ಜೂ.3ರಂದು ವಿಧಾನ ಪರಿಷತ್‌ ದ್ವೈವಾರ್ಷಿಕ ಚುನಾವಣೆ

| Published : May 22 2024, 12:54 AM IST / Updated: May 22 2024, 12:55 AM IST

ಸಾರಾಂಶ

ವಿಧಾನ ಪರಿಷತ್ತಿನ ದ್ವೈವಾರ್ಷಿಕ ಚುನಾವಣೆಗೆ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ 11 ಅಭ್ಯರ್ಥಿಗಳು, ನೈರುತ್ಯ ಶಿಕ್ಷಕರ ಕ್ಷೇತ್ರದಿಂದ 8 ಅಭ್ಯರ್ಥಿಗಳು ಹಾಗೂ ನೈರುತ್ಯ ಪದವೀಧರರ ಕ್ಷೇತ್ರದಿಂದ 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕರ್ನಾಟಕ ವಿಧಾನ ಪರಿಷತ್‌ ದ್ವೈವಾರ್ಷಿಕ ಚುನಾವಣೆಗೆ ಸಂಬಂಧಿಸಿದಂತೆ ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರ, ನೈಋತ್ಯ ಶಿಕ್ಷಕರ ಕ್ಷೇತ್ರ ಮತ್ತು ನೈಋತ್ಯ ಪದವೀಧರರ ಕ್ಷೇತ್ರಗಳ ಚುನಾವಣೆಯ ಮತದಾನ ಜೂ.3ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ನಡೆಯಲಿದೆ. ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರ, ನೈಋತ್ಯ ಶಿಕ್ಷಕರ ಕ್ಷೇತ್ರ ಮತ್ತು ನೈಋತ್ಯ ಪದವೀಧರರ ಕ್ಷೇತ್ರಗಳಲ್ಲಿ ಮೇ 20 ಉಮೇದುವಾರಿಕೆ ಹಿಂಪಡೆಯಲು ಅಂತಿಮ ದಿನವಾಗಿತ್ತು. ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ 2, ನೈಋತ್ಯ ಶಿಕ್ಷಕರ ಕ್ಷೇತ್ರದಿಂದ 1 ಹಾಗೂ ನೈಋತ್ಯ ಪದವೀಧರರ ಕ್ಷೇತ್ರದಿಂದ 1 ಅಭ್ಯರ್ಥಿ ನಾಮಪತ್ರಗಳನ್ನು ಹಿಂಪಡೆದಿದ್ದು, ಅಂತಿಮವಾಗಿ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳ ವಿವರ ಇಂತಿದೆ.

ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ 11 ಅಭ್ಯರ್ಥಿಗಳು, ನೈರುತ್ಯ ಶಿಕ್ಷಕರ ಕ್ಷೇತ್ರದಿಂದ 8 ಅಭ್ಯರ್ಥಿಗಳು ಹಾಗೂ ನೈರುತ್ಯ ಪದವೀಧರರ ಕ್ಷೇತ್ರದಿಂದ 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ನೋಟಾ ಆಯ್ಕೆ ಇಲ್ಲ:

ಭಾರತ ಚುನಾವಣಾ ಆಯೋಗ ಸೂಚಿಸಿರುವಂತೆ ಮತದಾರನ ಬೆರಳಿಗೆ ಅಳಿಸಲಾಗದ ಶಾಯಿಯನ್ನು ನೈಋತ್ಯ ಪದವೀಧರರ ಕ್ಷೇತ್ರಕ್ಕೆ ಬಲಗೈ ತೋರುಬೆರಳು, ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಬಲಗೈ ಮಧ್ಯದ ಬೆರಳು ಹಾಗೂ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಬಲಗೈ ತೋರುಬೆರಳಿಗೆ ಹಾಕಲಾಗುವುದು. ಈ ಚುನಾವಣೆಯಲ್ಲಿ ನೋಟಾ ಆಯ್ಕೆ ಇರುವುದಿಲ್ಲ.

