ಕಾರ್ಪೊರೇಟ್‌ ಗಳು, ಶ್ರೀಮಂತರ ಪರ ಇರುವ ಕೇಂದ್ರ ಸರ್ಕಾರದಿಂದ ದುಡಿಯುವ ಜನರು ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಕೇಂದ್ರದ ಮೋದಿ ಸರ್ಕಾರ ಜಾರಿಗೆ ತಂದ ಕರಾಳ ಕಾನೂನು ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ನಡೆದ ರೈತ ಹೋರಾಟಕ್ಕೆ 4 ವರ್ಷ ತುಂಬಿದೆ. ಆ ವೇಳೆ ಕೇಂದ್ರ ನೀಡಿದ ಭರವಸೆ ಈಡೇರಿಸದೆ ವಚನ ಭ್ರಷ್ಟವಾಗಿದೆ ಎಂದು ಆರೋಪಿಸಿ ಸಂಯುಕ್ತ ಹೋರಾಟ ಕರ್ನಾಟಕ, ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯವರು ಮಂಗಳವಾರ ಎಚ್ಚರಿಕೆ ರ್ಯಾಲಿಯಲ್ಲಿ ಹಮ್ಮಿಕೊಂಡಿದ್ದರು.

ನಗರದ ಪುರಭವನದಿಂದ ಆರಂಭವಾದ ಎಚ್ಚಿರಿಕೆ ಮೆರವಣಿಗೆಯು ಸಯ್ಯಾಜಿರಾವ್ ರಸ್ತೆ, ಇರ್ವಿನ್ ರಸ್ತೆ, ಅಶೋಕ ರಸ್ತೆ ಮೂಲಕ ಗಾಂಧಿಚೌಕ ತಲುಪಿ ಪ್ರತಿಭಟನಾ ಸಭೆ ನಡೆಸಲಾಯಿತು.

ಕಾರ್ಪೊರೇಟ್‌ ಗಳು, ಶ್ರೀಮಂತರ ಪರ ಇರುವ ಕೇಂದ್ರ ಸರ್ಕಾರದಿಂದ ದುಡಿಯುವ ಜನರು ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಎಂ.ಎನ್‌.ಸಿಗಳಿಗೆ ಸಹಾಯ ಮಾಡಲು ಸರ್ಕಾರ 2024- 25ರ ಕೇಂದ್ರ ಬಜೆಟ್‌ ನಲ್ಲಿ ಘೋಷಿಸಿದಂತೆ ಡಿಜಿಟಲ್ ಅಗ್ರಿಕಲ್ಚರ್ ಮಿಷನ್- ಡ್ಯಾಮ್ ಮೂಲಕ ಭೂಮಿ ಮತ್ತು ಬೆಳೆಗಳ ಡಿಜಿಟಲೀಕರಣ ಹೇರುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಕರಾಳ ಕಾಯ್ದೆಗೆ ಪೂರಕವಾಗಿ ರಾಜ್ಯದಲ್ಲಿ ಅಂದಿನ ಬಿಜೆಪಿ ಸರ್ಕಾರ ಭೂಸುಧಾರಣೆ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ಕಾಯ್ದೆ ಜಾರಿ ಮಾಡಿತು. ಇದನ್ನು ವಿರೋಧಿಸಿ ನಿರಂತರ ಹೋರಾಟ ರಾಜ್ಯದಲ್ಲೂ ನಡೆಯಿತು. 2023ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ನೀಡಿದ್ದ ಭರವಸೆ ಈಡೇರಿಸಿಲ್ಲ ಎಂದು ಅವರು ಕಿಡಿಕಾರಿದರು.

ಬೇಡಿಕೆಗಳು

ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆಯನ್ನು ಕಾನೂನುಬದ್ಧವಾಗಿ ಖಾತರಿಪಡಿಸಬೇಕು. 4 ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು. ರಾಷ್ಟ್ರೀಯ ಕನಿಷ್ಟ ವೇತನ ತಿಂಗಳಿಗೆ 26000 ರೂ., 10 ಸಾವಿರ ಪಿಂಚಣಿಯನ್ನು ಸಂಘಟಿತ, ಅಸಂಘಟಿತ ಯೋಜನೆ ಕಾರ್ಯಕರ್ತರು, ಗುತ್ತಿಗೆ ಕಾರ್ಮಿಕರು ಮತ್ತು ಕೃಷಿ ವಲಯ ಸೇರಿದಂತೆ ಎಲ್ಲಾ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಪ್ರಯೋಜನಗಳನ್ನು ಒದಗಿಸಬೇಕು ಎಂದು ಅವರು ಆಗ್ರಹಿಸಿದರು.

ಸಾಲಬಾಧೆ, ಆತ್ಮಹತ್ಯೆ ಕೊನೆಗೊಳಿಸಲು ರೈತರು ಮತ್ತು ಕೃಷಿ ಕಾರ್ಮಿಕರಿಗೆ ಸಮಗ್ರ ಸಾಲ ಮನ್ನಾ, ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಬೇಕು. ರಕ್ಷಣಾ, ರೈಲ್ವೆ, ಆರೋಗ್ಯ, ಶಿಕ್ಷಣ, ವಿದ್ಯುತ್ ಸೇರಿದಂತೆ ಸಾರ್ವಜನಿಕ ವಲಯದ ಉದ್ಯಮಗಳನ್ನು ಖಾಸಗೀಕರಣ ಮಾಡಬಾರದು. ಕೃಷಿ ಪಂಪ್‌ ಸೆಟ್‌ ಗಳಿಗೆ ಉಚಿತ ವಿದ್ಯುತ್, ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಸಬಾರದು ಎಂದು ಅವರು ಒತ್ತಾಯಿಸಿದರು.

ವಿವೇಚನೆಯಿಲ್ಲದ ಭೂ ಸ್ವಾಧೀನ ಕೈಬಿಡಬೇಕು. ಬೆಳೆಗಳು ಮತ್ತು ಜಾನುವಾರುಗಳಿಗೆ ಸಮಗ್ರ ಸಾರ್ವಜನಿಕ ವಲಯದ ವಿಮಾ ಯೋಜನೆ, ಬೆಳೆ ವಿಮೆ ಮತ್ತು ಗೇಣಿದಾರ ರೈತರಿಗೆ ಎಲ್ಲಾ ಯೋಜನೆಗಳ ಪ್ರಯೋಜನ ಒದಗಿಸಬೇಕು. ಸಾರ್ವಜನಿಕ ಪಡಿತರ ವ್ಯವಸ್ಥೆ ಬಲಪಡಿಸಿ, ಎಲ್ಲರಿಗೂ ಗುಣಮಟ್ಟದ ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ ಖಚಿತಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ‌ಕಾರ್ಯದರ್ಶಿ ಜಗದೀಶ್ ಸೂರ್ಯ, ವಿವಿಧ ಸಂಘಟನೆಗಳ ಮುಖಂಡರಾದ ಶೇಷಾದ್ರಿ, ಬಾಲಾಜಿ ರಾವ್, ಉಗ್ರ ನರಸಿಂಹೇಗೌಡ, ಚಂದ್ರಶೇಖರ ಮೇಟಿ, ವಿಜಯ್‌ಕುಮಾರ್, ಪಿ. ಮರಂಕಯ್ಯ, ಕಲ್ಲಳ್ಳಿ ಕುಮಾರ್, ದೇವದಾಸ್ ಮೊದಲಾದವರು ಇದ್ದರು.