ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕಾಂಗ್ರೆಸ್ ಮುಖಂಡ ವಿಜಯ ರಾಮೇಗೌಡರಿಗೆ ನಿಗಮ ಮಂಡಲಿ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬುವಂತೆ ರಾಜ್ಯ ನಗರಾಭಿವೃದ್ಧಿ ಮತ್ತು ಹಣಕಾಸು ನಿಗಮದ ಮಾಜಿ ಅಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ ಆಗ್ರಹಿಸಿದರು.ಪಟ್ಟಣದ ಹೋಟೆಲ್ ರಾಮದಾಸ್ ಸುಲೋಚನಮ್ಮ ಪಾರ್ಟಿಹಾಲ್‌ನಲ್ಲಿ ಮಿತ್ರ ಫೌಂಡೇಷನ್‌ನಿಂದ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿದೆ. ಆದರೆ, ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅನಾಥ ಪ್ರಜ್ಞೆಯಲ್ಲಿದ್ದಾರೆ. ಕಾರ್ಯಕರ್ತರ ಕಷ್ಠ ಸುಖಗಳಿಗೆ ಸ್ಪಂದಿಸುವ ಮುಖಂಡರ ಕೊರತೆ ಕಾಡುತ್ತಿದೆ ಎಂದರು.
ಕ್ಷೇತ್ರದ ಕಾಂಗ್ರೆಸ್ ನಾಯಕತ್ವದ ಕೊರತೆ ನೀಗಿಸುವ ಶಕ್ತಿ ವಿಜಯ ರಾಮೇಗೌಡರಿಗೆ ಇದೆ. ಮಿತ್ರ ಫಂಡೇಷನ್ ಎನ್ನುವ ಸೇವಾ ಸಂಸ್ಥೆ ಕಟ್ಟಿ ವಿಜಯ ರಾಮೇಗೌಡ ಸಮಾಜ ಮುಖಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯನ್ನು ಜಿಲ್ಲಾ ಮಟ್ಟದಲ್ಲಿ ಸದೃಢವಾಗಿ ಮುನ್ನಡೆಸಿದ್ದಾರೆ ಎಂದರು.ಸ್ವಂತ ದುಡಿಮೆಯ ಹಣವನ್ನು ವ್ಯಹಿಸಿ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಶಕ್ತಿ ತುಂಬುತ್ತಿದ್ದಾರೆ. ಕ್ಷೇತ್ರದಲ್ಲಿ ಸೊರಗಿದ್ದ ಕಾಂಗ್ರೆಸ್ ಪಕ್ಷಕ್ಕೆ ಸ್ಪೂರ್ತಿ ತಂದಿದ್ದಾರೆ. ಕಳೆದ ಚುನಾವಣೆಯಲ್ಲಿ ವಿಜಯ ರಾಮೇಗೌಡರಿಗೆ ಟಿಕೆಟ್ ನೀಡಲು ನಿರ್ಧರಿಸಲಾಗಿತ್ತು. ಆದರೆ, ಬಿ.ಎಲ್.ದೇವರಾಜು ಜೆಡಿಎಸ್ ತ್ಯಜಿಸಿ ಕಾಂಗ್ರೆಸ್‌ಗೆ ಸೇರ್ಪಡೆಯಾದ ಕಾರಣ ವಿಜಯ ರಾಮೇಗೌಡರಿಗೆ ಟಿಕೆಟ್ ತಪ್ಪಿತು ಎಂದರು.
