ಸಾರಾಂಶ
- ಹೊನ್ನಾಳಿ, ಚನ್ನಗಿರಿಯಲ್ಲಿ ಮುಸ್ಲಿಂ ಸಮಾಜಗಳ ಸಭೆಗಳಲ್ಲಿ ಎಎಸ್‌ಪಿ ಸ್ಯಾಮ್ ವರ್ಗೀಸ್ ಎಚ್ಚರಿಕೆ - - -
ಕನ್ನಡಪ್ರಭ ವಾರ್ತೆ ದಾವಣಗೆರೆ ಚನ್ನಗಿರಿ ತಾಲೂಕಿನ ತಾವರಕೆರೆ ಗ್ರಾಮದ ಮುಸ್ಲಿಂ ಮಹಿಳೆ ಮೇಲೆ ಹಲ್ಲೆ ಮಾಡಿದ ಘಟನೆ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಹಿನ್ನೆಲೆ ಹೊನ್ನಾಳಿ ಪೊಲೀಸ್ ಠಾಣೆ ಹಾಗೂ ಚನ್ನಗಿರಿಯಲ್ಲಿ ಗುರುವಾರ ಚನ್ನಗಿರಿ ಎಎಸ್‌ಪಿ ಸ್ಯಾಮ್ ವರ್ಗೀಸ್ ಅಧ್ಯಕ್ಷತೆಯಲ್ಲಿ ಮುಸ್ಲಿಂ ಸಮಾಜದವರ ಪ್ರತ್ಯೇಕ ಸಭೆಗಳನ್ನು ನಡೆಸಲಾಯಿತು.ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಹೊನ್ನಾಳಿ, ನ್ಯಾಮತಿ ಪೊಲೀಸ್ ಠಾಣೆ ವ್ಯಾಪ್ತಿಗಳ ಪಟ್ಟಣ, ಗ್ರಾಮೀಣ ಮುಸ್ಲಿಂ ಮುಖಂಡರ ಸಭೆಯಲ್ಲಿ ಮಾತನಾಡಿದ ಎಎಸ್‌ಪಿ ಸ್ಯಾಮ್ ವರ್ಗೀಸ್, ನಿಮ್ಮ ನಿಮ್ಮ ಗ್ರಾಮ, ಪಟ್ಟಣಗಳ ವ್ಯಾಪ್ತಿಯಲ್ಲಿ ಯಾವುದೇ ಘಟನೆ ನಡೆದಿದ್ದರೂ ಕಾನೂನು ಮೂಲಕ ಪರಿಹಾರ ಕಂಡುಕೊಳ್ಳಬೇಕೇ ಹೊರತು, ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು ಎಂದರು.
ಯಾವುದೇ ಸಮಸ್ಯೆಗಳಿದ್ದರೆ ತಕ್ಷಣ 112ಗೆ ಕರೆ ಮಾಡಿ ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಧರ್ಮದ ಬಗ್ಗೆ, ವ್ಯಕ್ತಿಗಳ ಬಗ್ಗೆ ಪ್ರಚೋದನಾಕಾರಿ ಹೇಳಿಕೆಗಳನ್ನಾಗಲೀ, ಭಾಷಣಗಳನ್ನಾಗಲೀ ಪೋಸ್ಟ್ ಮಾಡಬಾರದು. ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಎಲ್ಲರೂ ಸಹಕರಿಸಬೇಕು. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಸೂಕ್ತ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದರು.ಅವಳಿ ತಾಲೂಕಿನ ನಿರೀಕ್ಷಕ ಸುನೀಲಕುಮಾರ, ನ್ಯಾಮತಿ ಠಾಣೆ ನಿರೀಕ್ಷಕ ಎನ್.ಎಸ್.ರವಿ ಸೇರಿದಂತೆ ಅಧಿಕಾರಿ, ಸಿಬ್ಬಂದಿ ಇದ್ದರು. ಹೊನ್ನಾಳಿ ಠಾಣೆ ಸರಹದ್ದಿನ ಹೊನ್ನಾಳಿ ಪಟ್ಟಣ, ಕುಂದೂರು, ಕೂಲಂಬಿ, ಸಾಸ್ವೇಹಳ್ಳಿ, ರಾಂಪುರ, ಬೇವಿನಹಳ್ಳಿ, ಚೀಲಾಪುರ, ಹೊಳೆ ಹರಳಹಳ್ಳಿ, ಹನಗವಾಡಿ, ಹುಣಸಘಟ್ಟ, ಮಾವಿನಕೋಟೆ ಗ್ರಾಮಗಳ ಮುಸ್ಲಿಂ ಮುಖಂಡರು, ಮಸೀದಿಗಳ ಮುಖ್ಯಸ್ಥರು, ಮುಸ್ಲಿಂ ಸಮಾಜದವರು ಸಭೆಯಲ್ಲಿದ್ದರು.
