ಧಾರವಾಡದಲ್ಲಿ 300ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಮೂರ್ತಿ, ಸಾವಿರಾರು ಜನರ ಮನೆಗಳಲ್ಲಿ ಗಣೇಶ ಪ್ರತಿಷ್ಠಾಪನೆ ಆಗಲಿದ್ದಾನೆ. ಈ ಬಾರಿ ಎಐ ಗಣೇಶ ಮೂರ್ತಿ ಸೇರಿದಂತೆ ತರಹೇವಾರಿ ರೂಪದಲ್ಲಿ ಗಣೇಶನು ಪಾದಾರ್ಪಣೆ ಮಾಡಲಿದ್ದು, ಪಟಾಕಿ ಸಿಡಿಸಿ ಸಂಭ್ರಮದಿಂದ ಬರಮಾಡಿಕೊಳ್ಳಲು ಯುವ ಜನತೆ ಉತ್ಸುಕರಾಗಿದ್ದಾರೆ.

ಧಾರವಾಡ:

ಗಣಪತಿ ಹಬ್ಬದಲ್ಲಿ ಗಣೇಶನ ಪ್ರತಿಷ್ಠಾಪನೆ, ಪೂಜೆ, ವಿಸರ್ಜನೆ ಹಾಗೂ ಸಂಭ್ರಮವು ಕೇವಲ ಒಂದು ಧಾರ್ಮಿಕ ಆಚರಣೆಯಲ್ಲ, ಭಾರತೀಯ ಸಂಸ್ಕೃತಿ ಬಿಂಬಿಸುವ ಸಂಪ್ರದಾಯ. ಮಣ್ಣಿನ ಮೂರ್ತಿಯ ಕಲಾಭಿವ್ಯಕ್ತಿ, ಮಣ್ಣಿನ ಪೂಜೆ ಮತ್ತು ಸಾಮಾಜಿಕ ಒಗ್ಗಟ್ಟು!

ಇಂತಹ ಮಹತ್ವದ ಹಬ್ಬ ಆಚರಿಸಲು ಧಾರವಾಡದ ಜನರು ಸಿದ್ಧರಾಗಿದ್ದು, ಅಂತಿಮ ಹಂತದ ಸಿದ್ಥತೆ ಪೂರ್ಣಗೊಳಿಸಿದ್ದಾರೆ. ಸೋಮವಾರ ಬೆಳಗಾದರೆ ಮನೆ, ಬೀದಿಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಆಗಲಿದ್ದು, ಅದಕ್ಕೆಬೇಕಾದ ಸಿದ್ಥತೆಗಳು ಈಗಾಗಲೇ ನಡೆದಿವೆ. ಸಾರ್ವಜನಿಕ ಹಾಗೂ ಮನೆಗಳಲ್ಲಿ ಗಣೇಶ ಪ್ರತಿಷ್ಠಾಪಿಸಲು ವೇದಿಕೆಗಳು ಸಿದ್ಧಗೊಂಡಿವೆ.

ಮಾರುಕಟ್ಟೆ ಭರಾಟೆ:

ಹಬ್ಬದ ಅಂಗವಾಗಿ ನಗರದ ಮಾರುಕಟ್ಟೆ ಭಾನುವಾರ ಕಿಕ್ಕಿರಿದು ತುಂಬಿತ್ತು. ತರಹೇವಾರಿ ವಿದ್ಯುತ್‌ ದೀಪಗಳ ಸಾಲು, ಅಲಂಕಾರಿಕ ವಸ್ತುಗಳ ಮಾರಾಟದ ಭರಾಟೆ ಜೋರಾಗಿತ್ತು. ಹಣ್ಣು-ಹಂಪಲು, ಹೂವಿನ ಸುವಾಸನೆಯಿಂದ ಮಾರುಕಟ್ಟೆ ಜಗಮಗಿಸುತ್ತಿದೆ. ಹಾಗೆಯೇ, ಕಲಾಭವನ ಮೈದಾನದಲ್ಲಿ ಪಟಾಕಿಗಳ ಮಾರಾಟ ಜೋರಾಗಿದೆ.

