ಸಂವಿಧಾನದ ಮೂಲಕ ನಾವು ಕಟ್ಟ ಹೊರಟಿರುವ ಸಮಸಮಾಜದ ಆದರ್ಶ ಮತ್ತು ಕನಸುಗಳನ್ನು ವಿಜಯಾ ಮೋಹನ್ ಕಥೆಯಾಗಿಸಿದ್ದಾರೆ ಎಂದು ಸಂಶೋಧನಾ ವಿದ್ಯಾರ್ಥಿ ನವೀನ್ ಪೂಜಾರಹಳ್ಳಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ತುಮಕೂರು ಸಂವಿಧಾನದ ಮೂಲಕ ನಾವು ಕಟ್ಟ ಹೊರಟಿರುವ ಸಮಸಮಾಜದ ಆದರ್ಶ ಮತ್ತು ಕನಸುಗಳನ್ನು ವಿಜಯಾ ಮೋಹನ್ ಕಥೆಯಾಗಿಸಿದ್ದಾರೆ ಎಂದು ಸಂಶೋಧನಾ ವಿದ್ಯಾರ್ಥಿ ನವೀನ್ ಪೂಜಾರಹಳ್ಳಿ ತಿಳಿಸಿದರು. ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಶಾಖೆ ತುಮಕೂರು ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಉಚಿತ ಕೋಚಿಂಗ್ ಸೆಂಟರ್ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಅಗಲಿದ ಲೇಖಕಿ ವಿಜಯಾ ಮೋಹನ್ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಜಯಾ ಮೋಹನ್ ಕನ್ನಡದ ಗಟ್ಟಿ ಕಥೆಗಾರ್ತಿಯರಲ್ಲಿ ಒಬ್ಬರು. ಪ್ರೇಮ, ಮಹಿಳೆಯ ಸ್ವಾಯತ್ತತೆ ಪ್ರಶ್ನೆ, ಅತ್ಯಾಚಾರ, ಅಕ್ರಮ ಮರಳು ದಂಧೆ, ಬಡತನ, ಅನ್ನ ಭಾಗ್ಯ, ಜಾತಿ ಅಸ್ಪೃಶ್ಯತೆಯ ಕ್ರೌರ್ಯ ಹೀಗೆ ಅನೇಕ ಮುಖ್ಯ ವಿಷಯಗಳನ್ನು ಕತೆಯ ಮೂಲಕ ಅವರು ಎದುರುಗೊಳ್ಳುತ್ತಾರೆ ಎಂದು ಹೇಳಿದರು.ಲೇಖಕಿ ಸಿ.ಎಲ್.ಸುನಂದಮ್ಮ ಮಾತನಾಡಿ, ವಿಜಯಾ ಮೋಹನ್ ಸರಳವಾದ ನಡೆ ನುಡಿ, ಕ್ರಿಯಾಶೀಲ ವ್ಯಕ್ತಿತ್ವ ಹೊಂದಿದ್ದ ಸ್ನೇಹಜೀವಿ. ಅವರು ಬಳಸುತ್ತಿದ್ದ ಭಾಷೆ ವಿಶಿಷ್ಟವಾಗಿತ್ತು. ಅವರಿಗೆ ಡಾ. ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ, ತ್ರಿವೇಣಿ ಪ್ರಶಸ್ತಿ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಮೊದಲಾದವು ಬಂದಿವೆ ಎಂದರು.ಲೇಖಕಿ ಬಾ.ಹ.ರಮಾಕುಮಾರಿ ಮಾತನಾಡಿ, ಗುಬ್ಬಿ ತಾಲೂಕು ಕಡಬ ಬಳಿ ಶಿಕ್ಷಕಿಯಾಗಿ ನೌಕರಿಗೆ ಸೇರಿದ ವಿಜಯಾ, ಸಾಹಿತ್ಯದ ಒಡನಾಟದಿಂದ ಗಟ್ಟಿ ಬರಹಗಾರ್ತಿಯಾಗಿ ರೂಪುಗೊಂಡಿದ್ದನ್ನು, ತಮ್ಮ ಪುಸ್ತಕ ಬಿಡುಗಡೆ ದಿನ ಕನ್ನಡ ಭವನಕ್ಕೆ ಬರಲು ಹೊರಟಿದ್ದ ಅವರು, ಹೃದಯಾಘಾತಕ್ಕೆ ಒಳಗಾದ ಸುದ್ದಿ ಬಂದ ಭಾವುಕ ಕ್ಷಣಗಳನ್ನು ಹಂಚಿಕೊಂಡರು.ಲೇಖಕಿಯರ ಸಂಘದ ತುಮಕೂರು ಜಿಲ್ಲಾ ಶಾಖೆಯ ಅಧ್ಯಕ್ಷೆ ಮಲ್ಲಿಕಾ ಬಸವರಾಜು ಮಾತನಾಡಿ, ತನ್ನ ತವರು ನೆಲದ ಗೆಳತಿ ವಿಜಯಾ ತಮ್ಮ ಗ್ರಾಮೀಣ ಪರಿಸರದ ಆಡುನುಡಿಯನ್ನು, ಬದುಕನ್ನು ಸೃಜನಶೀಲವಾಗಿ ಬರಹದಲ್ಲಿ ಕಟ್ಟಿಕೊಟ್ಟಿರುವುದಾಗಿ ತಿಳಿಸಿದರು. ಅವರ ಮೇವು ಕಥಾ ಸಂಕಲನವನ್ನು ಲೇಖಕಿಯರ ಸಂಘದ ಸಹಯೋಗದಲ್ಲಿ ಬಿಡುಗಡೆ ಮಾಡಿದ್ದನ್ನು ನೆನಪಿಸಿಕೊಂಡರು. ಮುಂದಿನ ದಿನಗಳಲ್ಲಿ ಅವರ ಸಾಹಿತ್ಯವನ್ನು ಹೆಚ್ಚು ಹೆಚ್ಚು ಓದಿಸೋಣ, ವಿಚಾರ ಸಂಕಿರಣ ಹಮ್ಮಿಕೊಳ್ಳೋಣ ಎಂದು ಹೇಳಿದರು. ಲೇಖಕಿ ಕಮಲಾ ನರಸಿಂಹ ಇದ್ದರು. ರಾಣಿ ಚಂದ್ರಶೇಖರ್ ನಿರೂಪಿಸಿದರು. ಲೇಖಕಿ ಪರಿಮಳಾ ಸ್ವಾಗತಿಸಿದರು. ವಿಜಯಾ ಮೋಹನ್ ಅವರ ಪತಿ, ಮಗ, ತಾಯಿ, ಅತ್ತೆ ಮತ್ತು ಸಹೋದರಿಯರು, ಲೇಖಕಿ ಪ್ರತಿಭಾ ನಂದಕುಮಾರ್, ಡಾ. ವಸುಂಧರಾ ಭೂಪತಿ, ಎನ್ .ಗಾಯಿತ್ರಿ ಮತ್ತು ಕರ್ನಾಟಕ ಲೇಖಕಿಯರ ಸಂಘ ಕೇಂದ್ರ ಶಾಖೆ ಬೆಂಗಳೂರು ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಆರ್ .ಸುನಂದಮ್ಮ ಹಾಜರಿದ್ದರು.