ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಹಳ್ಳಿಗಾಡಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಲಕ್ಷಾಂತರ ಮಕ್ಕಳಿಗೆ ವಿದ್ಯಾ ದಾಸೋಹ ಸಿಗುತ್ತಿದೆ ಎಂದರೆ ಅದಕ್ಕೆ ಭೈರವೈಕ್ಯ ಶ್ರೀಗಳ ಪರಿಶ್ರಮವೇ ಕಾರಣ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದರು.ತಾಲೂಕಿನ ಆದಿಚುಂಚನಗಿರಿ ಮಹಾ ಸಂಸ್ಥಾನಮಠದಲ್ಲಿ ಆಯೋಜಿಸಿದ್ದ ಮಾತೃ ಸಂಗಮದಲ್ಲಿ ಮಾತನಾಡಿ, ವ್ಯವಸಾಯವನ್ನೇ ನಂಬಿರುವ ಮತ್ತು ಆರ್ಥಿಕವಾಗಿ ಪ್ರಗತಿಯನ್ನೇ ಕಾಣದ ಸಮುದಾಯವನ್ನು ಶಿಕ್ಷಣದಿಂದ ಮಾತ್ರ ಬದಲಾವಣೆ ತರಲು ಸಾಧ್ಯ. ರೈತರು ಬೆಳೆಯುವ ಯಾವುದೇ ಬೆಳೆಗಳನ್ನು ಸಂಸ್ಕರಣೆ ಮಾಡಿದರೆ ಮಾತ್ರ ಕೃಷಿ ಕ್ಷೇತ್ರದಲ್ಲಿ ಪ್ರಗತಿ ಕಾಣಬಹುದು ಎಂದರು.
ಕಳೆದ 25 ವರ್ಷಗಳ ಹಿಂದೆ ತಾವು ಕೃಷಿ ಸಚಿವರಾಗಿದ್ದ ಅವಧಿಯಲ್ಲಿ ಮಂಡ್ಯ, ಆನೆಕಲ್, ಹಿರಿಯೂರು ಹಾಗೂ ಜೇವರ್ಗಿಯಲ್ಲಿ ದೊಡ್ಡ ಮಟ್ಟದ ಆಹಾರ ಸಂಸ್ಕರಣಾ ಕೇಂದ್ರ ಸ್ಥಾಪಿಸಿ ಮೂಲಸೌಕರ್ಯ ಕಲ್ಪಿಸಲಾಗಿದೆ. ಅದನ್ನು ಮುಂದೆ ತರುವ ಕೆಲಸ ಮಾಡಿದರೆ ರೈತ ಸಮುದಾಯಕ್ಕೆ ದೊಡ್ಡ ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರಕ್ಕೆ ಪೂರ್ಣಪ್ರಮಾಣದ ಸಹಕಾರ ನೀಡಬೇಕು ಎಂದು ಕೋರಿದರು.ರಾಜ್ಯ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಮಾತನಾಡಿ, ದೇಶದ ಪ್ರಗತಿಗಾಗಿ ಮಹಿಳೆಯರಿಗೆ ಸಮಾನತೆ, ಸಮಾನ ಅವಕಾಶದ ಜೊತೆಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ಸಿಗಬೇಕೆಂದು ಸಂವಿಧಾನದ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಸಹ ಶೇ.50ರಷ್ಟಿರುವ ಮಹಿಳೆಯರಿಗೆ ಸಮಾನತೆಯ ನ್ಯಾಯ ದೊರಕಿದೆಯೇ ಎಂಬುದೇ ಪ್ರಶ್ನೆಯಾಗುತ್ತದೆ ಎಂದರು.
