ಸಾರಾಂಶ
ಬಸವರಾಜ ಹಿರೇಮಠ
ಧಾರವಾಡ: ಅಯೋಧ್ಯೆಯಲ್ಲಿ ಸೋಮವಾರ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ವಿದ್ಯಾನಗರಿ ಧಾರವಾಡ ಸಂಪೂರ್ಣ ರಾಮಮಯವಾಗಿದೆ. ಬರೀ ನಗರ ಮಾತ್ರವಲ್ಲದೇ ಗ್ರಾಮೀಣ ಪ್ರದೇಶದಲ್ಲೂ ಕಳೆದ ಒಂದು ವಾರದಿಂದ ರಾಮನ ಜಪ ನಡೆಯುತ್ತಿದ್ದು, ಸೋಮವಾರ ರಾಮನ ಮೂರ್ತಿ ಪ್ರಾಣ ಪರಿಷ್ಠಾಪನೆಗೆ ಕಾತರದಿಂದ ಕಾಯುತ್ತಿದ್ದಾರೆ.ಈಗಾಗಲೇ ರಾಮ-ಹನುಮಂತನ ಭಾವಚಿತ್ರವಿರುವ ಲಕ್ಷಾನುಗಟ್ಟಲೇ ಧ್ವಜಗಳು ಎಲ್ಲೆಡೆ ಹಾರಾಡುತ್ತಿದ್ದು, ಶ್ರೀರಾಮ, ಹನುಮಂತ ಹಾಗೂ ಇತರೆ ದೇವಸ್ಥಾನಗಳು ವಿದ್ಯುತ್ ದೀಪಗಳಿಂತ ಅಲಂಕೃತಗೊಂಡಿವೆ. ಊರ ತುಂಬೆಲ್ಲಾ ರಾಮ-ಲಕ್ಷ್ಮಣ-ಸೀತಾ ಹಾಗೂ ಹನುಮಂತನ ಭಾವಚಿತ್ರಗಳು ರಾರಾಜಿಸುತ್ತಿವೆ. ಹಲವು ಕಡೆಗಳಲ್ಲಿ ಪರದೆಯಲ್ಲಿ ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿದೆ. ಕೆಲವು ದೇವಸ್ಥಾನ, ಸ್ಥಳಗಳಲ್ಲಿ ಅನ್ನ ಸಂತರ್ಪಣೆ, ಲಾಡು ವಿತರಣೆಯಂತಹ ಕಾರ್ಯಕ್ರಮಗಳು ನಡೆಯುತ್ತಿವೆ. ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಕೇಸರಿ ಧ್ವಜಗಳು ಹಾರಾಡುತ್ತಿದ್ದು ಧಾರವಾಡ ಸಂಪೂರ್ಣ ರಾಮಮಯವಾಗಿದೆ.
ಹೆಬ್ಬಳ್ಳಿಗೆ ಬಂದಿದ್ದ ರಾಮ?ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಅಯೋಧ್ಯೆಯ ಹಳೆಯ ರಾಮಮಂದಿರದ ಶೈಲಿಯಲ್ಲಿ ರಾಮ ಮಂದಿರವಿದ್ದು ಇದೀಗ ಅದು ರಾಮ ಭಕ್ತರ ಗಮನ ಸಳೆದಿದೆ. ಈ ಸ್ಥಳದಲ್ಲಿಯೇ ರಾಮಾಯಣ ಕಾಲದಲ್ಲಿ ರಾಮ ಬಂದು ಹೋಗಿದ್ದ ಎಂಬ ನಂಬಿಕೆಯೂ ಹುಟ್ಟಿಕೊಡಿದೆ. ಬೆಳಗಾವಿ ಜಿಲ್ಲೆಯ ಸುರೇಬಾನದ ಶಬರಿಕೊಳ್ಳದಿಂದ ರಾಮ ಪಂಪಾ ಸರೋವರದತ್ತ ಹೊರಟಿದ್ದಾಗ, ಆಗ ಅರಣ್ಯಪ್ರದೇಶವಾಗಿದ್ದ ಹೆಬ್ಬಳ್ಳಿಯ ಈ ಸ್ಥಳದಲ್ಲಿ ಬಂದು, ವಿಶ್ರಾಂತಿ ಪಡೆದು ಪ್ರಯಾಣ ಮುಂದುವರೆಸಿದ್ದಾನೆ. ಕಳೆದ 20 ವರ್ಷಗಳ ಹಿಂದೆ ಈ ಗ್ರಾಮದಲ್ಲಿ ಮಹಾರಾಷ್ಟ್ರದ ಗೋಂದಾವಲೆಯಿಂದ ಬಂದು ದೊಡ್ಡ ಧಾರ್ಮಿಕ ಕ್ರಾಂತಿ ಮಾಡಿರುವ ದತ್ತಾವಧೂತ ಮಹಾರಾಜರು ಇಲ್ಲಿ ಬಂದು ನಿಂತಾಗ ರಾಮ ಬಂದು ಹೋಗಿದ್ದು ಅವರಿಗೆ ಗೋಚರವಾಗಿದೆ ಎಂದು ಹೇಳಲಾಗುತ್ತಿದೆ. ಅವರು ಅವತ್ತೇ ಸಂಕಲ್ಪ ಮಾಡಿ, 20 ವರ್ಷಗಳ ಹಿಂದೆಯೇ ಅಯೋಧ್ಯೆಯ ಹಳೇಯ ಮಂದಿರದ ಮಾದರಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಈ ಮಂದಿರದಲ್ಲಿ ಶ್ರೀರಾಮ, ಲಕ್ಷ್ಮಣ, ಸೀತೆ ಹಾಗೂ ಎದುರಿಗೆ ಮಾರುತಿ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಿ, ಅಯೋಧ್ಯೆ ಮಾದರಿಯಲ್ಲಿಯೇ ದೇವಸ್ಥಾನ ಮಾಡಲಾಗಿದೆ.