ಧಾರವಾಡದಲ್ಲಿ 300ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಮೂರ್ತಿ, ಸಾವಿರಾರು ಜನರ ಮನೆಗಳಲ್ಲಿ ಗಣೇಶ ಪ್ರತಿಷ್ಠಾಪನೆ ಆಗಲಿದ್ದಾನೆ. ಈ ಬಾರಿ ಎಐ ಗಣೇಶ ಮೂರ್ತಿ ಸೇರಿದಂತೆ ತರಹೇವಾರಿ ರೂಪದಲ್ಲಿ ಗಣೇಶನು ಪಾದಾರ್ಪಣೆ ಮಾಡಲಿದ್ದು, ಪಟಾಕಿ ಸಿಡಿಸಿ ಸಂಭ್ರಮದಿಂದ ಬರಮಾಡಿಕೊಳ್ಳಲು ಯುವ ಜನತೆ ಉತ್ಸುಕರಾಗಿದ್ದಾರೆ. ಸಾಮಾನ್ಯವಾಗಿ ಮನೆಯ ಗಣೇಶ ಮೂರ್ತಿಗಳು ಐದನೇ ದಿನಕ್ಕೆ, ಸಾರ್ವಜನಿಕ ಮೂರ್ತಿಗಳು 7, 11 ಹಾಗೂ 21ನೇ ದಿನಕ್ಕೆ ವಿಸರ್ಜನೆಯಾಗುತ್ತಿದ್ದು, ಕೆಲವು ಮಂಡಳಿಗಳು ಸತ್ಯ ನಾರಾಯಣ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಭಕ್ತರ ಗಮನ ಸೆಳೆಯುತ್ತಿದ್ದಾರೆ.

ಸಾಂಪ್ರದಾಯಿಕ ಇರಲಿ:

ಗಣೇಶ ಹಬ್ಬದಲ್ಲಿ ಗದ್ದಲ-ಗೊಂದಲಗಳು ಉಂಟಾಗುವ ಸಾಧ್ಯತೆಯಿಂದ ಈ ಬಾರಿಯೂ ಪೊಲೀಸ್‌ ಇಲಾಖೆ ಮುನ್ನೆಚ್ಚರಿಕಾ ಕ್ರಮಕೈಗೊಳ್ಳುತ್ತಿದೆ. ಸಾರ್ವಜನಿಕ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ವೇಳೆ ನಿಗದಿಪಡಿಸಿದ ಮಾರ್ಗದಲ್ಲಿ ಹೋಗುವುದು, ಮದ್ಯ ಸೇವನೆ ಮಾಡದಿರುವುದು, ಅಶ್ಲೀಲ ಹಾಡು, ನೃತ್ಯ ಮಾಡದೇ ಸಾಂಪ್ರದಾಯಿಕ ಶೈಲಿ ವಾದ್ಯಮೇಳ ಬಳಸಿ ಶಾಂತಿಯುತ ಹಬ್ಬ ಆಚರಿಸಲು ಪೊಲೀಸರು ಮಂಡಳಿಗಳಿಗೆ ಮನವಿ ಸಹ ಮಾಡಿದ್ದಾರೆ.

ಗಣೇಶನ ಸೇವೆ ಆಗಲಿ:

ಮಣ್ಣಿನ ಗಣಪತಿ ಪ್ರತಿಷ್ಠಾಪಿಸಿ, ಪರಿಸರ ಸ್ನೇಹಿಯಾಗಿ ವಿಸರ್ಜಿಸಿ, ಅದೇ ಸಂದರ್ಭದಲ್ಲಿ ನಮ್ಮ ಹೃದಯದಲ್ಲಿ ಪ್ರೀತಿ, ಕರುಣೆ, ಸಹಾನುಭೂತಿ ಮತ್ತು ಸಹಬಾಳ್ವೆಯನ್ನು ಪ್ರತಿಷ್ಠಾಪಿಸೋಣ ಎಂದು ಶಿಕ್ಷಕ ಸಾಹಿತಿ ನಾರಾಯಣ ಭಜಂತ್ರಿ ಮನವಿ ಮಾಡುತ್ತಾರೆ.