ವಿದ್ಯಾ ಗಣಪತಿ ವಿಸರ್ಜನಾ ಕಾರ್ಯಕ್ರಮ ಸಂಪನ್ನ

| Published : Oct 27 2024, 02:02 AM IST

ಸಾರಾಂಶ

ಪಟ್ಟಣ ಸೇರಿದಂತೆ ತಾಲೂಕು ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಮಂದಿ ಭಕ್ತರು ಗಣೇಶ ಮೂರ್ತಿಯ ಮೆರವಣಿಗೆ, ತೆಪ್ಪೋತ್ಸವ ಹಾಗೂ ವಿಸರ್ಜನಾ ಮಹೋತ್ಸವವನ್ನು ಕಣ್ತುಂಬಿಕೊಂಡು ಧನ್ಯರಾದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಪಟ್ಟಣದಲ್ಲಿ ಶುಕ್ರವಾರ ರಾತ್ರಿ ನಡೆದ ೭೨ನೇ ವರ್ಷದ ಐತಿಹಾಸಿಕ ಶ್ರೀ ಕೋಟೆ ವಿದ್ಯಾಗಣಪತಿ ವಿಸರ್ಜನಾ ಕಾರ್ಯಕ್ರಮಕ್ಕೆ ಸಹಸ್ರಾರು ಮಂದಿ ಹಿಂದೂ ಕಾರ್ಯಕರ್ತರು ಹಾಗೂ ಭಕ್ತರು ಸಾಕ್ಷಿಯಾಗುವ ಮೂಲಕ ೪೮ ದಿನಗಳ ಶ್ರೀ ಗಣಪತಿ ಮಹೋತ್ಸವವನ್ನು ಸಂಪನ್ನಗೊಳಿಸಿದರು.

ಶುಕ್ರವಾರ ಬೆಳಗ್ಗೆಯಿಂದ ತಡರಾತ್ರಿ ೧೨ ಗಂಟೆವರೆಗೂ ಹತ್ತಾರು ಜಾನಪದ ಕಲಾ ತಂಡಗಳೊಂದಿಗೆ ಪಟ್ಟಣದ ಪ್ರಮುಖ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಿದ ನಂತರ, ಇತಿಹಾಸ ಪ್ರಸಿದ್ಧ ಹಂಪೆ ಅರಸನ ಕೊಳದಲ್ಲಿ ಸಿದ್ಧಪಡಿಸಿದ್ದ ತೆಪ್ಪದಲ್ಲಿರಿಸಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ತೆಪ್ಪೋತ್ಸವಕ್ಕೆ ಚಾಲನೆ ನೀಡಲಾಯಿತು.

ತೆಪ್ಪೋತ್ಸವ ಆರಂಭಗೊಳ್ಳುತ್ತಿದ್ದಂತೆ ಬಣ್ಣ ಬಣ್ಣದ ಪಟಾಕಿಗಳು ಭಾರೀ ಸದ್ದಿನೊಂದಿಗೆ ಬಾನಂಗಳದಲ್ಲಿ ಚಿತ್ತಾರ ಬಿಡಿಸಿದ ದೃಶ್ಯ ಮನಮೋಹಕವಾಗಿತ್ತು. ತೆಪ್ಪೋತ್ಸವದ ನಂತರ ಗಣಪತಿ ಮೂರ್ತಿಯನ್ನು ಭಕ್ತಿಪೂರ್ವಕವಾಗಿ ಕೊಳದಲ್ಲಿ ವಿಸರ್ಜಿಸಲಾಯಿತು.

ಗಣೇಶ ವಿಸರ್ಜನೆ ಪ್ರಯುಕ್ತ ಹಂಪೆ ಅರಸನ ಕೊಳದ ಕಾಂಪೌಂಡ್ ಸೇರಿದಂತೆ ಪಟ್ಟಣದ ಕೆಎಸ್‌ಟಿ ರಸ್ತೆ ಹಾಗೂ ಕೊಳದ ಬೀದಿಯನ್ನು ತಳಿರು ತೋರಣದೊಂದಿಗೆ ಕೇಸರಿ ಬಾವುಟ, ಬಂಟಿಂಗ್ಸ್ ಕಟ್ಟಿ ವಿದ್ಯುತ್ ದೀಪಾಲಂಕಾರಗಳಿಂದ ವಿಶೇಷ ರೀತಿಯಲ್ಲಿ ಸಿಂಗರಿಸಲಾಗಿತ್ತು.

ಪಟ್ಟಣ ಸೇರಿದಂತೆ ತಾಲೂಕು ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಮಂದಿ ಭಕ್ತರು ಗಣೇಶ ಮೂರ್ತಿಯ ಮೆರವಣಿಗೆ, ತೆಪ್ಪೋತ್ಸವ ಹಾಗೂ ವಿಸರ್ಜನಾ ಮಹೋತ್ಸವವನ್ನು ಕಣ್ತುಂಬಿಕೊಂಡು ಧನ್ಯರಾದರು.

ಸಚಿವರ ಅಭಿನಂದನೆ:ಶ್ರೀ ಕೋಟೆ ವಿದ್ಯಾಗಣಪತಿ ಮೆರವಣಿಗೆ ಮತ್ತು ವಿಸರ್ಜನಾ ಕಾರ್ಯಕ್ರಮವು ಸಹಸ್ರಾರು ಭಕ್ತ ಸಮೂಹದ ನಡುವೆ ಅತ್ಯಂತ ವಿಜೃಂಭಣೆಯ ಜೊತೆಗೆ ಶಾಂತಿಯುತವಾಗಿ ನೆರವೇರಿದ ಹಿನ್ನೆಲೆಯಲ್ಲಿ ವಿಸರ್ಜನಾ ಮಹೋತ್ಸವದ ಯಶಸ್ಸಿಗೆ ಪೂರ್ಣಪ್ರಮಾಣದಲ್ಲಿ ಸಹಕಾರ ನೀಡಿದ ಪಟ್ಟಣದ ಎಲ್ಲಾ ಯುವಕರು, ವರ್ತಕರು, ಸಾರ್ವಜನಿಕರು ಹಾಗೂ ತಾಲೂಕು ಮತ್ತು ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಜನರು, ಭಕ್ತರೂ ಸೇರಿದಂತೆ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಯ ಕರ್ತವ್ಯವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಎಲ್ಲ ಹಿರಿಯ ಅಧಿಕಾರಿಗಳು, ಬಂದೋಬಸ್ತ್‌ಗೆ ನಿಯೋಜನೆಗೊಂಡಿದ್ದ ಎಲ್ಲ ಸಿಬ್ಬಂದಿಗೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಭಿನಂದಿಸಿದ್ದಾರೆ.