ಭಾರತೀಯ ಯೋಧರ ಸ್ಫೂರ್ತಿಗಾಗಿ ವಿಜಯ ಜ್ಯೋತಿ ಯಾತ್ರೆ: ಪುಣ್ಯಪಾಲ್

| Published : Jul 26 2024, 01:33 AM IST

ಸಾರಾಂಶ

ಬಾಳೆಹೊನ್ನೂರು, ಕಾರ್ಗಿಲ್ ವಿಜಯಕ್ಕೆ 25 ಸಂವತ್ಸರಗಳು ತುಂಬಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾದ ಆಶಯದಂತೆ ದೇಶಾದ್ಯಂತ ಭಾರತೀಯ ಯೋಧರಿಗೆ ಸ್ಫೂರ್ತಿ ತುಂಬುವ ಸಲುವಾಗಿ ಕಾರ್ಗಿಲ್ ವಿಜಯ ಜ್ಯೋತಿ ರಥಯಾತ್ರೆಯನ್ನು ಆಯೋಜಿಸಿದೆ ಎಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಮಾಜಿ ಅಧ್ಯಕ್ಷ ಪುಣ್ಯಪಾಲ್ ಹೇಳಿದರು.

- ಜೇಸಿ ವೃತ್ತದಲ್ಲಿ ಕಾರ್ಗಿಲ್ ವಿಜಯ ಯಾತ್ರೆಗೆ ಸ್ವಾಗತಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಕಾರ್ಗಿಲ್ ವಿಜಯಕ್ಕೆ 25 ಸಂವತ್ಸರಗಳು ತುಂಬಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾದ ಆಶಯದಂತೆ ದೇಶಾದ್ಯಂತ ಭಾರತೀಯ ಯೋಧರಿಗೆ ಸ್ಫೂರ್ತಿ ತುಂಬುವ ಸಲುವಾಗಿ ಕಾರ್ಗಿಲ್ ವಿಜಯ ಜ್ಯೋತಿ ರಥಯಾತ್ರೆಯನ್ನು ಆಯೋಜಿಸಿದೆ ಎಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಮಾಜಿ ಅಧ್ಯಕ್ಷ ಪುಣ್ಯಪಾಲ್ ಹೇಳಿದರು.

ಬಿಜೆಪಿ ಯುವ ಮೋರ್ಚಾ ಆಯೋಜಿಸಿರುವ ಕಾರ್ಗಿಲ್ ವಿಜಯ ಜ್ಯೋತಿ ರಥಯಾತ್ರೆ ಪಟ್ಟಣದ ಜೇಸಿ ವೃತ್ತಕ್ಕೆ ಗುರುವಾರ ಆಗಮಿಸಿದ ವೇಳೆ ರಥಯಾತ್ರೆಯನ್ನು ಸ್ವಾಗತಿಸಿ ಅವರು ಮಾತನಾಡಿದರು. ಭಾರತದ ಮುಕುಟಮಣಿಯಾದ ಕಾಶ್ಮೀರವನ್ನು ವಿರೋಧಿಗಳಿಂದ, ಭಯೋತ್ಪಾದಕರಿಂದ ರಕ್ಷಣೆ ಮಾಡಿದ ಯೋಧರನ್ನು ದೇಶ ಸ್ಮರಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ಹಾಗೂ ಇದು ಒಂದು ಸತ್ಸಂಪ್ರದಾಯ ಎನ್ನುವ ಕಾರಣಕ್ಕೆ ರಥಯಾತ್ರೆಯನ್ನು ದೇಶಾಭಿಮಾನ ಪೂರ್ವಕವಾಗಿ ಆಯೋಜಿಸಲಾಗಿದೆ.

ಕಾರ್ಗಿಲ್ ವಿಜಯ ದಿವಸ 1999ರಿಂದ 2024ರವರೆಗೆ 25 ವರ್ಷಗಳನ್ನು ಕಳೆದ ಕಾರಣ ನಿರಂತರವಾಗಿ 25 ಗಂಟೆಗಳ ಕಾಲ ಕಾರ್ಗಿಲ್ ವಿಜಯ ಜ್ಯೋತಿ ಕಾರ್ಯಕ್ರಮ ರಾಜ್ಯಾದ್ಯಂತ ನಡೆಯುತ್ತಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೂಡಿಗೆರೆಯಲ್ಲಿ ಆರಂಭಗೊಂಡಿದ್ದು, ಧಾರಾಕಾರ ಮಳೆ ನಡುವೆಯೂ ನಮ್ಮ ಯುವ ಮೋರ್ಚಾ ಕಾರ್ಯಕರ್ತರು ಕಾರ್ಗಿಲ್‌ನ ವೀರ ಯೋಧರನ್ನು ಸ್ಮರಣೆ ಮಾಡುತ್ತಿದ್ದಾರೆ. ವಿಜಯ ಜ್ಯೋತಿ ಯಾತ್ರೆ ಗುರುವಾರ ಮೂಡಿಗೆರೆ ಯಿಂದ ಆರಂಭಗೊಂಡು ಆಲ್ದೂರು, ಬಾಳೆಹೊನ್ನೂರು, ಜಯಪುರ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಲುಪಲಿದೆ. ಎರಡನೇ ದಿನವಾದ ಶುಕ್ರವಾರ ತರೀಕೆರೆ, ಬೀರೂರು, ಕಡೂರು, ಸಖರಾಯಪಟ್ಟಣ ಮೂಲಕ ಚಿಕ್ಕಮಗಳೂರಿಗೆ ಅಂತಿಮವಾಗಿ ತಲುಪಿ ಅಲ್ಲಿ ಸಭೆ ನಡೆಯಲಿದೆ.

ಇತಿಹಾಸದಲ್ಲಿ ಭಾರತವನ್ನು ರಕ್ಷಣೆ ಮಾಡಿದ ಯೋಧರನ್ನು ಹಾಗೂ ಈಗ ದೇಶದ ಗಡಿಗಳಲ್ಲಿ ಭಾರತವನ್ನು ಕಾಯುತ್ತಿರುವ ಎಲ್ಲಾ ಯೋಧರಿಗೆ ಸ್ಫೂರ್ತಿದಾಯಕವಾಗಲಿ ಎನ್ನುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ದೇಶಕ್ಕಾಗಿ ದುಡಿದ, ಮಡಿದ, ಪ್ರಾಣಾರ್ಪಣೆ ಮಾಡಿದ ಎಲ್ಲಾ ವೀರ ಯೋಧರಿಗೆ ಬಿಜೆಪಿ ಯುವ ಮೋರ್ಚಾ ಹೃದಯಾಂತರಾಳದ ನಮನಗಳನ್ನು ಈ ಮೂಲಕ ಸಲ್ಲಿಸಲಿದೆ ಎಂದರು.

ರಾಜ್ಯ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸಂದೀಪ್ ರವಿ, ಉಪಾಧ್ಯಕ್ಷ ಮಾಲತೇಶ್ ಸಿಗಸೆ, ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ಕಾಫಿ ಮಂಡಳಿ ಸದಸ್ಯ ಭಾಸ್ಕರ್ ವೆನಿಲ್ಲಾ, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಪ್ರಣಸ್ವಿ, ವಕ್ತಾರ ಬಿ.ಜಗದೀಶ್ಚಂದ್ರ, ನಿಯೋಜಿತ ಹೋಬಳಿ ಅಧ್ಯಕ್ಷ ಪ್ರದೀಪ್ ಕಿಚ್ಚಬ್ಬಿ, ಆಡುವಳ್ಳಿ ಗ್ರಾಪಂ ಅಧ್ಯಕ್ಷ ಯು.ಸಿ. ಪ್ರದೀಪ್, ಪ್ರಮುಖರಾದ ಮಂಜು ಹೊಳೆಬಾಗಿಲು, ಉಮಾ ಚಂದ್ರಶೇಖರ್, ಶಶಿ ಆಲ್ದೂರು, ಮಹೇಶ್, ಮಂಜು ಶೆಟ್ಟಿ ಮತ್ತಿತರರು ಹಾಜರಿದ್ದರು.೨೫ಬಿಹೆಚ್‌ಆರ್ ೧: ಬಿಜೆಪಿ ಯುವ ಮೋರ್ಚಾ ಆಯೋಜಿಸಿರುವ ಕಾರ್ಗಿಲ್ ವಿಜಯ ಜ್ಯೋತಿ ರಥಯಾತ್ರೆ ಬಾಳೆಹೊನ್ನೂರಿನ ಜೇಸಿ ವೃತ್ತಕ್ಕೆ ಆಗಮಿಸಿದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಪುಷ್ಪಾರ್ಚನೆ ಮಾಡಿ ಸ್ವಾಗತಿಸಿದರು. ಪುಣ್ಯಪಾಲ್, ಸಂದೀಪ್, ಮಾಲತೇಶ್, ಭಾಸ್ಕರ್ ವೆನಿಲ್ಲಾ, ಪ್ರಭಾಕರ್ ಇದ್ದರು.