ಕರ್ನಾಟಕ ವಿಧಾನ ಪರಿಷತ್ತು ದ್ವೈವಾರ್ಷಿಕ ಚುನಾವಣೆ-2024 ಕ್ಕೆ ಮೂರು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಜಿಲ್ಲಾವಾರು ಮತಗಟ್ಟೆಗಳ ವಿವರ(ಹೆಚ್ಚುವರಿ ಮತಗಟ್ಟೆಗಳು ಸೇರಿ) ಮತ್ತು ಮತದಾರರ ವಿವರ ಇಂತಿದೆ:

ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 21,549 ಮತದಾರರು ಇದ್ದಾರೆ. ಅದರಲ್ಲಿ 11998 ಪುರುಷ ಮತದಾರರು, 9550 ಮಹಿಳಾ ಮತದಾರರು ಮತ್ತು ಒಬ್ಬರು ಇತರೆ ಮತದಾರರು ಇದ್ದಾರೆ. ಒಟ್ಟು 44 ಮತಗಟ್ಟೆಗಳಿವೆ.

ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು ಮತಗಟ್ಟೆ ಸಂಖ್ಯೆ 5, ಒಟ್ಟು ಮತದಾರರು 2181 ಅದರಲ್ಲಿ 1448 ಪುರುಷ ಮತದಾರರು, 733 ಮಹಿಳಾ ಮತದಾರರು ಇದ್ದಾರೆ.

ಹಾಸನ ಜಿಲ್ಲೆಯಲ್ಲಿ ಒಟ್ಟು ಮತಗಟ್ಟೆ 10, ಒಟ್ಟು ಮತದಾರರು 3526 ಅದರಲ್ಲಿ 2085 ಪುರುಷರು ಮತ್ತು 1441 ಮಹಿಳಾ ಮತದಾರರು ಇದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ಒಟ್ಟು 9 ಮತಗಟ್ಟೆಗಳಿದ್ದು, ಒಟ್ಟು 5403 ಮತದಾರರು ಇದ್ದಾರೆ. ಅದರಲ್ಲಿ 3127 ಪುರುಷ ಮತದಾರರು, 2276 ಮಹಿಳಾ ಮತದಾರರು ಇದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಒಟ್ಟು 20 ಮತಗಟ್ಟೆಗಳಿದ್ದು, ಒಟ್ಟು 10439 ಮತದಾರರು ಇದ್ದಾರೆ. ಅದರಲ್ಲಿ 5338 ಪುರುಷರು ಮತ್ತು 5100 ಮಹಿಳಾ ಮತದಾರರು, 1 ಇತರೆ ಮತದಾರರು ಇದ್ದಾರೆ.

ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ (ಚಿಕ್ಕಮಗಳೂರು, ದಕ್ಷಿಣ ಕನ್ನಡ, ದಾವಣಗೆರೆ, ಕೊಡಗು, ಶಿವಮೊಗ್ಗ ಮತ್ತು ಉಡುಪಿ) ಒಟ್ಟು 79 ಮತಗಟ್ಟೆಗಳಿದ್ದು, 23402 ಮತದಾರರು ಇದ್ದಾರೆ. ಅದರಲ್ಲಿ 10487 ಪುರುಷರು ಮತ್ತು 12915 ಮಹಿಳಾ ಮತದಾರರು ಇದ್ದಾರೆ.

ಕೊಡಗು ಜಿಲ್ಲೆಯಲ್ಲಿ 5 ಮತಗಟ್ಟೆಗಳಿದ್ದು, 1578 ಮತದಾರರು ಇದ್ದಾರೆ. ಅದರಲ್ಲಿ 543 ಪುರುಷರು ಮತ್ತು 1035 ಮಹಿಳಾ ಮತದಾರು ಇದ್ದಾರೆ.

