ರಾಮನಗರ: ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಶೇಷ ಲೋಕ ಅದಾಲತ್​ನಲ್ಲಿ ಹಲವು ಪ್ರಕರಣಗಳು ಇತ್ಯರ್ಥವಾಗಿದ್ದು, ಇದು ಸಾರ್ವಜನಿಕರಿಗೆ ಅನುಕೂಲಕರವಾಗಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಎಂ.ಎಚ್.ಅಣ್ಣಯ್ಯನವರ ಹೇಳಿದರು

ರಾಮನಗರ: ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಶೇಷ ಲೋಕ ಅದಾಲತ್​ನಲ್ಲಿ ಹಲವು ಪ್ರಕರಣಗಳು ಇತ್ಯರ್ಥವಾಗಿದ್ದು, ಇದು ಸಾರ್ವಜನಿಕರಿಗೆ ಅನುಕೂಲಕರವಾಗಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಎಂ.ಎಚ್.ಅಣ್ಣಯ್ಯನವರ ಹೇಳಿದರು.

ನಗರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಆಯೋಜಿಸಿದ್ದ ವಿಶೇಷ ಲೋಕ ಅದಾಲತ್​ನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ 77 ವರ್ಷದ ವಯೋವೃದ್ಧನ ಪ್ರಕರಣವೊಂದನ್ನು ಬಗೆಹರಿಸಲಾಯಿತು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನ್ಯಾ.ಎಂ.ಎಚ್.ಅಣ್ಣಯ್ಯನವರ, ಲೋಕ ಅದಾಲತ್​ನಲ್ಲಿ ಹಲವು ಪ್ರಕರಣಗಳು ಇತ್ಯರ್ಥವಾಗುತ್ತಿದೆ. ಅಲ್ಲದೇ ಇದರಿಂದ ಜನರಿಗೆ ಹಣ ಮತ್ತು ಸಮಯ ಉಳಿತಾಯವಾಗುತ್ತಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಕರಣಗಳ ವಿಚಾರಣೆ ಸಾರ್ವಜನಿಕರಿಗೆ ಮತ್ತಷ್ಟು‌ ಅನುಕೂಲಕರವಾಗಿದೆ ಎಂದರು.

ಏನಿದು ಪ್ರಕರಣ:

ಜಿಲ್ಲೆಯ ಕನಕಪುರ ತಾಲೂಕಿನ ಕಸಬಾ ಹೋಬಳಿ, ರಾಯಸಂದ್ರದಲ್ಲಿ ಕರ್ನಾಟಕ ಗೃಹ ಮಂಡಳಿ ವತಿಯಿಂದ ನಿವೇಶನ/ ಮನೆಗಳನ್ನು ಕಟ್ಟುವ ಉದ್ದೇಶಕ್ಕಾಗಿ ನಾಗಮ್ಮ ಎಂಬುವವರಿಗೆ ಸೇರಿದ ಜಮೀನನ್ನು ಭೂಸ್ವಾಧೀನ ಪಡಿಸಿಕೊಳ್ಳಲಾಗಿತ್ತು.

ಭೂಸ್ವಾಧೀನ ಕಾಯ್ದೆ 1894ರ ಕಲಂ 4(1)ರ ಅಧಿಸೂಚನೆ ಅನ್ವಯ 1.8 ಎಕರೆ ಜಮೀನು ವಶಪಡಿಸಿಕೊಂಡಿರುವುದನ್ನು ಪ್ರಶ್ನಿಸಿ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.‌ 8 ವರ್ಷಗಳ ಹಳೆಯ ಪ್ರಕರಣ ಇತ್ಯರ್ಥಗೊಂಡಿದೆ ಎಂದು ನ್ಯಾಯಾಧೀಶರು ತಿಳಿಸಿದರು.

ವಿಸಿ ಮೂಲಕ ಇತ್ಯರ್ಥ:

ಸರ್ವೆ ನಂ. 20/1 1.8 ಗುಂಟೆ ಜಮೀನು ಭೂಸ್ವಾಧೀನಾಧಿಕಾರಿಗಳು ಭೂಸ್ವಾಧೀನಪಡಿಸಿಕೊಂಡಿದ್ದು, ಅದರ ಪ್ರಕಾರ ಅವರಿಗೆ ಬರುವ ಹಣ ನ್ಯಾಯಾಲಯದಲ್ಲಿ ಡೆಪಾಸಿಟ್ ಆಗಿತ್ತು. ಪರಿಹಾರ ಕೇಳಿ ದಾವೆ ಹೂಡಿದ್ದ ನಾಗಮ್ಮ ಮೃತಪಟ್ಟಿದ್ದು, ಈಕೆಗೆ ಮಕ್ಕಳಿಲ್ಲದ ಕಾರಣ ಈಕೆಯ ಪತಿ ಮೂಗಪ್ಪ ಅವರಿಗೆ ಪರಿಹಾರದ ಹಣ ನೀಡುವಂತೆ ಪ್ರಕರಣವನ್ನು ಇತ್ಯರ್ಥ ಪಡಿಸಲಾಗಿದೆ. ಅನಾರೋಗ್ಯದ ಕಾರಣ 80 ವರ್ಷದ ವಯೋವೃದ್ಧ ಮೂಗಪ್ಪ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಆತನಿಗೆ ಸವಿಸ್ತಾರವಾಗಿ ತಿಳಿಸಿ ಪ್ರಕರಣ ಬಗೆಹರಿಸಲಾಯಿತು ಎಂದು ಹೇಳಿದರು.

ತಂತ್ರಜ್ಞಾನವನ್ನು ಬಳಸಿಕೊಂಡು ನ್ಯಾಯಾಲಯಗಳಲ್ಲಿರುವ ಪ್ರಕರಣಗಳನ್ನು ಶ್ರೀಘ್ರವಾಗಿ ಪರಿಹರಿಸಲಾಗುತ್ತಿದೆ. ಇದು ಉತ್ತಮ ಬೆಳವಣಿಗೆ. ಇತ್ತಿಚೆಗೆ ಲೋಕ ಅದಾಲತ್​ಗಳು ಹೆಚ್ಚು ಜನಪ್ರಿಯತೆ ಗಳಿಸುತ್ತಿದೆ. ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಲೋಕ ಅದಾಲತ್​ನಲ್ಲಿ ರಾಜಿಗೆ ಮೊದಲು ಆದ್ಯತೆ ನೀಡಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ಸಮಯ ಮತ್ತು ಹಣ ಉಳಿತಾಯವಾಗುತ್ತಿದೆ. ಲೋಕ ಅದಾಲತ್​ ಅನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅಣ್ಣಯ್ಯನವರ ತಿಳಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ.ಪಂಚಾಕ್ಷರಿ, ಹಿರಿಯ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾದ ಪಿ.ಆರ್. ಸವಿತಾ, ಜಿಲ್ಲಾ ಸರ್ಕಾರಿ ವಕೀಲರಾದ ಹರೀಶ್, ಫಿರ್ಯಾದುದಾರರ ವಕೀಲ ಕೆ.ಎಲ್.ಶಿವಕುಮಾರ್, ಹಿರಿಯ ವಕೀಲರಾದ ಸುಬ್ಬಶಾಸ್ತ್ರಿ, ಆರ್.ವಿ.ದೇವರಾಜು ಉಪಸ್ಥಿತರಿದ್ದರು.

26ಕೆಆರ್ ಎಂಎನ್ 3.ಜೆಪಿಜಿ

ರಾಮನಗರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಶೇಷ ಲೋಕ ಅದಾಲತ್ ನಡೆಯಿತು.