ಹೆಬ್ಬಳ್ಳಿ ಗ್ರಾಮದಲ್ಲಿ 101 ದೇವಸ್ಥಾನ, 101 ಬಾವಿಗಳಿಗಳಿವೆ. ಅನಾದಿ ಕಾಲದಲ್ಲಿ ಯಾದವರ ಆಳ್ವಿಕೆಯ ಸಮಯದಲ್ಲಿ ಹೆಬ್ಬಳ್ಳಿ ಗ್ರಾಮ ಸ್ಥಾಪನೆಯಾಗಿದೆ. ಇಂತಹ ಐತಿಹ್ಯದ, ದೇವಸ್ಥಾನಗಳ ಊರಲ್ಲಿ ಈಗ ರಾಮನ ಪಾದ ಸ್ಪರ್ಶವಾಗಿದೆ. ಹೀಗಾಗಿ ಜನೆವರಿ 22ರಂದು ರಾಮ ಮಂದಿರ ಮಾತ್ರವಲ್ಲ ಗ್ರಾಮದಲ್ಲಿರುವ ಎಲ್ಲ ದೇವಸ್ಥಾನಗಳಲ್ಲಿಯೂ ಪೂಜಾ ಕಾರ್ಯಕ್ರಮಗಳನ್ನು ಕೈಗೊಳ್ಳಲು ಇಡೀ ಗ್ರಾಮಸ್ಥರು ಮುಂದಾಗಿದ್ದಾರೆ.ನುಗ್ಗಿಕೇರಿಯಲ್ಲಿ ಸಂಭ್ರಮ: ನುಗ್ಗಿಕೇರಿ ಹನುಮಂತ ದೇವರು ಈ ಭಾಗದಲ್ಲಿ ತುಂಬ ಪ್ರಸಿದ್ಧಿ ಪಡೆದಿದೆ. ಅಯೋಧ್ಯ ಶ್ರೀ ರಾಮ ಜನ್ಮಭೂಮಿಯಲ್ಲಿ ಶ್ರೀ ರಾಮದೇವರ ದಿವ್ಯ ಮೂರ್ತಿ ಪ್ರತಿಷ್ಠಾಪನೆ ಮತ್ತು ಬ್ರಹ್ಮ ಕಲಾಶೋತ್ಸವ ಸಮಾರಂಭ ನಿಮಿತ್ತ ಈ ಗುಡಿಯಲ್ಲಿ ಸಂಭ್ರಮಾಚರಣೆ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪೂರ್ಣ ಕುಟುಂಬ, ಮಂಗಳವಾದ್ಯಗಳೊಂದಿಗೆ ಪಲ್ಲಕ್ಕಿಯಲ್ಲಿ ಶ್ರೀರಾಮದೇವರ ಮೂರ್ತಿ ಹಾಗೂ ಅಕ್ಷತಾ ಕಲಶವನ್ನು ಪೀಠದಲ್ಲಿರಿಸಿ ಇಲ್ಲಿಯ ಪಾಂಡುರಂಗ ನಗರದ ವಿಠಲ ಮಂದಿರದ ವರೆಗೆ ಶುಭ ಯಾತ್ರೆ ನಡೆಸಲಾಗುತ್ತಿದೆ. ರಾಮ ರಕ್ಷಾ ಸ್ತೋತ್ರ ಮತ್ತು ಹನುಮಾನ್ ಚಾಲೀಸಾ ಸ್ತೋತ್ರ ಪಾರಾಯಣ ಮಾಡಲಾಗುತ್ತಿದೆ.
