ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಕೊಳ್ಳೇಗಾಲ ನಗರಸಭೆಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ರೇಖಾ ರಮೇಶ್, ಉಪಾಧ್ಯಕ್ಷರಾಗಿ ಎ.ಪಿ. ಶಂಕರ್ ಗುರುವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.ಬೆಳಗ್ಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ರೇಖಾ ರಮೇಶ್ ಅಧ್ಯಕ್ಷ ಸ್ಥಾನಕ್ಕೆ, ಉಪಾಧ್ಯಕ್ಷ ಸ್ಥಾನಕ್ಕೆ ಎ.ಪಿ.ಶಂಕರ್ ನಾಮಪತ್ರ ಸಲ್ಲಿಸಿದರು. ಬಿಜೆಪಿಯಿಂದ ಯಾರು ನಾಮಪತ್ರ ಸಲ್ಲಿಸಿದ ಕಾರಣ ಉಪವಿಭಾಗಾಧಿಕಾರಿ ಮಹೇಶ್ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು. ಅವಿರೋಧ ಆಯ್ಕೆ ಪ್ರಕಟಿಸುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ವಿಜಯೋತ್ಸವ ಆಚರಿಸಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೂ ಕಾಂಗ್ರೆಸ್ ಪಕ್ಷದ ಅಭಿಮಾನಿಗಳು ಹಾರ ಹಾಕಿ ಗೌರವ ಸಲ್ಲಿಸಿದರು. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ:
ನಗರಸಭೆಯಿಂದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣಾ ಪ್ರಕ್ರಿಯೆ ಮುಗಿಯುತ್ತಿದ್ದಂತೆ ನೂತನ ಅಧ್ಯಕ್ಷರು, ಉಪಾಧ್ಯಕ್ಷರ ಸಮೇತ ಶಾಸಕ ಎ.ಆರ್.ಕೃಷ್ಣಮೂರ್ತಿ, ಸಂಸದ ಸುನೀಲ್ ಬೋಸ್, ಮಾಜಿ ಅಧ್ಯಕ್ಷ ರಮೇಶ್, ಬಸ್ತಿಪುರ ಶಾಂತರಾಜು, ಕೊಪ್ಪಾಳಿನಾಯಕ, ಮಂಜುನಾಥ್ ಸೇರಿದಂತೆ ಅನೇಕ ಗಣ್ಯರು, ಬೀಮನಗರದ ಯಜಮಾನರು ಒಗ್ಗೂಡಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.ಈ ವೇಳೆ ಕೊಳ್ಳೇಗಾಲ ನಗರಸಭೆ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿದ ಹಿನ್ನೆಲೆ ಶಾಸಕ ಎ.ಆರ್. ಕೃಷ್ಣಮೂರ್ತಿ ಸಂತಸ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಜನಪರ ಕಾರ್ಯಗಳು, ಗ್ಯಾರಂಟಿ ಯೋಜನೆಗಳಿಂದಾಗಿ ಕಾಂಗ್ರೆಸ್ ಜನಪರ ಪಕ್ಷವಾಗಿದೆ. ಪಕ್ಷದ ಸಾಮಾಜಿಕ ನ್ಯಾಯದಿಂದಾಗಿ ಬಹುತೇಕ ಗಣ್ಯರು ಪಕ್ಷಕ್ಕೆ ಆಗಮಿಸುತ್ತಿದ್ದಾರೆ, ಚಾ.ನಗರ ಜಿಲ್ಲೆಯ ಗುಂಡ್ಲುಪೇಟೆ, ಕೊಳ್ಳೇಗಾಲ, ಯಳಂದೂರು ಪಪಂಗಳಲ್ಲಿ ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು ಚಾ.ನಗರ ನಗರಸಭೆಯಲ್ಲೂ ಕಾಂಗ್ರೆಸ್ ಅಧಿಕಾರ ಹಿಡಿಯುವುದು ನಿಶ್ಚಿತ ಎಂದರು.
