ಇಲ್ಲಿನ ಮಾನವ ಬಂಧುತ್ವ ವೇದಿಕೆ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪಟ್ಟಣದಲ್ಲಿ ಸೌಹಾರ್ದ ನಡಿಗೆ ಜಾಥಾ ಆಯೋಜಿಸಲಾಗಿತ್ತು.

ಹೂವಿನಹಡಗಲಿಯಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಸೌಹಾರ್ದ ನಡಿಗೆ ಜಾಥಾ

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ಇಲ್ಲಿನ ಮಾನವ ಬಂಧುತ್ವ ವೇದಿಕೆ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪಟ್ಟಣದಲ್ಲಿ ಸೌಹಾರ್ದ ನಡಿಗೆ ಜಾಥಾ ಆಯೋಜಿಸಲಾಗಿತ್ತು.

ಪಟ್ಟಣದ ಮದಲಗಟ್ಟಿ ವೃತ್ತದಲ್ಲಿರುವ ಸಿದ್ಧಿವಿನಾಯಕ ದೇವಸ್ಥಾನದಿಂದ ಜಾಥಾ ಆರಂಭಗೊಂಡು, ಮುಖ್ಯ ರಸ್ತೆ ಮೂಲಕ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದಲ್ಲಿ ಸಮಾವೇಶಗೊಂಡಿತ್ತು. ಸಂಘಟನೆಗಳ ಮುಖಂಡರು ಸೌಹಾರ್ದ ಘೋಷವಾಕ್ಯಗಳ ಭಿತ್ತಿಪತ್ರಗಳನ್ನು ಹಿಡಿದುಕೊಂಡಿದ್ದರು.

ಹರಪನಹಳ್ಳಿಯ ಮುಖಂಡ ಕೋಡಿಹಳ್ಳಿ ಭೀಮಪ್ಪ ಮಾತನಾಡಿ, ಪ್ರಜ್ಞಾವಂತಿಕೆ ಜಾಗೃತವಾಗಿರುವ ಈ ಮಲ್ಲಿಗೆ ನೆಲದಲ್ಲಿ ಸೌಹಾರ್ದತೆ ಎಲ್ಲರ ಉಸಿರಾಗಬೇಕಿದೆ. ಕೋಮುವಾದ ಹರಡುವ ದುಷ್ಟ ಶಕ್ತಿಗಳ ಕುರಿತು ನಾಗರಿಕರು ಎಚ್ಚರವಾಗಿರಬೇಕೆಂದು ಹೇಳಿದರು.

ನಾಗತಿ ಬಸಾಪುರದ ಡಾ. ಮಂಜುನಾಥ ಹಾಲಸ್ವಾಮಿ ಮಾತನಾಡಿ, ಯಾವುದೇ ಧರ್ಮ ದ್ವೇಷ ಮತ್ತು ಹಿಂಸೆಯನ್ನು ಬೋಧಿಸುವುದಿಲ್ಲ. ಹಬ್ಬ, ಹರಿದಿನಗಳು, ಉತ್ಸವಗಳು ಎಲ್ಲರನ್ನು ಒಗ್ಗೂಡಿಸಬೇಕೇ ಹೊರತು ಜಾತಿ, ಧರ್ಮಗಳ ಆಧಾರದಲ್ಲಿ ವಿಭಜಿಸಬಾರದು. ಸ್ವ ಸಾಮರ್ಥ್ಯದಿಂದ ಬೆಳೆಯಬೇಕೆ ಹೊರತು, ಜಾತಿ, ಧರ್ಮದ ಹೆಸರಲ್ಲಿ ಒಬ್ಬರನ್ನು ತುಳಿದು ಇನ್ನೊಬ್ಬರು ಬೆಳೆಯಬಾರದು. ಸ್ವಾರ್ಥಕ್ಕಾಗಿ ಕೆಲವರು ಬ್ರಿಟಿಷರಂತೆ ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ದೇಶದ ಜನರು ಹಿಂದೆ ಬ್ರಿಟಿಷರನ್ನು ಒದ್ದೋಡಿಸಿದಂತೆ ಸೌಹಾರ್ದ ಕದಡುವವರನ್ನು ಓಡಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಿಪಿಎಂ ಮುಖಂಡ ಸಂತೋಷ ಮಾತನಾಡಿ, ಮತಾಂಧ ಶಕ್ತಿಗಳಿಂದ ಮತೀಯರನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಬೆಂಕಿ ಹಚ್ಚುವವರ ನಡುವೆ ದೀಪ ಬೆಳಗಿಸಿ ಪ್ರಜ್ಞಾವಂತರು ಸಾಮರಸ್ಯದ ನಾಡು ಕಟ್ಟಬೇಕಾಗಿದೆ. ವೈರುಧ್ಯತೆಗಳನ್ನು ಮರೆತು ಭಾರತೀಯರೆಲ್ಲ ಒಂದು ಎಂದು ಒಗ್ಗಟ್ಟು ಪ್ರದರ್ಶಿಸಬೇಕೆಂದು ಹೇಳಿದರು.

ಹಜರತ್ ಮೋಹಿನ್, ಎಚ್. ಪೂಜಪ್ಪ, ಜಿ. ಶಿವಕುಮಾರಗೌಡ, ಶ್ರೀಧರನಾಯ್ಕ ಮಾತನಾಡಿದರು. ಫಾ. ಸೆಲ್ವಕುಮಾರ್, ಮುಖಂಡರಾದ ಕೋಡಿಹಳ್ಳಿ ಮುದುಕಪ್ಪ, ಅಟವಾಳಗಿ ಕೊಟ್ರೇಶ, ಟಿ.ಎಂ. ಶಂಕ್ರಯ್ಯ, ಜೆ. ಶ್ರೀನಿವಾಸರೆಡ್ಡಿ, ಕೆ. ಗೌಸ್ ಮೊಹಿದ್ದೀನ್, ಮೂಲಿಮನಿ ರಾಜಾ, ಜಹೀರ್, ಹನಕನಹಳ್ಳಿ ಹಾಲೇಶ, ಬಿ.ಎಲ್. ಶ್ರೀಧರ, ಸಂಘಟನೆಗಳ ಮುಖಂಡರಾದ ಸುರೇಶ ಅಂಗಡಿ, ಎಂ. ದಯಾನಂದ, ಸುರೇಶ ಹಲಗಿ, ನಾಗರಾಜ ಮಲ್ಕಿಒಡೆಯರ್ ಇತರರು ಇದ್ದರು. ದ್ವಾರಕೀಶ, ಕೆ.ಸಿ. ಪರಶುರಾಮ, ಎಚ್. ಚಂದ್ರಪ್ಪ ಸಂಗಡಿಗರು ಕ್ರಾಂತಿಗೀತೆ ಹಾಡಿದರು.