ನಿಘಂಟು ಪರಾಮರ್ಶನ ಗ್ರಂಥಗಳ ಸಂರಕ್ಷಣೆ

| Published : Jul 13 2025, 01:18 AM IST

ಸಾರಾಂಶ

ಮೈಸೂರು ವಿವಿಯಲ್ಲಿ 1940ರ ಸುಮಾರಿಗೆ ನಿಘಂಟು ತರುವ ಕಾರ್ಯ ಆರಂಭಗೊಂಡಿತು.

ಕನ್ನಡಪ್ರಭ ವಾರ್ತೆ ಮೈಸೂರುಶತಮಾನೋತ್ಸವ ಪೂರೈಸಿರುವ, ಭಾರತದ ದೇಶಿ ಭಾಷೆಗಳ ವಿಶ್ವವಿದ್ಯಾನಿಲಯಗಳಿಗೆ ಹಿರಿಯನಂತಿರುವ ಮೈಸೂರು ವಿವಿ ಪ್ರಸಾರಾಂಗದ ಪ್ರತಿಷ್ಠಿತ ಯೋಜನೆ ಇಂಗ್ಲಿಷ್ - ಕನ್ನಡ ನಿಘಂಟು. ಈ ಮಹತ್ವ ಪೂರ್ಣ ಕಾರ್ಯಕ್ಕೆ ದೇಶ ವಿದೇಶಗಳ ನಿಘಂಟುಗಳನ್ನು ಪರಾಮರ್ಶನ ಗ್ರಂಥಗಳನ್ನಾಗಿ ಬಳಸಿ ವಿದ್ವತ್‌ ಪೂರ್ಣ ನಿಘಂಟು ರೂಪಿಸಲಾಗಿದೆ.ನಿಘಂಟು ರೂಪಿಸುವಾಗ ಬಳಸಲಾಗಿದ್ದು, ಗೋದಾಮುವಿನಲ್ಲಿ ಅಜ್ಞಾತವಾಗಿ ಉಳಿದಿದ್ದ ಸುಮಾರು 400ಕ್ಕೂ ಹೆಚ್ಚು ಅಮೂಲ್ಯ ನಿಘಂಟುಗಳನ್ನು ಪ್ರಸಾರಾಂಗದ ನಿರ್ದೇಶಕ ಡಾ. ನಂಜಯ್ಯ ಹೊಂಗನೂರು ಅವರು ಪತ್ತೆ ಮಾಡಿದ್ದಾರೆ. ಅವು ಒಂದೊಂದು ಕೃತಿಯೂ ನಿಘಂಟು ರೂಪಿಸಲು ವಹಿಸಿರುವ ಶ್ರಮಕ್ಕೆ ಸಾಕ್ಷಿಯಾಗಿವೆ.ಮೈಸೂರು ವಿವಿಯಲ್ಲಿ 1940ರ ಸುಮಾರಿಗೆ ನಿಘಂಟು ತರುವ ಕಾರ್ಯ ಆರಂಭಗೊಂಡಿತು. ಮೊದಲಿಗೆ 1480 ಪುಟಗಳ ಒಂದು ನಿಘಂಟು ತರಲಾಯಿತು. ಕಾಲಾಂತರದಲ್ಲಿ ನಾಲ್ಕು ಸಂಪುಟಗಳನ್ನಾಗಿ ರೂಪಿಸಲಾಯಿತು. ಶ್ರೇಷ್ಠತೆ, ಉತ್ಕೃಷ್ಟತೆಯಲ್ಲಿ ಮೈಸೂರು ವಿವಿ ನಿಘಂಟು ಹೆಸರುವಾಸಿ.ಅಂದಿನ ವಿದ್ವಾಂಸರು, ಭಾಷಾ ತಜ್ಞರು, ಪ್ರಸಿದ್ಧ ಲೇಖಕರು ವಿದ್ವತ್ ಪೂರ್ಣ ನಿಘಂಟನ್ನು ತರಬೇಕೆಂದು ಜಗತ್ತಿನ ಬೇರೆ ಬೇರೆ ಭಾಗಗಳ ವಿವಿಯೊಂದಿಗೆ ಪತ್ರ ವ್ಯವಹಾರ ನಡೆಸಿ ನಿಘಂಟು ತರಿಸಿಕೊಂಡು ಅಧ್ಯಯನ ನಡೆಸಿದ್ದಾರೆ. ಪ್ರಸಾರಾಂಗದ ಗೋದಾಮಿನಲ್ಲಿ ದಾಸ್ತಾನು ಪರಿಶೀಲಿಸುವಾಗ ಅಜ್ಞಾತವಾಗಿ ಉಳಿದಿದ್ದ ನಿಘಂಟುಗಳು ಪತ್ತೆಯಾದವು. ಸುಮಾರು 2 ದಶಕಗಳಿಂದ ಈ ಗ್ರಂಥಗಳು ಯಾರ ಗಮನಕ್ಕೂ ಬಂದಿರಲಿಲ್ಲ. ಅವುಗಳನ್ನು ಪರಿಶೀಲಿಸಿದಾಗ ನಿಘಂಟು ತಯಾರಿಸುವಾಗ ತರಿಸಲಾದ ಪುಸ್ತಕಗಳೆಂಬುದು ಗಮನಕ್ಕೆ ಬಂದಿತು ಎಂದು ಡಾ. ನಂಜಯ್ಯ ಹೊಂಗನೂರು ವಿವರಿಸಿದರು.