ಸಂಸದ ಸುನೀಲ್ ಬೋಸ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಜನಪರ ಕಾರ್ಯದಿಂದಾಗಿ ಪಕ್ಷದ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷ, ಉಪಾಧ್ಯಕ್ಷರು ಪಟ್ಟಣದ ಅಭಿವೃದ್ಧಿಗೆ ಒತ್ತುನೀಡಬೇಕು, ಕಾಂಗ್ರೆಸ್ ಪಕ್ಷ ಕೊಳ್ಳೇಗಾಲ ನಗರಸಭೆ ಅಧಿಕಾರ ಹಿಡಿದಿರುವುದು ಸಂತಸ ತಂದಿದೆ ಎಂದರು.ಈ ಸಂದರ್ಭದಲ್ಲಿ ಮಾಜಿ ಉಪಾಧ್ಯಕ್ಷರಾದ ಅಕ್ಮಲ್ ಪಾಶಾ, ಸುಶೀಲ ಶಾಂತರಾಜು, ಸುಮೇರಾ ಬೇಗಂ, ಪ್ರಶಾಂತ್, ವರದರಾಜು, ಗುರು, ರಾಜೇಂದ್ರ, ಪೈರೋಜ್, ಅನ್ಸರ್ ಬೇಗ್ ಸ್ವಾಮಿ ನಂಜಪ್ಪ ಇನ್ನಿತರರು ಇದ್ದರು. ಆ ಒಂದು ಮಾತು ಅಧಿಕಾರ ಸಿಗದಂತೆ ಮಾಡಿತು..! ಅಂದು ಆಡಿದ ಆ ಒಂದು ಮಾತು, ಚೆಸ್ಕಾಂ ನೌಕರನ ಮೇಲೆ ಲಘುವಾಗಿ ನಿಂದಿಸಿದ್ದು ಇಂದು ಸರಾಗವಾಗಿ ದೊರಕಬೇಕಿದ್ದ ನಗರಸಭೆ ಅದ್ಯಕ್ಷಸ್ಥಾನದಿಂದ ವಂಚಿತರಾಗಬೇಕಾಯಿತು.
ನಗರಸಭೆ ಮಾಜಿ ಸದಸ್ಯ ಶಾಂತರಾಜು ಅವರು ಒಂದು ವರ್ಷದ ಹಿಂದೆ ನಾಲಿಗೆ ತಪ್ಪಿ ಚೆಸ್ಕಾಂ ನೌಕರನೊಬ್ಬನಿಗೆ ದೂರವಾಣಿ ಕರೆ ಮಾಡಿ ಲಘುಪದ ಬಳಸಿ ನಿಂದಿಸಿದ್ದರು. ಈ ವಿಚಾರ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನ ಬಳಸಿಕೊಂಡ ನೌಕರ ಅಂದು ಪಟ್ಟಣ ಠಾಣೆಗೆ ದೂರು ನೀಡಿದ್ದರು. ಅಂದು ರಾಜೀ ಸಂಧಾನದ ಮೂಲಕ ಪ್ರಕರಣ ಬಗೆಹರಿದಿತ್ತು. ಆದರೆ ಅಂದು ಲಘುಪದ ಬಳಿಸಿ ಆಡಿದ್ದ ಮಾತನ್ನೆ ವರಿಷ್ಠರು ಮಾನದಂಡವಾಗಿಟ್ಟುಕೊಂಡು ಇಂದು ಸರಾಗವಾಗಿ ಶಾಂತರಾಜು ಅವರ ಪತ್ನಿ ಪುಷ್ಪಲತಾ ಅವರಿಗೆ ದೊರಕಬೇಕಿದ್ದ ಅಧ್ಯಕ್ಷ ಸ್ಥಾನ ಲಭಿಸದಂತೆ ಮಾಡಿತು ಎನ್ನಲಾಗಿದೆ. ಏನಿದು ಪ್ರಕರಣ?: ಕೊಳ್ಳೇಗಾಲ ನಗರಸಭೆಯ ಅಧ್ಯಕ್ಷ ಗಾದಿಗೆ ರೇಖಾ ರಮೇಶ್, ಪುಷ್ಪಲತಾ ಶಾಂತರಾಜು ನಡುವೆ ಭಾರೀ ಪೈಪೋಟಿ ನಡೆದಿತ್ತು. ಎಷ್ಟರ ಮಟ್ಟಿಗೆ ಎಂದರೆ ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕೀಯ ಉಂಟಾಗಿ ಗೊಂದಲ ಉಂಟಾಗಿತ್ತು. ಮಾಜಿ ಅದ್ಯಕ್ಷ ರಮೇಶ್ ಅವರು ತಮ್ಮ ಪತ್ನಿಗೆ ರೇಖಾ ಅವರಿಗೆ ಮತ್ತೊಂದು ಅವಧಿಗೆ ಅಧ್ಯಕ್ಷ ಸ್ಥಾನ ನೀಡಿ ಎಂದು ವರಿಷ್ಟರ ಮುಂದೆ ಬೇಡಿಕೆ ಇಟ್ಟು ತೀವ್ರ ಲಾಬಿ ನಡೆಸಿದರು. ಬೀಮನಗರದ ಮುಖಂಡರು, ಯಜಮಾನರಿಂದಲೂ ಒತ್ತಡ ತಂತ್ರ ಹೇರುವ ಮೂಲಕ ತೀವ್ರ ಲಾಬಿ ನಡೆಸಿದ್ದರು.ಜಲ ದರ್ಶಿನಿಯಲ್ಲಿ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಜಟಾಪಟಿ:ಮೈಸೂರಿನ ಜಲದರ್ಶಿನಿಯಲ್ಲಿ ಬುಧವಾರ ರಾತ್ರಿ ನಡೆದ ಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಹಾಗೂ ಉಗ್ರಾಣ ನಿಗಮದ ಅಧ್ಯಕ್ಷ ಜಯಣ್ಣ ಅವರಿಗೂ ಜಟಾಪಟಿ ನಡೆದಿದೆ ಎಂದು ಬಲ್ಲಮೂಲಗಳು ಖಚಿತಪಡಿಸಿವೆ.
ಅಧ್ಯಕ್ಷ- ಉಪಾಧ್ಯಕ್ಷರ ಹೆಸರು ಅಂತಿಮಗೊಳಿಸುವ ವಿಚಾರದಲ್ಲಿ ಶಾಸಕರೇ ಪಾರುಪತ್ಯ ಸಾಧಿಸಿದ ಹಿನ್ನೆಲೆ ಉಗ್ರಾಣ ನಿಗಮದ ಅಧ್ಯಕ್ಷ ಜಯಣ್ಣ ಅವರು ಗರಂ ಆದರು ಎನ್ನಲಾಗಿದೆ. ಜಯಣ್ಣ ಅವರು ತಿರುಗಿಬೀಳುತ್ತಿದ್ದಂತೆ ಶಾಸಕ ಕೃಷ್ಣಮೂರ್ತಿ ಸಹ ಗರಂ ಆಗಿ ನೀವು ಧ್ರುವನಾರಾಯಣ ಅವರನ್ನು ಹೆದರಿಸುತ್ತಿದ್ದಂತೆ ನನ್ನ ಹೆದರಿಸಲು ಸಾಧ್ಯವಿಲ್ಲ , ಎಲ್ಲವೂ ನೀವು ಹೇಳಿದಂತೆ ನಡೆಯಲೂ ಆಗಲ್ಲ, ಹಾಗಾದರೆ ನಾನು ಶಾಸಕನಾಗಿ ಏನು ಪ್ರಯೋಜನ? ಎಂದು ಹೇಳುತ್ತಿದ್ದಂತೆ. ಬಳಿಕ ಕೆಲ ಮುಖಂಡರ ಆಗಮನದ ಬಳಿಕ ಇಬ್ಬರು ಮೌನ ವಹಿಸಿ ತೆರಳಿದರು ಎಂದು ಬಲ್ಲ ಮೂಲಗಳು ಖಚಿತಪಡಿಸಿವೆ.ಈ ಮಧ್ಯೆ ಕೊಳ್ಳೇಗಾಲ ಪಟ್ಟಣದಲ್ಲಿ ಸಂಸದ ಸುನೀಲ್ ಬೋಸ್ ಪ್ರತಿಕ್ರಿಯೆ ನೀಡಿ ಕೊಳ್ಳೇಗಾಲ ನಗರಸಭೆಯ ಅಧ್ಯಕ್ಷ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ, ಯಾವುದೆ ಜಟಾಪಟಿ, ಗೊಂದಲ ನಡೆದಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿದಿದೆ ಅಷ್ಟೆ ಎಂದರು. ಕಾಂಗ್ರೆಸ್ ತಂತ್ರ ಬಿಜೆಪಿ ಅತಂತ್ರ
