ಗಡಿ ಆಚೆಗೂ ಕನ್ನಡ ಪಸರಿಸಿದ ಹೆಮ್ಮೆ ವಿದ್ಯಾವರ್ಧಕ ಸಂಘದ್ದು: ಪ್ರಕಾಶ ಭಾವಿಕಟ್ಟಿ

| Published : Nov 10 2025, 01:30 AM IST

ಗಡಿ ಆಚೆಗೂ ಕನ್ನಡ ಪಸರಿಸಿದ ಹೆಮ್ಮೆ ವಿದ್ಯಾವರ್ಧಕ ಸಂಘದ್ದು: ಪ್ರಕಾಶ ಭಾವಿಕಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡದ ಕಂಪನ್ನು ನಾಡಿನಲ್ಲಿ ಮಾತ್ರವಲ್ಲ ಗಡಿಯಾಚೆಗೂ ವಿಸ್ತರಿಸಿದ ಕ.ವಿ.ವ. ಸಂಘದ ಕೆಲಸ ಮಹೋನ್ನತ ಸಾಧನೆಯಾಗಿದೆ ಎಂದು ನ್ಯಾಯವಾದಿ ಪ್ರಕಾಶ ಭಾವಿಕಟ್ಟಿ ಅಭಿಪ್ರಾಯಪಟ್ಟರು.

ಧಾರವಾಡ: ಕನ್ನಡದ ಕಂಪನ್ನು ನಾಡಿನಲ್ಲಿ ಮಾತ್ರವಲ್ಲ ಗಡಿಯಾಚೆಗೂ ವಿಸ್ತರಿಸಿದ ಕ.ವಿ.ವ. ಸಂಘದ ಕೆಲಸ ಮಹೋನ್ನತ ಸಾಧನೆಯಾಗಿದೆ ಎಂದು ನ್ಯಾಯವಾದಿ ಪ್ರಕಾಶ ಭಾವಿಕಟ್ಟಿ ಅಭಿಪ್ರಾಯಪಟ್ಟರು.

ಕರ್ನಾಟಕ ವಿದ್ಯಾವರ್ಧಕ ಸಂಘ 70ನೇ ರಾಜ್ಯೋತ್ಸವದ ಅಂಗವಾಗಿ ನಾಡಹಬ್ಬ-2025 ನಿಮಿತ್ತ ಆಯೋಜಿಸಿರುವ ಸಾಧಕರ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕವಿವ ಸಂಘ ನವೆಂಬರ್‌ ತಿಂಗಳು ಪೂರ್ತಿ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸಿ ಕನ್ನಡಭಾಷೆ ಸಂಸ್ಕೃತಿಯ ಹಿರಿಮೆ ಹೆಚ್ಚಿಸಿದೆ. ವಿದ್ಯಾರ್ಥಿಗಳು ಇಂದು ಓದಿನ ಜೊತೆಗೆ ಕನ್ನಡ ಕಟ್ಟುವ ಕಾರ್ಯ ಮಾಡಬೇಕು. ಅನ್ಯ ವಿಷಯಗಳತ್ತ ಗಮನ ಕೊಡದೇ ಸಮಯ ಪ್ರಜ್ಞೆಯೊಂದಿಗೆ ಅಧ್ಯಯನ ಮಾಡಬೇಕೆಂದು ತಿಳಿಸಿದರು.

ಸಾಧಕರ ಸನ್ಮಾನ ಪ್ರಶಸ್ತಿಗೆ ಭಾಜನರಾದ ರಸ್ತೆ ಸಾರಿಗೆ ಸಂಸ್ಥೆಯ ನಿರ್ವಾಹಕ ಪ್ರಕಾಶಯ್ಯ ಶಿವಯೋಗಿಮಠ ಮಾತನಾಡಿ, ಈ ಸನ್ಮಾನ ಮತ್ತಷ್ಟು ಕನ್ನಡದ ಕೆಲಸ ಮಾಡಲು ಪ್ರೇರಣೆಯಾಗಿದೆ. ನಾನು ನಿರ್ವಾಹಕನಾಗಿ 2 ದಶಕಗಳಿಂದ ಶ್ರದ್ಧೆ ಬದ್ದತೆಯಿಂದ ಕಾರ್ಯ ಮಾಡಿದ್ದೇನೆ. ಪ್ರಯಾಣಿಕರ ಜೊತೆ ಆಂಗ್ಲ ಪದ ಬಳಸದೇ ಕನ್ನಡದಲ್ಲೇ ವ್ಯವಹರಿಸಿದ್ದೇನೆ ಎಂದರು. ಕಿಟೆಲ್‌ ಕಾಲೇಜಿನ ಪ್ರಾಚಾರ್ಯ ಡಾ. ರೇಖಾ ಜೋಗುಳ ಮಾತನಾಡಿ, ಕವಿವ ಸಂಘಕ್ಕೂ ನಮ್ಮ ಸಂಸ್ಥೆಗಳಿಗೂ ಅವಿನಾಭಾವ ಸಂಬಂಧ ಮೊದಲಿನಿಂದಲೂ ಇದೆ. ಕನ್ನಡದ ಕೆಲಸಕ್ಕೆ ನಮ್ಮ ಸಂಸ್ಥೆಯ ಸಹಕಾರ ಸದಾಕಾಲ ತಮಗೆ ಇದೆ. ನಮ್ಮ ವಿದ್ಯಾರ್ಥಿಗಳು ಪ್ರತಿಭಾವಂತರಿದ್ದು ಜಾನಪದ ವಾದ್ಯ ಸ್ಪರ್ಧೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ನಾಲ್ಕನೆ ಸ್ಥಾನ ಪಡೆದದ್ದು ಅಭಿಮಾನದ ಸಂಗತಿ ಎಂದರು.

ಕಿಟೆಲ್ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಭರತ ನಾಟ್ಯ, ಜಾನಪದ ಸಮೂಹ ನೃತ್ಯ, ಹಾಡು ವೈವಿದ್ಯಮಯ ಕಾರ್ಯಕ್ರಮಗಳು ಜರುಗಿದವು.

ಸರಿತಾ ಮಹೇಶ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ತಬಲಾ ಸಾಥ್‌ ಡಾ. ಅಲ್ಲಮಪ್ರಭು ಕಡಕೋಳ ಹಾಗೂ ವಿನೋದ ಪಾಟೀಲ ಹಾರ್ಮೊನಿಯಮ್ ಸಾಥ್ ನೀಡಿದರು.

ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಸತೀಶ ತುರಮರಿ ಸನ್ಮಾನ ಪತ್ರ ಓದಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.

ಪ್ರೊ. ಎಸ್.ಜಿ. ಬೇಲಿ, ಡಾ. ಸುರೇಶ ನ್ಯಾಮತಿ, ಕಿರಣ ಸಿದ್ಧಾಪೂರ, ಭೀಮು ಕಾಟವೆ, ಸುಪ್ರಿಯಾ ಭಟ್, ಈರಣ್ಣ ನವಲಗುಂದ, ಮೆಹಬೂಬ ಅಲಿ, ಬಸಯ್ಯ ಪತ್ರಿಮಠ, ಡಾ.ಪ್ರಕಾಶ ಮಲ್ಲಿಗವಾಡ ಹಾಗೂ ಕಿಟೆಲ್ ಮಹಾವಿದ್ಯಾಲಯದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಮುಂತಾದವರಿದ್ದರು.