ವಿಜಯ ಗುಂಟ್ರಾಳ ಬಿಜೆಪಿಗೆ ಸೇರ್ಪಡೆ

| Published : Apr 17 2024, 01:18 AM IST

ಸಾರಾಂಶ

ಪೌರ ಕಾರ್ಮಿಕರ ಜಿಲ್ಲಾ ನೌಕರರ ಸಂಘದ ಜಿಲ್ಲಾಧ್ಯಕ್ಷ ವಿಜಯ ಗುಂಟ್ರಾಳ ಎಸ್‌ಡಿಪಿಐ ತೊರೆದು ಬಿಜೆಪಿ ಸೇರ್ಪಡೆಯಾದರು. ಈ ವೇಳೆ ಗುಂಟ್ರಾಳ ಅವರ ನೂರಾರು ಬೆಂಬಲಿಗರು ಬಿಜೆಪಿಗೆ ಸೇರ್ಪಡೆಯಾದರು.

ಹುಬ್ಬಳ್ಳಿ: ಪೌರ ಕಾರ್ಮಿಕರ ಜಿಲ್ಲಾ ನೌಕರರ ಸಂಘದ ಜಿಲ್ಲಾಧ್ಯಕ್ಷ ವಿಜಯ ಗುಂಟ್ರಾಳ ಎಸ್‌ಡಿಪಿಐ ತೊರೆದು ಬಿಜೆಪಿ ಸೇರ್ಪಡೆಯಾದರು.

ಕೇಂದ್ರ ಸಚಿವರೂ ಆಗಿರುವ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಪಕ್ಷಕ್ಕೆ ಬರಮಾಡಿಕೊಂಡರು.

ಈ ವೇಳೆ ಗುಂಟ್ರಾಳ ಅವರ ನೂರಾರು ಬೆಂಬಲಿಗರು ಬಿಜೆಪಿಗೆ ಸೇರ್ಪಡೆಯಾದರು.

ಪೌರಕಾರ್ಮಿಕರ ಬೇಡಿಕೆಗಳಿಗಾಗಿ ಗುಂಟ್ರಾಳ ಹೋರಾಟ ನಡೆಸಿಕೊಂಡು ಬಂದವರು. ಮೊದಲಿಗೆ ಕಾಂಗ್ರೆಸ್‌ನಲ್ಲಿದ್ದರು. ಅಲ್ಲಿ ಶಾಸಕ ಪ್ರಸಾದ ಅಬ್ಬಯ್ಯ ಅವರೊಂದಿಗಿನ ಭಿನ್ನಮತದಿಂದಾಗಿ ಹೊರಬಂದಿದ್ದರು. ಅಸಾವುದ್ದೀನ್ ಓವೈಸಿಯ ಎಐಎಂಐಎಂ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಪೂರ್ವ ಕ್ಷೇತ್ರದ ಟಿಕೆಟ್‌ ಕೂಡ ಕೇಳಿದ್ದರು. ಆದರೆ ಎಂಐಎಂ ಇವರಿಗೆ ಟಿಕೆಟ್‌ ಕೊಟ್ಟಿರಲಿಲ್ಲ. ಪಕ್ಷದಿಂದ ಉಚ್ಚಾಟಿಸಿತ್ತು. ಇದರಿಂದ ಎಸ್‌ಡಿಪಿಐಗೆ ಸೇರ್ಪಡೆಯಾಗಿ ಅಲ್ಲಿಂದ ಪೂರ್ವ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಇದೀಗ ಬಿಜೆಪಿ ಸೇರ್ಪಡೆಯಾಗಿದ್ದಾರೆ.

2010ರಿಂದ ಪೌರಕಾರ್ಮಿಕರ ಬೇಡಿಕೆಗಳಿಗೆ ಹೋರಾಟ ನಡೆಸುತ್ತಾ ಬಂದಿದ್ದೇನೆ. ಪೌರಕಾರ್ಮಿಕರ ಬೇಡಿಕೆಗಳಿಗೆ ಬಿಜೆಪಿ ಸ್ಪಂದಿಸಿದಷ್ಟು ಬೇರೆ ಯಾವ ಪಕ್ಷವೂ ಸ್ಪಂದಿಸಿಲ್ಲ. ಜತೆಗೆ ಸಚಿವ ಪ್ರಹ್ಲಾದ ಜೋಶಿ ಅವರ ಅಭಿವೃದ್ಧಿ ಕಾರ್ಯ ಮೆಚ್ಚಿ, ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಶ್ರಮಿಸುವುದಕ್ಕಾಗಿ ಬಿಜೆಪಿ ಸೇರಿದ್ದೇನೆ. ಯಾವುದೇ ಷರತ್ತು ಇಲ್ಲದೇ ಬಿಜೆಪಿ ಸೇರಿದ್ದೇನೆ ಎಂದು ಇದೇ ವೇಳೆ ಗುಂಟ್ರಾಳ ಹೇಳಿದರು.

ಈ ವೇಳೆ ಗುಂಟ್ರಾಳ ಜತೆಗೆ ಪ್ರಮುಖರಾದ ಮೇಘರಾಜ್ ಹಿರೇಮನಿ, ವಸಂತ ಬೋರೆ, ಗುರಯ್ಯ ವಿರಕ್ತಮಠ, ಹುಸೇನಪ್ಪ ಮಾದರ, ಲೋಕೇಶ್ ಪಾಲಿಮ, ಅಜಯ್ ಹಿರೇಮಠ, ಮರಿಯಪ್ಪ ಬುಕ್ಕನಟ್ಟಿ, ಕಿರಣ್ ಕುಮಾರ್ ಸೋಮರೆಡ್ಡಿ, ನಾಗರಾಜ್ ದೊಡ್ಮನಿ ಮತ್ತಿತರರು ಬಿಜೆಪಿ ಸೇರ್ಪಡೆಯಾದರು.

ಬಿಜೆಪಿ ಮುಖಂಡರಾದ ಪ್ರಭು ನವಲಗುಂದಮಠ, ಮಾಜಿ ಶಾಸಕ ಅಶೋಕ ಕಾಟವೆ, ಶಿವು ಮೆಣಸಿನಕಾಯಿ, ರಂಗಾ ಬದ್ದಿ, ಡಾ. ಕ್ರಾಂತಿಕಿರಣ ಸೇರಿದಂತೆ ಹಲವರಿದ್ದರು.