ಬಸವರಾಜ ಹಿರೇಮಠ
ಧಾರವಾಡ:ಬಜೆಟ್‌ನಲ್ಲಿ ಯಾವುದೇ ವಿಷಯ ಮಂಡನೆಯಾಗಿ ಅದಕ್ಕೆ ಅನುದಾನ ಘೋಷಣೆಯಾದರೆ, ವರ್ಷದೊಳಗೆ ಅದು ಈಡೇರುವುದು ಬಹುತೇಕ ಖಚಿತ ಎನ್ನುವ ಭಾವನೆ ಎಲ್ಲರಲ್ಲಿದೆ. ಹೀಗಾಗಿ ಬಜೆಟ್ ಮೇಲೆ ಹಲವು ನಿರೀಕ್ಷೆಗಳು ಸಾಮಾನ್ಯ. ಹೀಗಾಗಿ ಮಾ. 6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಬಜೆಟ್ ಮಂಡಿಸಲಿದ್ದು, ಧಾರವಾಡದ ಅಭಿವೃದ್ಧಿ ದೃಷ್ಟಿಯಿಂದ ಹಲವು ನಿರೀಕ್ಷೆಗಳು ಗರಿಗೆದರಿವೆ.
ವಿಶ್ವವಿದ್ಯಾಲಯ ಸೇರಿದಂತೆ ಹಲವು ಪ್ರಮುಖ ಶೈಕ್ಷಣಿಕ ಸಂಸ್ಥೆಗಳು ಧಾರವಾಡದಲ್ಲಿದ್ದು, ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣಕ್ಕೆ ಬರುತ್ತಾರೆ. ವಿದ್ಯಾರ್ಥಿಗಳಿಗೆ ತಕ್ಕಂತೆ ವಸತಿ ನಿಲಯಗಳ ಕೊರತೆ ಸಾಕಷ್ಟಿದೆ. ವಿವಿಧ ಇಲಾಖೆಗಳ ವಸತಿ ನಿಲಯಗಳಲ್ಲಿ ಪ್ರತಿ ಬಾರಿ 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರವೇಶ ಸಿಗದೇ ಪರದಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಜೆಟ್‌ನಲ್ಲಿ ಇನ್ನೂ ಹೆಚ್ಚಿನ ವಸತಿ ನಿಲಯ ಘೋಷಿಸಬೇಕು. ಜೊತೆಗೆ ಗ್ರಾಮೀಣ ಪ್ರದೇಶದ 19 ಪ್ರೌಢಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳಾಗಿ ಉನ್ನತೀಕರಿಸಬೇಕು ಎನ್ನುವುದು ಜೆಡಿಯು ಜಿಲ್ಲಾಧ್ಯಕ್ಷ ಶ್ರೀಶೈಲ ಕಮತರ ಅವರ ಆಗ್ರಹ.ಹುಬ್ಬಳ್ಳಿಯ ಕೆಎಂಸಿಆರ್‌ಐ ಹೊರತುಪಡಿಸಿದರೆ ಜಿಲ್ಲಾಸ್ಪತ್ರೆಯೇ ಪ್ರಮುಖ ಆರೋಗ್ಯ ಕೇಂದ್ರ. ನಿತ್ಯ ಹೆಚ್ಚಿನ ಸಂಖ್ಯೆಯ ಹೆರಿಗೆ ಪ್ರಕರಣಗಳು ಸೇರಿ ಹೊರ ರೋಗಿಗಳ ಸಂಖ್ಯೆ ಅಧಿಕವಾಗಿದೆ. ಕಾಲಕ್ಕೆ ತಕ್ಕಂತೆ ಆರೋಗ್ಯ ಸೇವೆ ವಿಸ್ತರಿಸಬೇಕಾದ ಜಿಲ್ಲಾಸ್ಪತ್ರೆಯು ಭಾರತೀಯ ಪುರಾತತ್ವ ಇಲಾಖೆ ವ್ಯಾಪ್ತಿಯಲ್ಲಿರುವ ಕಾರಣ ನವೀಕರಣವಾಗುತ್ತಿಲ್ಲ. ಹೀಗಾಗಿ ಜಿಲ್ಲಾಸ್ಪತ್ರೆಯನ್ನು ಸ್ಥಳಾಂತರಿಸಿ ಬೇಲೂರು ಬಳಿ 20 ಎಕರೆ ಪ್ರದೇಶದಲ್ಲಿ ₹ 365 ಕೋಟಿ ವೆಚ್ಚದಲ್ಲಿ ಹೊಸದಾಗಿ ನಿರ್ಮಿಸುವ ಬೇಡಿಕೆಗೆ ಬಜೆಟ್‌ನಲ್ಲಿ ಅವಕಾಶ ಸಿಗುವುದೇ ಕಾದು ನೋಡಬೇಕಿದೆ.
ಕ್ರೀಡಾಂಗಣ:
ಆರ್.ಎನ್. ಶೆಟ್ಟಿ ಕ್ರೀಡಾಂಗಣ ಹೊರತುಪಡಿಸಿ ಧಾರವಾಡದಲ್ಲಿ ವಿದ್ಯಾರ್ಥಿಗಳು ಹಾಗೂ ಜನಸಂಖ್ಯೆಗೆ ತಕ್ಕಂತೆ ಕ್ರೀಡಾಂಗಣದ ಸೌಲಭ್ಯವಿಲ್ಲ. ಹೀಗಾಗಿ ಎರಡು ದಶಕಗಳ ಹಿಂದೆ ನನೆಗುದಿಗೆ ಬಿದ್ದಿರುವ ಕರ್ನಾಟಕ ವಿವಿ ಬಳಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣವನ್ನು ಮರು ಸ್ಥಾಪಿಸಲು ಉಸ್ತುವಾರಿ ಸಚಿವರು ಉತ್ಸುಕತೆ ತೋರಿದ್ದರು. ಕಳೆದ ವರ್ಷ ಕ್ರೀಡಾಂಗಣಕ್ಕೂ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆದರಿಂದ ಒಂದೊಳ್ಳೆಯ ಕ್ರಿಕೆಟ್ ಅಥವಾ ಇತರೆ ಕ್ರೀಡೆಗಳಿಗಾಗಿ ಕ್ರೀಡಾಂಗಣ ಸ್ಥಾಪನೆಗೆ ಈ ಬಜೆಟ್‌ನಲ್ಲಿ ಅನುದಾನ ಸಿಗುತ್ತದೆ ಎಂದು ಧಾರವಾಡದ ಕ್ರೀಡಾಸಕ್ತರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ರಿಂಗ್ ರಸ್ತೆ..:ಹುಬ್ಬಳ್ಳಿಯ ಗಬ್ಬೂರು ಬಳಿ ಸ್ಥಾಪನೆಯಾದ ರಿಂಗ್ ರಸ್ತೆ ಮಾದರಿಯಲ್ಲಿ ಧಾರವಾಡದಲ್ಲಿ ರಿಂಗ್ ರಸ್ತೆ ನಿರ್ಮಿಸಬೇಕೆಂಬ ಬೇಡಿಕೆ ಬಹುದಿನಗಳದ್ದು. ಈ ಬಗ್ಗೆ ಸಮೀಕ್ಷೆಯೂ ಆಗಿದ್ದು, ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಸಾಧ್ಯವಾಗುತ್ತಿಲ್ಲ. ವಿಜಯಪುರ, ಬಾಗಲಕೋಟ, ಸವದತ್ತಿ ಸೇರಿದಂತೆ ಅನೇಕ ಊರುಗಳಿಗೆ ಹೋಗಲು-ಬರಲು ಧಾರವಾಡ ಕೇಂದ್ರವಾಗಿದೆ. ಇದರಿಂದ ವಾಹನ ದಟ್ಟನೆ ಹೆಚ್ಚಾಗುತ್ತಿದ್ದು, ಸುಗಮ ಸಂಚಾರಕ್ಕೆ ರಿಂಗ್ ರಸ್ತೆ ಅಗತ್ಯವಿದ್ದು, ಈ ಬಗ್ಗೆ ಧಾರವಾಡ ಜನರ ನಿರೀಕ್ಷೆ ಹೆಚ್ಚಿದೆ. ಮೂಲಭೂತ ಸೌಕರ್ಯ?
ಮೂಲಭೂತ ಸೌಕರ್ಯಗಳ ದೃಷ್ಟಿಯಿಂದ ಧಾರವಾಡ ತೀರಾ ಹಿಂದುಳಿದಿದೆ. ದೊಡ್ಡ ಹಳ್ಳಿಯಂತಾಗಿರುವ ಧಾರವಾಡದಲ್ಲಿ ಮೂಲಭೂತ ಸೌಕರ್ಯಗಳ ದೃಷ್ಟಿಯಿಂದ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಅನುದಾನ ಒದಗಿಸಬೇಕು. ಕಳೆದ ಬಾರಿಯಂತೆ ಈ ಬಾರಿಯೂ ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ನಿರ್ಲಕ್ಷ್ಯ ಬೇಡ. ಇಲ್ಲಿನ ಜನತೆಯ ನಿರೀಕ್ಷೆಗೆ ತಕ್ಕಂತೆ ಬಜೆಟ್‌ನಲ್ಲಿ ಯೋಜನೆಗಳು ಘೋಷಣೆಯಾಗಲಿ.-ಪಿ.ಎಚ್. ನೀರಲಕೇರಿ, ಹಿರಿಯ ನ್ಯಾಯವಾದಿ, ಬಿಜೆಪಿ ಮುಖಂಡರು