ನೈಋತ್ಯ ಪದವೀಧರರ ಕ್ಷೇತ್ರದಲ್ಲಿ (ಚಿಕ್ಕಮಗಳೂರು, ದಕ್ಷಿಣ ಕನ್ನಡ, ದಾವಣಗೆರೆ, ಕೊಡಗು, ಶಿವಮೊಗ್ಗ ಮತ್ತು ಉಡುಪಿ) ಒಟ್ಟು 108 ಮತಗಟ್ಟೆಗಳಿದ್ದು, ಒಟ್ಟು 85089 ಮತದಾರರು ಇದ್ದಾರೆ. ಅದರಲ್ಲಿ 43720 ಪುರುಷ ಮತದಾರರು, 41368 ಮಹಿಳಾ ಮತದಾರರು ಹಾಗೂ 1 ಇತರೆ ಮತದಾರರು ಇದ್ದಾರೆ.

ಕೊಡಗಿನಲ್ಲಿ 6 ಮತಗಟ್ಟೆ

ಕೊಡಗು ಜಿಲ್ಲೆಯಲ್ಲಿ 6 ಮತಗಟ್ಟೆಗಳಿದ್ದು, 3909 ಮತದಾರರು ಇದ್ದಾರೆ. ಅದರಲ್ಲಿ 1699 ಪುರುಷರು ಮತ್ತು 2210 ಮಹಿಳಾ ಮತದಾರರು ಇದ್ದಾರೆ.

ನೀತಿ ಸಂಹಿತೆ:

ಮತದಾರರಿಗೆ ಯಾವುದೇ ವಿಧವಾದ ಆಮಿಷ ಒಡ್ಡುವುದು ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಲಿದ್ದು, ಆಮಿಷ ಒಡ್ಡುತ್ತಿರುವ ಬಗ್ಗೆ ದೂರನ್ನು ಸಂಬಂಧಿಸಿದ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಮತ್ತು ಚುನಾವಣಾ ವೀಕ್ಷಕರಿಗೆ ಸಲ್ಲಿಸಬಹುದು. ಮೂರು ಕ್ಷೇತ್ರಗಳಿಗೆ ಚುನಾವಣಾ ವೀಕ್ಷಕರು(ಅಬ್ಸರ್ವರ್ಸ್) ನೇಮಕಗೊಂಡಿರುತ್ತಾರೆ.

ಕರ್ನಾಟಕ ನೈಋತ್ಯ ಪದವೀಧರರ ಕ್ಷೇತ್ರಕ್ಕೆ ಚುನಾವಣಾ ವೀಕ್ಷಕರಾಗಿ ಅನಿಲ್ ಕುಮಾರ್ ಟಿ.ಕೆ. (ದೂ.ಸಂ. 7204064565), ಕರ್ನಾಟಕ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಹರ್ಷ್ ಗುಪ್ತ (ದೂ.ಸಂ. 7204294565) ಹಾಗೂ ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಡಾ.ರವಿಶಂಕರ್ (ದೂ. ಸಂ. 7204214565) ಅವರನ್ನು ಚುನಾವಣಾ ವೀಕ್ಷಕರಾಗಿ ನೇಮಕ ಮಾಡಲಾಗಿದೆ.

ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರ, ನೈಋತ್ಯ ಶಿಕ್ಷಕರ ಕ್ಷೇತ್ರ ಮತ್ತು ನೈಋತ್ಯ ಪದವೀಧರರ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ವೆಬ್‌ಸೈಟ್ https://rcmysore.karnataka.gov.in ನಲ್ಲಿ ಪ್ರಚಾರ ಪಡಿಸಲಾಗಿದೆ ಎಂದು ಕರ್ನಾಟಕ ವಿಧಾನ ಪರಿಷತ್ತಿನ ನೈಋತ್ಯ ಪದವೀಧರರ ಕ್ಷೇತ್ರ, ನೈಋತ್ಯ ಶಿಕ್ಷಕರ ಕ್ಷೇತ್ರ ಮತ್ತು ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ಡಾ.ಜಿ.ಸಿ.ಪ್ರಕಾಶ್ ತಿಳಿಸಿದ್ದಾರೆ.