ಕೊಳ್ಳೇಗಾಲ ನಗರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಬೇಕಿದ್ದ ಬಿಜೆಪಿ ಅಭ್ಯರ್ಥಿಗೆ ಸೂಚಕರು, ಅನುಮೋದಕರು ಸಹಿ ಹಾಕದಂತೆ ಮಾಡಿ ಬಿಜೆಪಿಯನ್ನು ಅತಂತ್ರ ಸ್ಥಿತಿಗೆ ದೂಡುವಲ್ಲಿ ಕೈಪಾಳೇಯ ಮೇಲುಗೈ ಸಾಧಿಸಿದ ಘಟನೆಗೆ ನಗರಸಭೆ ಚುನಾವಣೆ ಸಾಕ್ಷಿಯಾಯಿತು.ನಗರಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಗೆಲುವು ಸಾಧಿಸಿದ್ದ 13ಮಂದಿಗೂ ಪಕ್ಷ ವಿಪ್ ಜಾರಿ ಮಾಡಿತ್ತು , ಈ ಹಿನ್ನೆಲೆ ಉಪಾಧ್ಯಕ್ಷ ಸ್ಥಾನಕ್ಕೆ ಮಾತ್ರ ಚಿಂತು ಪರಮೇಶ್ ಅವರನ್ನು ಅಭ್ಯರ್ಥಿ ಎಂದು ಆಯ್ಕೆ ಮಾಡಿ ವರಿಷ್ಠರು ಕ್ರಮಕೈಗೊಂಡಿದ್ದರು. ಉಪಾಧ್ಯಕ್ಷ ಅಭ್ಯರ್ಥಿ ನಾಮಪತ್ರ ಸಲ್ಲಿಸಬೇಕಾದರೆ ಇಬ್ಬರು ಸದಸ್ಯರು ಅನುಮೋದಕರು ಹಾಗೂ ಸೂಚಕರಾಗಿ ಸಹಿ ಹಾಕಬೇಕು, ಈ ವೇಳೆ ಸಹಿ ಹಾಕಲು ಹಿಂದೇಟು ಹಾಕಿ ಬಿಜೆಪಿ ಚಿಹ್ನೆಯಿಂದ ಗೆದ್ದ 12 ಮಂದಿಯೂ ವರಿಷ್ಠರಿಗೆ ಕೈಕೊಟ್ಟ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸದ ಪರಿಸ್ಥಿತಿ ನಿರ್ಮಾಣವಾಯಿತು. ಬಿಜೆಪಿಯ 12 ಮಂದಿಯೂ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾತುಕತೆ ನಡೆಸಿ ಚುನಾವಣೆಯಲ್ಲಿ ಬೆಂಬಲ ಸೂಚಿಸಿದ ಹಿನ್ನೆಲೆ 12ಮಂದಿಯ ಪೈಕಿ ಯಾರು ಸಹ ಸಹಿ ಹಾಕಲಿಲ್ಲ ಎನ್ನಲಾಗಿದೆ. 13ಮಂದಿ ಪೈಕಿ 12 ಮಂದಿಯನ್ನು ಕಾಂಗ್ರೆಸ್ ನತ್ತ ಮುಖ ಮಾಡುವಲ್ಲಿ ಮಾಜಿ ಅದ್ಯಕ್ಷ ರಮೇಶ್, ಸದಸ್ಯ ಸುರೇಶ್, ಮಂಜುನಾಥ್ ಇನ್ನಿತರ ತಂತ್ರಗಾರಿಕೆ ಶಾಸಕ ಕೃಷ್ಣಮೂರ್ತಿ ಗೇಮ್ ಪ್ಲಾನ್ ಮಾಡಿದ ಹಿನ್ನೆಲೆ 13 ಬಿಜೆಪಿ ಸದಸ್ಯರ ಪೈಕಿ 12ಮಂದಿ ಬಿಜೆಪಿ ಪಾಳೇಯದಿಂದ ಅಂತರ ಕಾಯ್ದುಕೊಂಡ ವಿಚಾರ ವ್ಯಾಪಕ ಚರ್ಚೆಗೆ ಗ್ರಾಸವಾಯಿತು.