ನಾಳೆ ವಿಧಾನಸೌಧಕ್ಕೆ ಮುತ್ತಿಗೆ: ಬೈರೇಗೌಡ
KannadaprabhaNewsNetwork | Published : Oct 03 2023, 06:01 PM IST
ನಾಳೆ ವಿಧಾನಸೌಧಕ್ಕೆ ಮುತ್ತಿಗೆ: ಬೈರೇಗೌಡ
ಸಾರಾಂಶ
ರಾಮನಗರ: ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿ ಹಾಗೂ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ನೇತೃತ್ವದಲ್ಲಿ ಅ.4ರಂದು ಪಾದಯಾತ್ರೆ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಎ.ಎಲ್. ಬೈರೇಗೌಡ ತಿಳಿಸಿದರು.
ರಾಮನಗರ: ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿ ಹಾಗೂ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ನೇತೃತ್ವದಲ್ಲಿ ಅ.4ರಂದು ಪಾದಯಾತ್ರೆ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಎ.ಎಲ್. ಬೈರೇಗೌಡ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರಸೀಕೆರೆಯಿಂದ ಬೆಂಗಳೂರು ವಿಧಾನಸೌಧದವರೆಗೆ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆಸುತ್ತಿರುವ ಪಾದಯಾತ್ರೆ ಅ.4 ರಂದು ಬೆಂಗಳೂರಿಗೆ ಬರಲಿದ್ದು,ಅಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದರು. ರಾಜ್ಯದಲ್ಲಿ ಬರಗಾಲ ತಾಂಡವಾಡುತ್ತಿದ್ದರೂ ಬರಗಾಲದ ಕಾರ್ಯಕ್ರಮ ರೂಪಿಸದೆ ಕೇವಲ ಉತ್ಸವಮೂರ್ತಿಗಳಂತೆ ಆಡಳಿತ ನಡೆಸುತ್ತಿದ್ದು ರೈತರನ್ನು ಸರ್ಕಾರ ಮರೆತಿದೆ. ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರು ನೀರಿಲ್ಲದೆ ಬರದ ನೆರಳಲ್ಲಿ ಬದುಕು ನಡೆಸುವಂತಾಗಿದೆ. ಬಿತ್ತನೆ ಮಾಡಲು ಆಗಿಲ್ಲ. ಜನ ಜಾನುವಾರು ನೀರಿನ ಭವಣೆ ಎದುರಿಸುತ್ತಿವೆ. ಕಾವೇರಿ ಕಣಿವೆಯಲ್ಲಿ ನೀರು ಬರಿದಾಗಿದೆ. ಬೆಂಗಳೂರು ಮಹಾನಗರಕ್ಕೆ ಕೆಲವೇ ದಿನಗಳಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗಲಿದೆ. ಇಂತಹ ಸಂಧರ್ಭದಲ್ಲಿ ತಮಿಳುನಾಡಿಗೆ ನೀರು ಬಿಟ್ಟು ಈ ರಾಜ್ಯದ ರೈತರಿಗೆ, ಜನರಿಗೆ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ದೂರಿದರು. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿಲ್ಲ ಚುನಾವಣಾ ಪೂರ್ವದಲ್ಲಿ ಕೃಷಿ ಕಾಯ್ದೆ ರದ್ದುಗೊಳಿಸುತ್ತೇವೆ. ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತರುತ್ತೇವೆ ಎಂದು ಹೇಳಿದ್ದರು. ಆದರೆ ಆಡಳಿತಕ್ಕೆ ಬಂದರೂ ಗಮನ ನೀಡಿಲ್ಲ. ಕೊಟ್ಟ ಮಾತು ಮರೆತಿದ್ದಾರೆ. ಹಾಲಿಗೆ 2 ರು. ಪ್ರೋತ್ಸಾಹಧನ ನೀಡಲಿಲ್ಲ. ಕೂಡಲೇ ರಾಜ್ಯ ಸರ್ಕಾರ ನೀರು ನಿಲ್ಲಿಸಬೇಕು ರೈತರಿಗೆ ಕಬ್ಬು, ಹಾಲಿಗೆ ಪ್ರೋತ್ಸಾಹಧನ ನೀಡಬೇಕು ಎಂದು ಆಗ್ರಹಿಸಿದರು. ಸುದ್ಧಿಗೋಷ್ಟಿಯಲ್ಲಿ ಜಿಲ್ಲಾ ರೈತ ಸಂಘದ ಗೌರವಾಧ್ಯಕ್ಷ ಮಾದೇಗೌಡ, ರೈತ ಮುಖಂಡ ಬೈರಾಜ್ ಇತರರಿದ್ದರು. 2ಕೆಆರ್ ಎಂಎನ್ 6.ಜೆಪಿಜಿ ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್. ಬೈರೇಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.