ದೂರು ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಕೊಳ್ಳೇಗಾಲದಲ್ಲಿ ಇಲ್ಲದ ನಕಲಿ ಅಬ್ದುಲ್ ಕಲಾಂ ಸಂಸ್ಥೆಗೆ ಡಿಡಿಪಿಐ ರಾಮಚಂದ್ರರಾಜೇ ಅರಸ್ ಅವರ ನಿಯಮ ಮೀರಿದ ಆದೇಶ ತೋರಿಸಿ ನೂರಾರು ಮಂದಿಗೆ ಕೆಲಸದ ಆಸೆಯೊಡ್ಡಿ ಲಕ್ಷಾಂತರ ರು. ವಂಚಿಸಲಾಗಿದೆ. ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಸಂಸ್ಥೆಯಿಂದ ವಂಚನೆಗೊಳಗಾದ 50ಕ್ಕೂ ಅಧಿಕ ಮಂದಿ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿಗೆ ದೂರು ಸಲ್ಲಿಸಿದರು. ರೈತ ಹೋರಾಟಗಾರ ಅಣಗಳ್ಳಿ ಬಸವರಾಜು ಅವರು ನೇತೃತ್ವದಲ್ಲಿ ಇತ್ತಿಚೆಗೆ ಹನೂರಿನಲ್ಲಿ ಮಹಿಳಾ ಅಯೋಗದ ಅಧ್ಯಕ್ಷರನ್ನು ಭೇಟಿ ಮಾಡಿದ ಸೀಮಾ, ರಾಧಿಕ, ನಾವು ಡಿಡಿಪಿಐ ಆದೇಶ ನೋಡಿ, ಕೆಲಸ ಸಿಗುತ್ತೆ ಎಂದು ಕಲಾಂ ಸಂಸ್ಥೆಯ ಪದಾಧಿಕಾರಿಗಳ ಮೋಸದ ಜಾಲಕ್ಕೆ ಸಿಲುಕಿ ಲಕ್ಷಾಂತರ ಹಣ ಕಳೆದುಕೊಂಡಿದ್ದೇವೆ. ನಮಗೆ ನ್ಯಾಯ ದೊರಕಿಸಿಕೊಡಿ ಎಂದರು. ನಕಲಿ ಸಂಸ್ಥೆಯ ಪದಾಧಿಕಾರಿಗಳೆಂದು ಹೇಳಿಕೊಂಡು ಕೃಷ್ಣ, ಶ್ರೀಕಂಠು, ಸುಂದರ್ ಎಂಬುವರು ಕೊಪ್ಪಳದ ಸತೀಶ ಪಟಾಗರ ಎಂಬುವರೆಲ್ಲರೂ ಸೇರಿಕೊಂಡು ನಮಗೆ ಕೆಲಸದ ಅಮೀಷ ತೋರಿಸಿ ವಂಚಿಸಿದ್ದಾರೆ, ಒಂದೂವರೆ ಲಕ್ಷದಿಂದ 2 ಲಕ್ಷದತನಕ ಹಣ ಪಡೆದಿದ್ದಾರೆ. ಇತ್ತ ಸಂಬಳವೂ ಇಲ್ಲ, ಕೆಲಸವೂ ಇಲ್ಲದಂತಾಗಿದೆ. ಈ ವಂಚನೆಗೆ ಡಿಡಿಪಿಐ ಅವರು ಸರ್ಕಾರದ ನಿಯಮ ಮೀರಿ ಆದೇಶ ಹೊರಡಿಸಿದ್ದೆ ಕಾರಣವಾಗಿದೆ ಎಂದರು.ವಂಚನೆಗೆ ಕಾರಣರಾದ ಚಾಮರಾಜನಗರ ಡಿಡಿಪಿಐ ರಾಮಚಂದ್ರು, ನಕಲಿ ಸಂಸ್ಥೆಯ ಶ್ರೀಕಂಠು, ಸುಂದರ, ಕೖಷ್ಣ, ಸತೀಶ್ ಮತ್ತು ಮೈಸೂರಿನಲ್ಲಿಯೂ ಮಹೇಂದ್ರ ಮಹೇಳ್ ಎಂಬುವರು ನೂರ ಎಪ್ಪತ್ತಕ್ಕೂ ಅಧಿಕ ಮಂದಿಗೆ ಕೆಲಸದ ಅಮೀಷ ತೋರಿಸಿ ಹಣ ಪಡೆದು ವಂಚಿಸಿದ್ದಾರೆ, 20ಕ್ಕೂ ಹೆಚ್ಚು ಮಹಿಳೆಯರು ಇವರ ಅಮೀಷಕ್ಕೊಳಗಾಗಿ ಮಾಂಗಲ್ಯ ಸರಮಾರಾಟ ಮಾಡಿಕಳೆದುಕೊಂಡಿದ್ದಾರೆ, ಇವರಿಂದ ನೊಂದ ನಮಗೆ ನ್ಯಾಯ ದೊರಕಿಸಿಕೊಡಿ ಎಂದು ಅಹವಾಲು ಸಲ್ಲಿಸಿದರು.
ಈ ವೇಳೆ ಅಹವಾಲು ಸ್ವೀಕರಿಸಿದ ಮಹಿಳಾ ಆಯೋಗದ ಅಧ್ಯಕ್ಷೆ, ನಿಮಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಸದಾಕಾಲ ನಿಮ್ಮೊಟ್ಟಿಗಿರುವೆ. ಈ ಸಂಬಂಧ ಎಸ್ಪಿ ಜೊತೆ ಮಾತನಾಡುವೆ ಎಂದರು.