ಚನ್ನಗಿರಿ ಸರ್ಕಾರಿ ನೌಕರರ ಭವನದಲ್ಲಿ ಸಭೆ:ಚನ್ನಗಿರಿ ಪಟ್ಟಣದ ತಾಲೂಕು ಸರ್ಕಾರಿ ನೌಕರರ ಭವನದಲ್ಲಿಯೂ ಎಎಸ್‌ಪಿ ಸ್ಯಾಮ್ ವರ್ಗೀಸ್ ಅಧ್ಯಕ್ಷತೆಯಲ್ಲಿ ಮುಸ್ಲಿಂ ಸಮಾಜದ ಮುಖಂಡರು, ಮಸೀದಿಗಳ ಮುಖ್ಯಸ್ಥರು, ಸಮಾಜದ ಪದಾಧಿಕಾರಿಗಳ ಸಭೆ ನಡೆಯಿತು. ಚನ್ನಗಿರಿ ನಿರೀಕ್ಷಕ ರವೀಶ್, ಸಂತೇಬೆನ್ನೂರು ನಿರೀಕ್ಷಕ ಲಿಂಗನಗೌಡ ನೆಗಳೂರು, ಸರ್ದಾರ್ ಅಹಮ್ಮದ್, ಪುರಸಭೆ ಸದಸ್ಯರಾದ ಗೌಸ್ ಪೀರ್, ತನ್ವೀರ್, ನಲ್ಲೂರು ತಾಪಂ ಮಾಜಿ ಸದಸ್ಯ ಉಸ್ಮಾನ್ ಷರೀಫ್, ಚನ್ನಗಿರಿ ತಾಲ್ಲೂಕು ಮುಸ್ಲೀಂ ಸಮಾಜದ ಅಧ್ಯಕ್ಷ ಹೊನ್ನೇಬಾಗಿ ಜಬೀವುಲ್ಲಾ, ಚನ್ನಗಿರಿ, ಸಂತೇಬೆನ್ನೂರು ಠಾಣಾ ವ್ಯಾಪ್ತಿಯ ಚನ್ನಗಿರಿ ಟೌನ್, ಅಗರಬನ್ನಿಹಟ್ಟಿ, ನಲ್ಲೂರು, ಹೊನ್ನೇಬಾಗಿ, ತಾವರಕೆರೆ, ಸಂತೇಬೆನ್ನೂರು, ಕೆರೆಬಿಳಚಿ ಸೇರಿದಂತೆ ಇತರೆ ಗ್ರಾಮಗಳ ಮುಸ್ಲಿಂ ಮುಖಂಡರು ಮತ್ತು ಮಸೀದಿಗಳ ಮುಖ್ಯಸ್ಥರು ಸಭೆಯಲ್ಲಿದ್ದರು.
- - --18ಕೆಡಿವಿಜಿ9, 10:
ತಾವರಕೆರೆ ಮಹಿಳೆ ಮೇಲೆ ಹಲ್ಲೆ ಹಿನ್ನೆಲೆಯಲ್ಲಿ ಎಎಸ್‌ಪಿ ಸ್ಯಾಮ್ ವರ್ಗೀಸ್ ಅಧ್ಯಕ್ಷತೆಯಲ್ಲಿ ಚನ್ನಗಿರಿ, ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕುಗಳ ಮುಸ್ಲಿಂ ಸಮಾಜದ ಮುಖಂಡರು, ಮಸೀದಿಗಳ ಮುಖ್ಯಸ್ಥರ ಸಭೆ ನಡೆಸಲಾಯಿತು.