11.30 ರಿಂದ ಟಿವಿ ಪರದೆಯ ಮೇಲೆ ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮ್ ಪ್ರಾಣ ಪ್ರತಿಷ್ಠಾಪನೆಯ ನೇರಪ್ರಸಾರ ಮಾಡಲಾಗುತ್ತಿದ್ದು ನಂತರ ಭಜನೆ, ದೀಪೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಪರ್ಯಾಯಸ್ಥರಾದ ಡಾ. ಪದ್ಮ ಶ್ರೀನಿವಾಸ್ ದೇಸಾಯಿ ಮಾಹಿತಿ ನೀಡಿದರು.ಮಂಗಳವಾರ ಪೇಟೆಯ ರಜಪೂತ ಓಣಿಯಲ್ಲಿ ಸೋಮವಾರ ಮಧ್ಯಾಹ್ನ 12.30ರಿಂದ ಸಂಜೆ 4ರ ವರೆಗೆ ಅನ್ನಸಂತರ್ಪಣೆ ನಡೆಯಲಿದೆ. ಯಾಲಕ್ಕಿ ಶೆಟ್ಟರ್ ಕಾಲೋನಿ ಸಂತ ಜ್ಞಾನೇಶ್ವರ ನಗರದ ಕಾನಡಾ ವಿಠ್ಠಲ ರುಕ್ಮಣಿ ಮಂದಿರದಲ್ಲಿ ಬೆಳಗ್ಗೆ 10ಕ್ಕೆ ಜ್ಯೋತಿ ಬೆಳಗಿಸಿ ಬಡಾವಣೆಯಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಶ್ರೀರಾಮನ ವರಹ ಪತ್ತೆ: ದೇಶಾದ್ಯಂತ ಶ್ರೀರಾಮನ ಜಪ ನಡೆದಿರುವ ಸಮಯದಲ್ಲಿಯೇ ಧಾರವಾಡದ ಗುರುರಾಜ ಕಳ್ಳೀಹಾಳ ಎಂಬುವರ ಮನೆಯಲ್ಲಿ ಶ್ರೀರಾಮ ದೇವರ ದರ್ಬಾರಿನ ಟೆಂಕೆಯುಳ್ಳ ವರಹ ದೊರಕಿದೆ. ವಿಕ್ರಮ ಸಂವತ್ಸರದ 1740ರಲ್ಲಿ ಟಂಕಿಸಿದ್ದ ಬೆಳ್ಳಿಯ ನಾಣ್ಯ ಇದು. ಒಂದು ಮೇಲ್ಮೆಯಲ್ಲಿ ರಾಮದೇವರ ದರ್ಬಾರಿನ ರಾಮಾಯಣ ಆಧಾರಿತ ಚಿತ್ರ ಟಂಕಿಸಲಾಗಿದೆ. ಚಾಮರದ ಕೆಳಗೆ ಕುಳಿತಿರುವ ರಾಮದೇವರು ಹಾಗೂ ಸೀತಾಮಾತೆ, ಪಕ್ಕದಲ್ಲಿ ಲಕ್ಷ್ಮಣ, ಭರತ, ಶತೃಘ್ನರ ಪರಿವಾರವಿದೆ. ದೇವನಾಗರಿ ಲಿಪಿಯಲ್ಲಿರುವ ರಾಮ ಲಕ್ಷ್ಮಣ ಜಾನಕಿ ಜೈ ಭೋಲೋ ಹನುಮಾನ ಕಿ ಎಂಬ ಅರ್ಥವಿರುವ ಸಾಲುಗಳು ಪ್ರಾಕೃತ ಭಾಷೆಯಲ್ಲಿ ಮುದ್ರಿತವಾಗಿವೆ ಎಂದು ಸಂಸ್ಕೃತ ವಿದ್ವಾಂಸ ಡಾ. ವೆಂಕಟ ನರಸಿಂಹಾಚಾರ್ ಜೋಶಿ ಅವರು ಮಾಹಿತಿ ನೀಡಿದರು.ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಸಂತಸದ ಕ್ಷಣ. ನೂರಾರು ವರ್ಷಗಳ ಕಾಲ ನಡೆದ ಹೋರಾಟಕ್ಕೆ ಇದೀಗ ಫಲ ದೊರಕಿದೆ. ಮುಂದಿನ ದಿನಗಳಲ್ಲಿ ರಾಮ ರಾಜ್ಯ ನಿರ್ಮಾಣವಾಗಲಿದೆ ಎಂಬುದರ ಸಂಕೇತ ಇದಾಗಿದೆ. ಧಾರವಾಡದಲ್ಲಿ ರಾಮನ ಜಪ ನಡೆಯುತ್ತಿದ್ದು ನಾವು ಪಾಲ್ಗೊಳ್ಳುತ್ತಿದ್ದೇವೆ ಎಂದು ಕರಸೇವಕ ರವೀಂದ್ರ ಯಲಿಗಾರ ಹೇಳುತ್ತಾರೆ.