ರಾಜಕೀಯದಲ್ಲಿ ಬದಲಾವಣೆಯಾಗಿ ವಿಜಯ ರಾಮೇಗೌಡರಂತಹ ಉತ್ಸಾಹಿಗಳನ್ನು ಮುಂಚೂಣಿಗೆ ತರಬೇಕು. ರಾಜ್ಯ ಕಾಂಗ್ರೆಸ್ ನಾಯಕರು ವಿಜಯ್ ರಾಮೇಗೌಡರಿಗೆ ಪಕ್ಷದ ಮಟ್ಟದಲ್ಲಿ ಉನ್ನತ ಸ್ಥಾನ ನೀಡಿ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.ಕಾಂಗ್ರೆಸ್ ಮುಖಂಡ ಬಿ.ಎಲ್.ದೇವರಾಜು ಮಾತನಾಡಿ, ವಿಜಯ ರಾಮೇಗೌಡ ಕಾಂಗ್ರೆಸ್ಸಿಗೆ ಬಂದ ಕಾರಣದಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಪುನಶ್ಚೇತನಗೊಂಡಿದೆ. ಅವರ ಪಕ್ಷ ರಾಜಕಾರಣ ಮತ್ತು ಸಮಾಜ ಸೇವೆಗೆ ಸದಾಕಾಲ ಅವರ ಜೊತೆ ನಾನಿರುತ್ತೇನೆ ಎಂದರು.
ಈ ವೇಳೆ ಮಿತ್ರ ಫೌಂಡೇಷನ್ ಅಧ್ಯಕ್ಷ ವಿಜಯ ರಾಮೇಗೌಡ ಮಾತನಾಡಿ, ಇದು ರಾಜಕೀಯ ವೇದಿಕೆಯಲ್ಲ. ರಾಜಕೀಯ ಕಾರಣಕ್ಕಾಗಿ ಸಂಸ್ಥೆ ಕಟ್ಟಿಲ್ಲ. ನನ್ನ ರಾಜಕೀಯ ಸೇವೆಗೂ ಮಿತ್ರ ಫೌಂಡೇಷನ್ ಸೇವಾ ಕಾರ್ಯಗಳಿಗೂ ಪರಸ್ಪರ ಸಂಬಂಧವಿಲ್ಲ. ಪಕ್ಷಾತೀತವಾದ ಒಂದು ಸೇವಾ ಸಂಸ್ಥೆ ಎಂದರು.ನಾನು ರಾಜಕಾರಣಕ್ಕೆ ಪ್ರವೇಶ ಮಾಡಿರಬಹುದು. ಆದರೆ, ನಾನಿನ್ನೂ ರಾಜಕಾರಣಿಯಾಗಿಲ್ಲ. ಅಧಿಕಾರಕ್ಕಾಗಿ ನಾನು ರಾಜಕೀಯಕ್ಕೆ ಬಂದಿಲ್ಲ. ರಾಜಕಾರಣಕ್ಕೆ ಜಾತಿ ಮತ್ತು ಹಣ ಬಲ ಅತಿಮುಖ್ಯ. ಜನಶಕ್ತಿಯಿದ್ದು ರಾಜಕೀಯ ಹಣೆ ಬರಹ ಚೆನ್ನಾಗಿದ್ದರೆ ಮಾತ್ರ ರಾಜಕೀಯದಲ್ಲಿ ಯಶಸ್ಸು ಸಾಧ್ಯ ಎಂದರು.
ಈ ವೇಳೆ ಪುರಸಭಾ ಸದಸ್ಯ ಡಿ.ಪ್ರೇಂಕುಮಾರ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಅಗಸರಹಳ್ಳಿ ಗೋವಿಂದರಾಜು, ಅಘಲಯ ರಮೇಶ್, ಬಸವೇಗೌಡ, ಮುಖಂಡರಾದ ಯತ್ತುಗೋನಹಳ್ಳಿ ನಾರಾಯಣಗೌಡ, ವಿಠಲಾಪುರ ಸುಬ್ಬೇಗೌಡ, ರಾಜಯ್ಯ, ಆಲಂಬಾಡಿ ಕಾವಲು ಸಿದ್ದಿಕ್ ಪಾಷ, ಗುಡುಗನಹಳ್ಳಿ ರಾಯಪ್ಪ, ಹೊಸಹೊಳಲು ಕೃಷ್ಣೇಗೌಡ, ಕಟ್ಡಟೆಕ್ಯಾತನಹಳ್ಳಿ ಪರಮೇಶ್, ಮಾಂಬಳ್ಳಿ ಜಯರಾಂ, ಚೇತನಾ ಮಹೇಶ್, ಶಿವಮ್ಮ ಮತ್ತಿತರು ಇದ್ದರು.