ಸಾರಾಂಶ
ಬಸವರಾಜ ಹಿರೇಮಠ
ಧಾರವಾಡ: ಧಾರವಾಡ ಹೆಸರಿಗಷ್ಟೇ ವಿದ್ಯಾಕಾಶಿ ಖ್ಯಾತಿ ಪಡೆದಿದ್ದು ಎಸ್ಸೆಸ್ಸೆಲ್ಸಿ ಸೇರಿದಂತೆ ಪ್ರಮುಖ ಪರೀಕ್ಷೆಗಳ ಫಲಿತಾಂಶದಲ್ಲಿ ಹೇಳಿಕೊಳ್ಳುವ ಸಾಧನೆ ಏನಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯಾಕಾಶಿ ಹೆಸರು ಉಳಿಸಿಕೊಳ್ಳಲು ಇದೀಗ ಮತ್ತೊಂದು ಮಹತ್ತರ ಪ್ರಯತ್ನವೊಂದು ನಡೆಯುತ್ತಿದೆ.ಎಸ್ಸೆಸ್ಸೆಲ್ಸಿ, ಪಿಯುಸಿ, ಕೆಪಿಎಸ್ಸಿ, ಯುಪಿಎಸ್ಸಿ ಅಂತಹ ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ಎಲ್ಲ ರೀತಿಯ ಪರೀಕ್ಷೆಗಳಲ್ಲೂ ಇತ್ತೀಚಿನ ವರ್ಷಗಳಲ್ಲಿ ಧಾರವಾಡ ಹಿಂದೆ ಬಿದ್ದಿರುವುದು ಸ್ಪಷ್ಟ. ಆದರೆ, ಈ ಹಿಂದೆ ರ‍್ಯಾಂಕಿಂಗ್ ಪಡೆಯುವ ಉದ್ದೇಶದಿಂದ ಎಸ್ಸೆಸ್ಸೆಲ್ಸಿಯಲ್ಲಿ ಪಾಸಿಂಗ್ ಪ್ಯಾಕೇಜ್ ಅಂತಹ ಯೋಜನೆಗಳು ಜಾರಿಗೆ ಬಂದರೂ ಹೆಚ್ಚಿನ ಫಲಿತಾಂಶ ಪಡೆಯಲು ಸಾಧ್ಯವಾಗಲಿಲ್ಲ. ಹಾಗೆಯೇ ಕಳೆದ ವರ್ಷ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಮಿಶನ್ ವಿದ್ಯಾಕಾಶಿ ಯೋಜನೆ ಅಡಿ ಹೊಸ ಪ್ರಯತ್ನ ನಡೆಸಿದರೂ ಸಮಾಧಾನ ತರುವ ಫಲಿತಾಂಶ ಬರಲಿಲ್ಲ.
ಇದು ವಿದ್ಯಾಶಕ್ತಿ ಯೋಜನೆ: ಪ್ರಸ್ತುತ ಮೂಲ ಶಿಕ್ಷಣದಲ್ಲಿಯೇ ಸುಧಾರಣೆ ತರುವ ಹಾಗೂ ಶಿಕ್ಷಣದಲ್ಲಿ ತಂತ್ರಜ್ಞಾನ ಬಳಸಿ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಇಲಾಖೆಯು ಧಾರವಾಡ ಐಐಐಟಿ ಜತೆಗೂಡಿ ವಿದ್ಯಾಶಕ್ತಿ ಎಂಬ ಹೊಸ ಯೋಜನೆಗೆ ಒಪ್ಪಂದ ಮಾಡಿಕೊಂಡಿದೆ. ಅಂತೆಯೇ, ಮೊದಲ ಹಂತದಲ್ಲಿ ಸರ್ಕಾರಿ ಶಾಲೆಯ 6, 7, 8ನೇ ತರಗತಿ ಮಕ್ಕಳಿಗೆ ಕಠಿಣ ಎನಿಸುವ ಗಣಿತ, ವಿಜ್ಞಾನ ಹಾಗೂ ಇಂಗ್ಲಿಷ ಭಾಷಾ ವಿಷಯಗಳನ್ನು ತಂತ್ರಜ್ಞಾನ ಆಧಾರಿತವಾಗಿ ಕಲಿಸುವ ಗುರಿ ಹೊಂದಲಾಗಿದೆ.ವರ್ಚುವಲ್ ಲ್ಯಾಬ್ ಬಳಕೆ: ಈ ಯೋಜನೆಗೆ ಬರೀ ಧಾರವಾಡ ಐಐಐಟಿ ಮಾತ್ರವಲ್ಲದೇ ಮದ್ರಾಸ್ ಐಐಐಟಿ ಸಹ ಜತೆಗೂಡಿದೆ. ಈಗಾಗಲೇ ಕಳೆದ ಜೂನ್ 30ರಂದು ಐಐಐಟಿ ಧಾರವಾಡದಲ್ಲಿ ಜಿಲ್ಲೆಯ ವಿವಿಧ ಶಾಲೆಗಳ 550 ಶಿಕ್ಷಕರಿಗೆ ಈ ಎರಡು ಸಂಸ್ಥೆಗಳ ತಜ್ಞರು ತರಬೇತಿ ನೀಡಿದ್ದು, ಡಿಜಿಟಲ್ ಮಾಧ್ಯಮ ಬಳಸಿ ವಿಷಯಗಳನ್ನು ಯಾವ ರೀತಿ ಮಕ್ಕಳಿಗೆ ಕಲಿಸಬೇಕು ಎಂಬುದನ್ನು ತರಬೇತಿಯಲ್ಲಿ ಶಿಕ್ಷಕರಿಗೆ ಹೇಳಿಕೊಡಲಾಗಿದೆ. ಸಾಮಾನ್ಯವಾಗಿ ಪ್ರಸ್ತುತ ಸರ್ಕಾರಿ ಶಾಲೆಗಳಲ್ಲಿ ವಿಜ್ಞಾನವನ್ನು ಬರೀ ಪಠ್ಯಾಧಾರಿತವಾಗಿ ಕಲಿಸುತ್ತಿದ್ದು, ಈ ಯೋಜನೆ ಅಡಿ ಇನ್ಮುಂದೆ ಶಿಕ್ಷಕರು ವರ್ಚುವಲ್ ಲ್ಯಾಬ್ ಮೂಲಕ ಮಕ್ಕಳಿಗೆ ವಿಜ್ಞಾನವನ್ನು ಹಾಗೂ ಅಂಕಿ- ಅಂಶಗಳ ಮೂಲಕ ಗಣಿತವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಹೇಳಿಕೊಡಲಿದ್ದಾರೆ ಎಂದು ಐಐಐಟಿ ಧಾರವಾಡ ನಿರ್ದೇಶಕ ಡಾ.ಮಹಾದೇವ ಪ್ರಸನ್ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.
