ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಇಂದಿನ ದಿನಗಳಲ್ಲಿ ಓದುವ ಸಂಸ್ಕೃತಿ ವಿನಾಶದ ಅಂಚಿಗೆ ತಲುಪಿದೆ. ಯುವಜನರಿಗೆ ನೆನಪಾಗುವುದು ಒಂದು ಫೇಸ್ ಬುಕ್, ಇನ್ನೊಂದು ಪಾಸ್ ಬುಕ್ ಎರಡೇ ಎಂದು ವಿದ್ಯಾವರ್ಧಕ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ.ಜಿ. ಚಂದ್ರಶೇಖರ್ ಹೇಳಿದರು.ನಗರದ ಜೆಎಸ್ಎಸ್ ಆಸ್ಪತ್ರೆ ಆವರಣದ ರಾಜೇಂದ್ರ ಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಸಿ.ಎನ್. ಮೃತ್ಯುಂಜಯಪ್ಪ ಆದರ್ಶ ವೈದ್ಯ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಸಾಧಕರು ಎಂದಿಗೂ ಮಾತನಾಡುವುದಿಲ್ಲ. ಅವರ ಸಾಧನೆ ಮಾತನಾಡುತ್ತದೆ. ನಮ್ಮಲ್ಲಿ ಅನೇಕ ಸಾಧಕರು ಎಲೆಮರೆ ಕಾಯಿಯಂತೆ ಹೋಗಿ ಬಿಡುತ್ತಾರೆ. ಅವರು ಜನಮಾನಸದಲ್ಲಿ ಉಳಿಯಬೇಕು. ಸಾಧಕರ ಸಾಧನೆ ದಾಖಲೀಕರಣವಾಗಬೇಕು ಎಂದು ಅವರು ಹೇಳಿದರು.ಸಿ.ಎನ್. ಮೃತ್ಯುಂಜುಂಪ್ಪ ಆದರ್ಶ ವೈದ್ಯ ಸೇವಾ ಪ್ರಶಸ್ತಿ ಸ್ವೀಕರಿಸಿದ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಡಾ. ಪ್ರೇಮಾ ಧನರಾಜ್ ಮಾತನಾಡಿ, ನನಗೆ ಗಾಯಕಿ ಆಗಬೇಕೆಂಬ ಆಸೆ ಇತ್ತು. ಸಂಗೀತ ತರಗತಿಗೂ ಹೋಗಿದ್ದೆ. ಆದರೆ, ದೇವರ ಇಚ್ಛೆಯೇ ಬೇರೆ ಇತ್ತು. ಸಣ್ಣ ವಯಸ್ಸಿನಲ್ಲಿ ಸೀಮೆ ಎಣ್ಣೆ ಸ್ಟೌ ಸ್ಛೋಟದಿಂದ ಸುಟ್ಟು ತುಟಿ ಎದೆಗೆ ಅಂಟಿ, ಕತ್ತು ಕೂಡ ಬಾಗಿತ್ತು. ಆ ವೇಳೆ ಸಾಕಷ್ಟು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ. ತಾಯಿಯಪ್ರೋತ್ಸಾಹದಿಂದ ನೋವು ಮರೆತು, ವೈದ್ಯೆಯಾಗಿ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಾಯಿತು ಎಂದರು.ಕಾರ್ಯಕ್ರಮದಲ್ಲಿ ಸರಗೂರು ಸ್ನೇಹಶ್ರೀ ಸಮಾಜದಿಂದ ವಚನ ಗಾಯನ ನಡೆಯಿತು.ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಾರದಾ ಶಿವಲಿಂಗಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲೇಖಕ ಪ್ರೊ.ಸಿ. ನಾಗಣ್ಣ, ಶರಣ ಸಾಹಿತ್ಯ ಪರಿಷತ್ತು ನಗರ ಘಟಕ ಅಧ್ಯಕ್ಷ ಮ.ಗು. ಸದಾನಂದಯ್ಯ, ಜಿಲ್ಲಾ ಘಟಕ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ಇದ್ದರು.