ಸಾರಾಂಶ
ಈ ಬಾರಿ ಮೋಸ, ತಂತ್ರಗಾರಿಕೆ ರಾಜಕೀಯ ಜನರು ತಿರಸ್ಕರಿಸಿದ್ದಾರೆ ಎನ್ನುವುದಕ್ಕೆ ಇಂದಿನ ಫಲಿತಾಂಶವೆ ಉದಾಹರಣೆಯಾಗಿದೆ
ಶಿರಹಟ್ಟಿ: ತೀವ್ರ ಪೈಪೋಟಿಗೆ ಕಾರಣವಾಗಿದ್ದ ಗದಗ-ಹಾವೇರಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಆಯ್ಕೆಗೆ ಪಟ್ಟಣದ ಬಿಜೆಪಿ ಮುಖಂಡರು, ಕಾರ್ಯಕರ್ತರು, ಪಕ್ಷದ ಅಭಿಮಾನಿಗಳು ಮಂಗಳವಾರ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತ, ಬಸವೇಶ್ವರ ವೃತ್ತ, ವಾಲ್ಮೀಕಿ ವೃತ್ತಗಳಲ್ಲಿ ಪಟಾಕಿ ಸಿಡಿಸಿ ಪರಸ್ಪರ ಗುಲಾಲ್ ಎರಚಿ, ಸಿಹಿ ಹಂಚಿ ಸಂಭ್ರಮಿಸಿದರು.
ಬಿಜೆಪಿ ಮುಖಂಡ ರಾಮಣ್ಣ ಕಂಬಳಿ, ಅಕ್ಬರ್‌ಸಾಬ್ ಯಾದಗಿರಿ ಮಾತನಾಡಿ, ಕಾರ್ಯಕರ್ತರ ಸಂಘಟನೆ, ಪರಿಶ್ರಮ, ದೇಶದಲ್ಲಿ ಮೋದಿ ಆಡಳಿತ ಹಾಗೂ ಈ ಹಿಂದೆ ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯಗಳು, ಜಾರಿಗೆ ತಂದ ಜನಪರ ಯೋಜನೆಗಳು ಅವರ ಗೆಲುವಿಗೆ ಕಾರಣ ಎಂದು ಬಣ್ಣಿಸಿದರು.ಈ ಬಾರಿ ಮೋಸ, ತಂತ್ರಗಾರಿಕೆ ರಾಜಕೀಯ ಜನರು ತಿರಸ್ಕರಿಸಿದ್ದಾರೆ ಎನ್ನುವುದಕ್ಕೆ ಇಂದಿನ ಫಲಿತಾಂಶವೆ ಉದಾಹರಣೆಯಾಗಿದೆ. ಈ ಹಿಂದಿನ ಯುಪಿಎ ಸರ್ಕಾರದ ನೀತಿಗಳನ್ನು ಜನತೆ ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. ಗದಗ-ಹಾವೇರಿ ಕ್ಷೇತ್ರದ ಜನತೆ ಕಾಂಗ್ರೆಸ್ ತಿರಸ್ಕರಿಸಿ ಮತ್ತೆ ಬಿಜೆಪಿ ಬೆಂಬಲಿಸಿದ್ದಾರೆ ಎಂದರು.
ಫಲಿತಾಂಶ ಹೊರ ಬೀಳುತ್ತಿದ್ದಂತೆ ಕಾರ್ಯಕರ್ತರ ಅಬ್ಬರ ಮಿತಿ ಮೀರಿತ್ತು. ಪಕ್ಷಗಳ ಧ್ವಜ ಹಿಡಿದು ಜೈ ಎನ್ನುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮೆರವಣಿಗೆಯಲ್ಲಿ ಶ್ರೀನಿವಾಸ ಬಾರಬರ, ಫಕ್ಕೀರೇಶ ಕರಿಗಾರ, ದೇವಪ್ಪ ಘಂಟಿ ಹಾಗೂ ನೂರಾರು ಕಾರ್ಯಕರ್ತರು ಇದ್ದರು.