ಕನ್ನಡಪ್ರಭ ವಾರ್ತೆ ಹನೂರು
ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಉತ್ತೇಜನ ನೀಡುವ ಉದ್ದೇಶದಿಂದ ವಿಜಯ್ ಫೌಂಡೇಷನ್, ಅಭ್ಯುದಯ ಪ್ರತಿಷ್ಠಾನ ಹಾಗೂ ತಿಲಕ್ ನಗರ ಯುವ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿರುವ 10ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳನ್ನು ವಿತರಿಸುವ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ನೋಟ್ ಪುಸ್ತಕಗಳು, ವಾಟರ್ ಬಾಟಲ್, ಪೆನ್ ಹಾಗೂ ಪೆನ್ಸಿಲ್ ಬಾಕ್ಸ್ ಸೇರಿದಂತೆ ಅಗತ್ಯ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಲಾಯಿತು. ಹೊಸ ಶೈಕ್ಷಣಿಕ ವರ್ಷದ ಆರಂಭದಲ್ಲೇ ಈ ನೆರವು ದೊರೆತಿರುವುದು ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ಮೂಡಿಸಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮುಖಂಡ ನರಸಿಂಹ ಮೂರ್ತಿ, ವಿಜಯ್ ಫೌಂಡೇಷನ್ ಸಂಸ್ಥಾಪಕ ವಿಜಯ್ ಕುಮಾರ್ ಅವರ ನೇತೃತ್ವದ ತಂಡ ಕಳೆದ ನಾಲ್ಕು ವರ್ಷಗಳಿಂದ ಮಹದೇಶ್ವರ ಬೆಟ್ಟದ ವ್ಯಾಪ್ತಿಯ ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ನಿರಂತರವಾಗಿ ಕೈಜೋಡಿಸುತ್ತಿದೆ. ಈ ವರ್ಷವೂ ಪೊನ್ನಾಚಿ, ವಡಕೆಹಳ್ಳ, ಮಾರೂರು, ನಾಗಮಲೆ ಹಾಗೂ ತೊಳಸಿಕೆರೆ ಸೇರಿ ವಿವಿಧ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಗಿದೆ. ಇಂತಹ ಸೇವಾ ಕಾರ್ಯಗಳು ಮಕ್ಕಳಲ್ಲಿ ಶಿಕ್ಷಣದ ಬಗ್ಗೆ ಆಸಕ್ತಿ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಅಭ್ಯುದಯ ಪ್ರತಿಷ್ಠಾನದ ಸೌಮ್ಯಾ ಮತ್ತು ಜಯಪ್ರಕಾಶ್, ತೊಳಸಿಕೆರೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಡಿಜಿಟಲ್ ಕಲಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಸ್ಮಾರ್ಟ್ ಟಿವಿಯನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು. ಈ ಕೊಡುಗೆಯಿಂದ ವಿದ್ಯಾರ್ಥಿಗಳು ತಂತ್ರಜ್ಞಾನ ಆಧಾರಿತ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಪಡೆಯಲು ಅನುಕೂಲವಾಗಲಿದೆ.
ಕಾರ್ಯಕ್ರಮದಲ್ಲಿ ತೊಳಸಿಕೆರೆ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಪ್ರಭಾಕರ್, ಶಿಕ್ಷಕರಾದ ಮಹೇಂದ್ರ ಎಂ, ಅತಿಥಿ ಶಿಕ್ಷಕರಾದ ಮಹದೇವಸ್ವಾಮಿ ಹಾಗೂ ನಾಗೇಂದ್ರ, ಮರೂರು ಶಾಲೆಯ ಮುಖ್ಯೋಪಾಧ್ಯಾಯ ಮಾದೇಶ್, ವಿಜಯ್ ಫೌಂಡೇಷನ್ ಪದಾಧಿಕಾರಿಗಳಾದ ಕಾಂತರಾಜು, ಲಕ್ಷ್ಮೀ ನಾರಾಯಣ್, ಪ್ರಿಯದರ್ಶಿನಿ, ತಿಲಕ್ ನಗರ ಯುವ ಸಂಘಟನೆಯ ಭೂಪಿಂದರ್, ಪದಾಧಿಕಾರಿಗಳಾದ ಪ್ರೇಮಕುಮಾರ್, ಸೂರ್ಯ, ಶಾಲಾ ಸಿಬ್ಬಂದಿ, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿಕ್ಷಣಕ್ಕೆ ಸಮಾಜದ ಬೆಂಬಲ ಅಗತ್ಯ:
ಗ್ರಾಮೀಣ ಪ್ರದೇಶಗಳ ಮಕ್ಕಳ ಶಿಕ್ಷಣಕ್ಕೆ ಸರ್ಕಾರದ ಪ್ರಯತ್ನಗಳಿಗೆ ಪೂರಕವಾಗಿ ಸಮಾಜಸೇವಾ ಸಂಸ್ಥೆಗಳು ಕೈಜೋಡಿಸುತ್ತಿರುವುದು ಶ್ಲಾಘನೀಯವಾಗಿದೆ. ಶೈಕ್ಷಣಿಕ ಪರಿಕರಗಳ ವಿತರಣೆ ಮತ್ತು ಡಿಜಿಟಲ್ ಕಲಿಕೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವ ಇಂತಹ ಸೇವಾ ಕಾರ್ಯಗಳು ಸಮಾಜಕ್ಕೆ ಮಾದರಿಯಾಗಿದ್ದು, ಇನ್ನಷ್ಟು ಸಂಘ-ಸಂಸ್ಥೆಗಳಿಗೆ ಪ್ರೇರಣೆಯಾಗಲಿ ಎಂಬ ಅಭಿಪ್ರಾಯ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.