ಸ್ಮಾರ್ಟ್ ಬೋರ್ಡ್ ಶಾಲೆಗಳಿಗೆ ಯೋಜನೆ: ಮೊದಲ ಹಂತದಲ್ಲಿ ಜಿಲ್ಲೆಯ 3763 ಶಿಕ್ಷಕರಿಗೆ ತಂತ್ರಜ್ಞಾನ ಆಧಾರಿತ ತರಬೇತಿ ನೀಡಿ, ಅವರ ಮೂಲಕ ಸಧ್ಯ ಜಿಲ್ಲೆಯ ಯಾವ ಶಾಲೆಯಲ್ಲಿ ಸ್ಮಾರ್ಟ್ ಬೋರ್ಡ್ ಹಾಗೂ ಇಂಟರನೆಟ್ ಇದೆಯೋ ಅಲ್ಲಿಯ 280 ಶಾಲೆಯ 80 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಮೂರು ವಿಷಯಗಳಲ್ಲಿ ಹೆಚ್ಚಿನ ಜ್ಞಾನ ಒದಗಿಸುವ ಪ್ರಯತ್ನವೇ ವಿದ್ಯಾಶಕ್ತಿ ಯೋಜನೆ ಗುರಿಯಾಗಿದೆ. ಉಳಿದ ಸರ್ಕಾರಿ ಶಾಲೆಗಳಲ್ಲೂ ಅಗತ್ಯ ಡಿಜಿಟಲ್ ವ್ಯವಸ್ಥೆ ಉಂಟಾದರೆ ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ಸರ್ಕಾರಿ, ಖಾಸಗಿ ಶಾಲೆಗಳ ಮಕ್ಕಳಿಗೂ ಈ ಯೋಜನೆ ವಿಸ್ತರಿಸಲಾಗುವುದು ಎಂದು ಡಾ. ಮಹಾದೇವಪ್ಪ ಮಾಹಿತಿ ನೀಡಿದರು.ಇಷ್ಟು ವರ್ಷಗಳ ಕಾಲ ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶ ಸುಧಾರಣೆಗೆ ಬರೀ ಆ ತರಗತಿಗಳಿಗೆ ಮಾತ್ರ ಸೀಮಿತವಾಗಿ ಪ್ರಯತ್ನ ನಡೆಸಿದ್ದು ಯಶಸ್ವಿಯಾಗಿಲ್ಲ. ಈ ಹಿನ್ನೆಲೆಯಲ್ಲಿ 6ನೇ ತರಗತಿಯಿಂದಲೇ ಗುಣಮಟ್ಟದ ಶಿಕ್ಷಣ ಒದಗಿಸುವ ವಿದ್ಯಾಶಕ್ತಿ ಯೋಜನೆಗೆ ಇನ್ನೊಂದು ವಾರದಲ್ಲಿ ಚಾಲನೆ ಸಿಗಲಿದ್ದು, ಎಷ್ಟರ ಮಟ್ಟಿಗೆ ಈ ಯೋಜನೆ ಯಶಸ್ವಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ರಾಜ್ಯಮಟ್ಟದಲ್ಲಿ ಧಾರವಾಡ ವಿದ್ಯಾಕಾಶಿ ಎಂದು ಗುರುತಿಸಿಕೊಂಡಿದೆ. ಆದರೆ, ಅದಕ್ಕೆ ತಕ್ಕಂತೆ ಫಲಿತಾಂಶವಿಲ್ಲ. ಮೂಲದಲ್ಲಿಯೇ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಧಾರವಾಡ ಐಐಐಟಿ ಸಹಯೋಗದಲ್ಲಿ ವಿದ್ಯಾಶಕ್ತಿ ಯೋಜನೆ ಶುರು ಮಾಡಿದ್ದು, ಶಿಕ್ಷಕರಿಗೂ ಹಾಗೂ ಮಕ್ಕಳಿಗೂ ತಂತ್ರಜ್ಞಾನ ಆಧಾರಿತ ತರಬೇತಿ ಸಿಗಲಿದೆ. ಈ ಮೂಲಕ ಕೆಲವೇ ವರ್ಷಗಳಲ್ಲಿ ಧಾರವಾಡ ರಾಜ್ಯದಲ್ಲಿ ಮತ್ತೆ ವಿದ್ಯಾಕಾಶಿಯಾಗಿ ಗುರುತಿಸಿಕೊಳ್ಳಲಿದೆ ಎಂಬ ನಂಬಿಕೆ ಇದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.