ಶ್ರೀಮಠದ ಭೈರವೈಕ್ಯ ಶ್ರೀಗಳ ಜಯಂತ್ಯುತ್ಸವ ಮತ್ತು ಸಂಸ್ಮರಣೋತ್ಸವದ ವೇಳೆ ಮಾತೃ ಸಂಗಮದ ಅಗತ್ಯತೆಯನ್ನು ಮನಗಂಡು ಈ ಸಮಾಗಮವನ್ನು ಆಯೋಜಿಸಿರುವುದು ನಿಜಕ್ಕೂ ಅರ್ಥಪೂರ್ಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಮಾಜಿ ಸಂಸದೆ ಡಾ.ತೇಜಶ್ವಿನಿಗೌಡ ಮಾತನಾಡಿ, ಕಾಲ್ನಡಿಗೆಯಲ್ಲಿ ಬೆಟ್ಟವನ್ನು ಹತ್ತಿ ಮಡಿಕೆಯಲ್ಲಿ ನೀರನ್ನು ತಂದು ಬೆವರು ರಕ್ತ ಸುರಿಸಿ ಎಲ್ಲ ರೀತಿಯ ನೋವು ಅಪಮಾನಗಳನ್ನು ಅನುಭವಿಸಿರುವ ಭೈರವೈಕ್ಯ ಬಾಲಗಂಗಾಧರನಾಥಶ್ರೀಗಳು ಕ್ಷೇತ್ರದ ಅಧಿದೇವತೆ ಶ್ರೀ ಕಾಲಭೈರವೇಶ್ವರಸ್ವಾಮಿಗೆ ಕೈಲಾಸವನ್ನೇ ನಿರ್ಮಿಸಿಕೊಟ್ಟಿದ್ದಾರೆ ಎಂದರು.
ಅನ್ನದಾತರ ಮಕ್ಕಳಿಗೆ ಸಂಸ್ಕಾರ, ಆಚಾರ ವಿಚಾರಗಳನ್ನು ನೀಡುವ ಮೂಲಕ ಜಗತ್ತಿನ ಸಂಸ್ಕೃತಿ ಮತ್ತು ಮೌಲ್ಯಗಳ ರಕ್ಷಣೆಯಲ್ಲಿ ಬಹುದೊಡ್ಡ ಸಂತ ಪರಂಪರೆಯನ್ನು ಆದಿಚುಂಚನಗಿರ ಮಠ ಹುಟ್ಟುಹಾಕಿದೆ ಎಂದರು.ಸಂತರಿಗೆ ಇಂದು ಬಹಳ ಸಂಘರ್ಷಗಳಿವೆ. ಪ್ರಸ್ತುತ ಸಮಾಜದಲ್ಲಿ ಹೆಚ್ಚು ಶಿಕ್ಷಣ ಪಡೆದಷ್ಟು ನಮ್ಮ ಸಂಸ್ಕೃತಿಯನ್ನು ಅವಹೇಳನ ಮಾಡುವಂತಹ, ನಮ್ಮ ಧರ್ಮವನ್ನು ಜರಿಯುವಂತಹ ನಮ್ಮ ಸಾಧಕರಿಗೆ ಅಪಮಾನ ಮಾಡುವಂತಹ ಕೆಟ್ಟ ಪರಂಪರೆಯನ್ನು ಇಂದಿನ ಆಧುನಿಕ ಜಗತ್ತಿನಲ್ಲಿ ಕಾಣುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಅವೆಲ್ಲದರ ನಡುವೆ ತನ್ನ ನಡೆಯನ್ನ ಬದಲಿಸದೆ ಆದಿಚುಂಚನಗಿರಿ ಮಠದ ಶ್ರೀಗಳು ಧರ್ಮದ ಪಥದಲ್ಲಿ ಸಾಗುವ ಜೊತೆಗೆ ಎಲ್ಲಿಯೂ ಹೇಳಿಕೊಳ್ಳದೆ ಅನ್ನ, ಅಕ್ಷರ, ಆರೋಗ್ಯ ದಾಸೋಹ ನಡೆಸುವ ಮೂಲಕ ಸಮಾಜಕ್ಕೆ ಅಪಾರ ಕೊಡುಗೆ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು.