ಆಶಾಗಳಿಗೆ ₹15 ಸಾವಿರ ವೇತನ ನಿಗದಿಗಾಗಿ ವಿಧಾನಸೌಧ ಚಲೋ

| Published : Feb 10 2024, 01:47 AM IST

ಸಾರಾಂಶ

ಪ್ರೋತ್ಸಾಹಧನವಿಲ್ಲದ ಹೆಚ್ಚುವರಿ ಕೆಲಸಗಳನ್ನು ಹಾಗೂ ಮೊಬೈಲ್ ಆಧರಿತ ಕೆಲಸಗಳನ್ನು ಒತ್ತಾಯಪೂರ್ವಕವಾಗಿ ನೀಡಬಾರದು.

ಬಳ್ಳಾರಿ: ಆಶಾ ಕಾರ್ಯಕರ್ತೆಯರಿಗೆ ಮಾಸಿಕ ₹15 ಸಾವಿರ ವೇತನ ನಿಗದಿಗೊಳಿಸಬೇಕು. ಆಶಾಗಳ ದುಡಿದ ಹಣಕ್ಕೆ ಕನ್ನ ಹಾಕುವ ಈಗಿರುವ ವೇತನ ಪಾವತಿ ನೀತಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿ ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಫೆ. 13 ಮತ್ತು 14ರಂದು ವಿಧಾನಸೌಧ ಚಲೋ ಹೋರಾಟಕ್ಕೆ ಕರೆ ನೀಡಿದೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಘದ ಜಿಲ್ಲಾ ಗೌರವಾಧ್ಯಕ್ಷೆ ಎ. ಶಾಂತಾ ಹಾಗೂ ಎಐಯುಟಿಯುಸಿ ಜಿಲ್ಲಾಧ್ಯಕ್ಷ ಎ. ದೇವದಾಸ್ ಅವರು, ಆಶಾಗಳಿಗೆ ವೈಜ್ಞಾನಿಕ ವೇತನ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿಧಾನಸೌಧ ಚಲೋ ನಡೆಸಲಾಗುವುದು. ಎರಡು ದಿನಗಳ ಕಾಲ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ರಾಜ್ಯದ ಎಲ್ಲ ಜಿಲ್ಲೆಗಳ ಸಮಾರು 20 ಸಾವಿರಕ್ಕೂ ಹೆಚ್ಚು ಆಶಾಗಳು ಚಳವಳಿಯಲ್ಲಿ ಪಾಲ್ಗೊಳ್ಳುವರು ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಕನಿಷ್ಠ ₹15 ಸಾವಿರ ವೇತನ ನಿಗದಿ ಮಾಡಬೇಕು. ಆಶಾಗಳನ್ನು ವಂಚಿಸುತ್ತಿರುವ ಆರ್‌ಸಿಎಚ್ ಪೋರ್ಟಲ್‌ನ್ನು ವೇತನ ಪಾವತಿ ಪ್ರಕ್ರಿಯೆಯಿಂದ ಡೀಲಿಂಕ್ ಮಾಡಬೇಕು. ಪ್ರೋತ್ಸಾಹಧನವಿಲ್ಲದ ಹೆಚ್ಚುವರಿ ಕೆಲಸಗಳನ್ನು ಹಾಗೂ ಮೊಬೈಲ್ ಆಧರಿತ ಕೆಲಸಗಳನ್ನು ಒತ್ತಾಯಪೂರ್ವಕವಾಗಿ ನೀಡಬಾರದು. ಹಲವು ವರ್ಷಗಳಿಂದ ಬಾಕಿಯಿರುವ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಗಳಾಗಿವೆ ಎಂದರು.

8 ವರ್ಷಗಳ ಹಿಂದೆ ರಾಜ್ಯ ಸರ್ಕಾರ ಜಾರಿಗೊಳಿಸಿದ ಆರ್‌ಸಿಎಚ್ ಪೋರ್ಟಲ್‌ಗೆ ಲಿಂಕ್ ಮಾಡಿ ನೀಡುವ ವೇತನ ಮಾದರಿ ಆಶಾ ಕಾರ್ಯಕರ್ತೆಯರಿಗೆ ದೊಡ್ಡ ಶಾಪವಾಗಿ ಪರಿಣಮಿಸಿದೆ. ಆರ್‌ಸಿಎಚ್ ಪೋರ್ಟಲ್‌ನ ಸಮಸ್ಯೆಗಳಿಂದ ದೊಡ್ಡ ಮೊತ್ತದ ನಷ್ಟಕ್ಕೆ ಒಳಗಾಗಿದ್ದಾರೆ. ಆಶಾಗಳು ಕಷ್ಟಪಟ್ಟು ದುಡಿದ ಹಣ ಸೋರಿಕೆಯಾಗುತ್ತಲೇ ಇದೆ. ಈ ಹಣ ಎಲ್ಲಿ ಹೋಗುತ್ತಿದೆ ಎಂಬ ಪ್ರಶ್ನೆ ಆಶಾಗಳನ್ನು ಕಾಡುತ್ತಲೇ ಇದೆ. ಇದನ್ನು ಸರಿಪಡಿಸುವಂತೆ ಸಂಘವು ಸಾಕಷ್ಟು ಬಾರಿ ಪ್ರತಿಭಟನೆ ನಡೆಸಿದೆ. ಆರೋಗ್ಯ ಸಚಿವರ ಹಾಗೂ ಉನ್ನತ ಅಧಿಕಾರಿಗಳ ಉಪಸ್ಥಿತಿಯಲ್ಲಿ ಹಲವು ಸುತ್ತಿನ ಮಾತುಕತೆ ನಡೆಸಿದೆ. ಸಾಕಷ್ಟು ದಾಖಲೆಗಳನ್ನ ಸಹ ಸಂಘವು ನೀಡಿದೆ. ಆದರೂ ಆರೋಗ್ಯ ಇಲಾಖೆ ಹೇಗಾದರೂ ಈ ಪೋರ್ಟಲ್‌ಗೆ ಲಿಂಕ್ ಮಾಡಿ ಪ್ರೋತ್ಸಾಹಧನ ನೀಡುವ ಮಾದರಿಯನ್ನು ಉಳಿಸಿಕೊಳ್ಳುವ ತನ್ನ ಹಠಮಾರಿ ಧೋರಣೆನ್ನು ಮುಂದುವರಿಸಿದೆ ಎಂದು ದೂರಿದರು.

ಸಂಘದ ಜಿಲ್ಲಾ ಪ್ರಮುಖರಾದ ರೇಷ್ಮಾ ಹಾಗೂ ಹಸೀನಾ ಸುದ್ದಿಗೋಷ್ಠಿಯಲ್ಲಿದ್ದರು.