ಲಂಡನ್, ಇಂಗ್ಲೆಂಡ್, ನ್ಯೂಯಾರ್ಕ್, ಯುಎಸ್‌ಎ, ಆಕ್ಸಫರ್ಡ್ ವಿವಿ, ಹಿಟನ್ ಬರ್ಗ್, ಕೇಂಬ್ರಿಡ್ಜ್, ಚಿಕಾಗೋ, ಹಾಂಕ್‌ಕಾಂಗ್‌, ಸಿಂಗಾಪೂರ್, ನೆದರ್‌ ಲ್ಯಾಂಡ್, ದೆಹಲಿ, ವಾರಾಣಸಿ, ಮದ್ರಾಸ್, ಅಸ್ಸಾಂ, ಪೂನಾ, ಪ್ರಯಾಗ್, ಬಾಂಬೆ, ಅಲಹಬಾದ್, ಕೋಲ್ಕತ್ತಾ ವಿವಿಗಳಿಂದ, ಮಂಗಳೂರು, ಗದಗ, ಮೈಸೂರು, ಧಾರವಾಡ, ಕರ್ನಾಟಕ ಸರ್ಕಾರದ ನಾನಾ ಪ್ರಕಟಣೆಗಳನ್ನು ತರಿಸಿಕೊಂಡು ವಿದ್ವಾಂಸರು ತಳಸ್ಪರ್ಶಿಯಾಗಿ ಅಧ್ಯಯನ ಮಾಡಿದ್ದಾರೆ.ಆಕ್ಸ್ಫರ್ಡ್ ನಿಘಂಟು 1878 ರಲ್ಲಿ ಆರಂಭವಾಗಿ 1933ರಲ್ಲಿ ಪೂರ್ಣಗೊಂಡಿತು. ಸುಮಾರು 55 ವರ್ಷಗಳ ಕಾಲ ಅಧ್ಯಯನ ನಡೆಸಿ ಆಕ್ಸ್‌ಫರ್ಡ್‌ ನಿಘಂಟು ರೂಪಿಸಲಾಗಿದೆ. ಮೂಲ ಕೃತಿ ಪ್ರಸಾರಾಂಗದಲ್ಲಿದೆ.ನಿಂಘಟು ರಚನೆ ಮತ್ತು ಪರಿಷ್ಕರಣೆ ವೇಳೆ ತರಿಸಲಾದ 381 ಕೃತಿಗಳು ಸುಸ್ಥಿತಿಯಲ್ಲಿದ್ದವು. ಅವುಗಳನ್ನು ರಕ್ಷಣೆ ಮಾಡಿ ದಾಖಲಿಸಿದ್ದೇವೆ. ಮುಂದೆ ಯಾರೇ ಪ್ರಸಾರಾಂಗದ ನಿರ್ದೇಶಕರಾದರೂ ಆ ಕೃತಿಗಳನ್ನು ರಕ್ಷಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.ಪ್ರಸಾರಾಂಗದ ಅಧೀಕ್ಷಕ ಚನ್ನಬಸಪ್ಪ, ಸಿಬ್ಬಂದಿ ವಿನೋದ, ಪ್ರದೀಪ್, ಅನುಷಾ ಸೇರಿ ಎಲ್ಲ ಸಿಬ್ಬಂದಿ ವರ್ಗ ನಿಘಂಟು ಸಂರಕ್ಷಣೆ ಕಾರ್ಯಕ್ಕೆ ಸಹಕರಿಸಿದ್ದಾರೆ.---ಕೋಟ್ ತಂತ್ರಜ್ಞಾನ ಬಳಕೆಯೇ ಇಲ್ಲದ ಕಾಲದಲ್ಲಿ ನಮ್ಮ ವಿದ್ವಾಂಸರು ಅತ್ಯಂತ ಶ್ರಮವಹಿಸಿ ಜಗತ್ತಿನ ನಿಘಂಟುಗಳನ್ನು ಪರಾಮರ್ಶನ ನಡೆಸಿ ಎಲ್ಲಾ ಜ್ಞಾನಶಾಸ್ತ್ರವನ್ನು ಬಳಸಿಕೊಂಡು ದೇಶದ ವಿಶ್ವವಿದ್ಯಾನಿಲಯಗಳು ತಿರುಗಿ ನೋಡುವಂತೆ ಮೈಸೂರು ವಿವಿ ಪ್ರಸಾರಾಂಗದ ಇಂಗ್ಲಿಷ್- ಕನ್ನಡ ನಿಘಂಟು ರೂಪಿಸಲಾಗಿದೆ. ಈ ನಿಘಂಟು ಭಾರತದ ದೇಶಿ ಭಾಷೆಗಳ ವಿವಿಗಳಲ್ಲೇ ಮೊದಲು.- ಡಾ. ನಂಜಯ್ಯ ಹೊಂಗನೂರು, ಪ್ರಸಾರಾಂಗದ ನಿರ್ದೇಶಕರು.---ಬಾಕ್ಸ್ ನಾಲ್ಕು ಸಂಪುಟಗಳ ಇಂಗ್ಲಿಷ್- ಕನ್ನಡ ನಿಘಂಟಿಗೆ 800 ರೂ. ನಾಲ್ಕು ಸಂಪುಟವನ್ನು ಒಳಗೊಂಡ ಸಮಗ್ರ ಆವೃತ್ತಿ ನಿಘಂಟಿಗೆ 500 ರೂ. ನಿಗದಿಪಡಿಸಲಾಗಿದೆ. 200 ರೂ. ಸಮಗ್ರ ನಿಘಂಟು ಲಭ್ಯವಿದೆ. ಮೈಸೂರು ವಿವಿ ಪ್ರಸಾರಾಂಗದ ಮಳಿಗೆಯಲ್ಲಿ ನಿಘಂಟು ಖರೀದಿಸಬಹುದು.