ಸಾರಾಂಶ
ಬ್ಯಾಡಗಿ: ದೆಹಲಿ ಚುನಾವಣೆಯಲ್ಲಿ ಒಂದೂ ಸ್ಥಾನವನ್ನು ಗೆಲ್ಲಲು ವಿಫಲವಾಗಿರುವ ಕಾಂಗ್ರೆಸ್ ಪ್ರಾದೇಶಿಕ ಪಕ್ಷವೆಂಬಂತೆ ಭಾಸವಾಗುತ್ತಿದ್ದು, ಮುಂಬರುವ ಎಲ್ಲ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ಶೂನ್ಯ ಫಲಿತಾಂಶ ಮುಂದುವರೆಯಲಿದೆ ಎಂದು ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಭವಿಷ್ಯ ನುಡಿದರು.
ದೆಹಲಿಯಲ್ಲಿ 27 ವರ್ಷಗಳ ಬಳಿಕ ಬಿಜೆಪಿ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಪಟ್ಟಣದ ಹಳೇ ಪುರಸಭೆ ಎದುರು ಆಯೋಜಿಸಿದ್ದ ವಿಜಯೋತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ದೇಶ ಮೊದಲು ಎಂಬ ಸಿದ್ಧಾಂತದೊಂದಿಗೆ ಚುನಾವಣೆ ಎದುರಿಸಿದ ಬಿಜೆಪಿಗೆ 5 ವರ್ಷಗಳ ಕಾಲ ಆಡಳಿತ ನಡೆಸುವಂತೆ ದೆಹಲಿ ಜನರು ಆಶೀರ್ವದಿಸಿದ್ದಾರೆ. ಸುಭದ್ರ ರಾಷ್ಟ್ರ ನಿರ್ಮಾಣಕ್ಕಾಗಿ ಸಂಕಲ್ಪ ತೊಟ್ಟಿದ್ದ ಬಿಜೆಪಿಗೆ ಬಹುಮತ ನೀಡಿದ ದೆಹಲಿ ಮತದಾರರಿಗೆ ಗೆಲುವಿಗೆ ಸಹಕರಿಸಿದ ಎಲ್ಲರಿಗೂ ಅಭಿನಂದಿಸುತ್ತೇನೆ ಎಂದರು.3 ನೇ ಬಾರಿ ಕಾಂಗ್ರೆಸ್ ಶೂನ್ಯ ಸಂಪಾದನೆ: ತಾಲೂಕಾಧ್ಯಕ್ಷ ಶಿವಯೋಗಿ ಶಿರೂರ ಮಾತನಾಡಿ, ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತೀವ್ರ ಮುಖಭಂಗವಾಗಿದೆ. ದೇಶದಲ್ಲಿ ನಡೆಸಿದ ದುರಾಡಳಿತದಿಂದ ಚುನಾವಣೆಗಳಲ್ಲಿ ಸರಣಿ ಸೋಲು ಅನುಭವಿಸುತ್ತಿದ್ದು, ಕಳೆದ 3 ಸಾರ್ವತ್ರಿಕ ಚುನಾವಣೆಗಳಲ್ಲಿ ಶೂನ್ಯ ಸಂಪಾದನೆ ಮಾಡಿದೆ. ಹೀನಾಯ ಸೋಲಿನಿಂದ ತತ್ತರಿಸಿರುವ ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳುವಂತೆ ಸಲಹೆ ನೀಡಿದರು.ಮೋದಿ ಗ್ಯಾರಂಟಿ ಮುಂದೆ ಏನೂ ನಡೆಯುವುದಿಲ್ಲ: ಮಹಿಳಾ ಮೋರ್ಚಾ ಅಧ್ಯಕ್ಷೆ ವಿದ್ಯಾ ಶೆಟ್ಟಿ ಮಾತನಾಡಿ, ಉಚಿತ ಕೊಡುಗೆಗಳ ಹೆಸರಿನಲ್ಲಿ ಮತದಾರರಿಗೆ ಆಮಿಷವೊಡ್ಡಿ ಅಧಿಕಾರಕ್ಕೆ ಬರಬೇಕೆಂಬ ಹುನ್ನಾರ ನಡೆಸಿದ್ದ ಕಾಂಗ್ರೆಸ್‌ಗೆ ದೆಹಲಿಯ ಪ್ರಜ್ಞಾವಂತ ಮತದಾರರು ತಕ್ಕಪಾಠ ಕಲಿಸಿದ್ದಾರೆ, ಉಚಿತ ಕೊಡುಗೆ ನಮ್ಮ ಸಾಧನೆ ಎಂದು ಬೀಗುತ್ತಿರುವ ರಾಜ್ಯದ ಕಾಂಗ್ರೆಸ್ ನಾಯಕರಿಗೂ ಕೂಡ ಇದೊಂದು ಎಚ್ಚರಿಕೆ ಗಂಟೆಯಾಗಿದೆ ಎಂದರು.
ಇದಕ್ಕೂ ಮುನ್ನ ಪಟಾಕಿ ಸಿಡಿಸಿದ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು. ಪುರಸಭೆ ಸದಸ್ಯರಾದ ಚಂದ್ರಣ್ಣ ಶೆಟ್ಟರ, ಹನುಮಂತ ಮ್ಯಾಗೇರಿ, ವಿನಯ ಹಿರೇಮಠ, ಫಕ್ಕೀರಮ್ಮ ಛಲವಾದಿ, ಮಾಜಿ ಸದಸ್ಯ ಕೆಸಿಸಿ ಬ್ಯಾಂಕ್ ನಿರ್ದೇಶಕ ವಿಜಯ ಮಾಳಗಿ, ಮಾಜಿ ನಿರ್ದೇಶಕ ಸುರೇಶ ಯತ್ನಳ್ಳಿ, ಮುಖಂಡರಾದ ಮುರಿಗೆಪ್ಪ ಶೆಟ್ಟರ, ವಿಜಯಭರತ ಬಳ್ಳಾರಿ, ಸುರೇಶ ಉದ್ಯೋಗಣ್ಣವರ, ಮೌನೇಶ ಬಡಿಗೇರ, ಪರುಶರಾಮ ಉಜಿನಿಕೊಪ್ಪ, ಜಿತೇಂದ್ರ ಸುಣಗಾರ, ಗುತ್ತೆಮ್ಮ ಮಾಳಗಿ, ನಾಗರಾಜ ಹಾವನೂರ, ಸೇರಿದಂತೆ ಇನ್ನಿತರರಿದ್ದರು.