ಸತತ ಪರಿಶ್ರಮದಿಂದ ಜೀವನದಲ್ಲಿ ಗೆಲುವು ನಿಶ್ಚಿತ: ಡಾ.ನಾಗರಾಜಪ್ಪ

| Published : Jul 17 2024, 12:52 AM IST

ಸತತ ಪರಿಶ್ರಮದಿಂದ ಜೀವನದಲ್ಲಿ ಗೆಲುವು ನಿಶ್ಚಿತ: ಡಾ.ನಾಗರಾಜಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ದೇಶೀಯ ವಿದ್ಯಾ ಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಐಕ್ಯೂಎಸಿ ಘಟಕದಿಂದ ಡಿವಿಎಸ್ ಸಾರಂಗ್ 2024ರ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ವಿದ್ಯಾರ್ಥಿಗಳು ಶಾಲಾ ಕಾಲೇಜಿನ ಹಂತದಿಂದಲೇ ಪರಿಶ್ರಮ ವಹಿಸಿ ಮುನ್ನಡೆದರೆ ಜೀವನದಲ್ಲಿ ಯಶಸ್ಸು ನಿಶ್ಚಿತ ಎಂದು ದಾವಣಗೆರೆ ಯುಬಿಡಿಟಿಸಿಇ ಕಾಲೇಜಿನ ಪ್ರಾಚಾರ್ಯ ಡಾ.ಡಿ.ಪಿ.ನಾಗರಾಜಪ್ಪ ಹೇಳಿದರು.

ಇಲ್ಲಿನ ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಐಕ್ಯೂಎಸಿ ಘಟಕದಿಂದ ಕುವೆಂಪು ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಡಿವಿಎಸ್ ಸಾರಂಗ್ 2024ರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಸಣ್ಣ ಸಣ್ಣ ಹುದ್ದೆ ಅಲಂಕರಿಸಿದರೂ ಸಂಪೂರ್ಣ ಮನಸ್ಸಿನಿಂದ ಕೆಲಸ ಮಾಡಿದಾಗ ಜೀವನದಲ್ಲಿ ಉನ್ನತ ಹಂತಕ್ಕೇರಲು ಸಾಧ್ಯವಿದೆ ಎಂದು ತಿಳಿಸಿದರು.

ದಾವಣಗೆರೆ ಯುಬಿಡಿಟಿಸಿಇ ಕಾಲೇಜಿನ ಡೀನ್ ಡಾ.ಎಸ್.ಮಂಜಪ್ಪ ಮಾತನಾಡಿ, ಇತ್ತೀಚೆಗೆ ವಿದ್ಯಾರ್ಥಿಗಳು ಅಧ್ಯಯನ ಹೊರತುಪಡಿಸಿ ಬೇರೆ ವಿಷಯಗಳ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದು, ಮೊಬೈಲ್‌ನಲ್ಲಿ ಹೆಚ್ಚು ಸಮಯ ವ್ಯರ್ಥ ಮಾಡ ಬಾರದು. ಶಿಕ್ಷಣದಲ್ಲಿ ಪರಿಶ್ರಮಪಟ್ಟರೆ ಜೀವನದಲ್ಲಿ ಫಲ ಸಿಗುತ್ತದೆ ಎಂದು ತಿಳಿಸಿದರು.

ದೇಶೀಯ ವಿದ್ಯಾಶಾಲಾ ಸಮಿತಿ ಕಾರ್ಯದರ್ಶಿ ಎಸ್.ರಾಜಶೇಖರ್ ಮಾತನಾಡಿ, ಸಾಂಸ್ಕೃತಿಕ ವೇದಿಕೆಗಳು ವಿದ್ಯಾರ್ಥಿ ಗಳಲ್ಲಿನ ಪ್ರತಿಭೆ ಅನಾವರಣಗೊಳಿಸಲು ಸಹಕಾರಿಯಾಗುತ್ತದೆ. ತಮ್ಮಲ್ಲಿರುವ ವಿಶೇಷ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಇದೇ ವೇಳೆ ಬಹುಮಾನ ವಿತರಿಸಲಾಯಿತು. ದೇಶೀಯ ವಿದ್ಯಾಶಾಲಾ ಸಮಿತಿ ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ ಅಧ್ಯಕ್ಷತೆ ವಹಿಸಿದ್ದರು. ದೇಶೀಯ ವಿದ್ಯಾಶಾಲಾ ಸಮಿತಿ ಉಪಾಧ್ಯಕ್ಷ ಎಸ್.ಪಿ. ದಿನೇಶ್, ಖಜಾಂಚಿ ಬಿ.ಗೋಪಿನಾಥ್, ಐಕ್ಯೂಎಸಿ ಸಂಯೋಜಕ ಪ್ರೊ.ಎನ್.ಕುಮಾರಸ್ವಾಮಿ, ಸಾಂಸ್ಕೃತಿಕ ಸಂಯೋಜಕಿ ಎನ್.ಕೇತನಾ ಆರ್ತಿ, ರಾಜೇಶ್ವರಿ ಉಪಸ್ಥಿತರಿದ್ದರು.