ಕೃಷ್ಣಮಠದಲ್ಲಿ ವಿಜಯದಾಸರ ಆರಾಧನಾ ಉತ್ಸವ: ಮೇಘಾಲಯ ರಾಜ್ಯಪಾಲ ಭಾಗಿ

| Published : Nov 11 2024, 12:57 AM IST

ಸಾರಾಂಶ

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನಡೆಯುತ್ತಿರುವ ವಿಜಯದಾಸರ ಆರಾಧನೆ ಉತ್ಸವದಲ್ಲಿ ಭಾನುವಾರ ಮೇಘಾಲಯದ ರಾಜ್ಯಪಾಲ ಎಚ್.ಸಿ. ವಿಜಯಶಂಕರ್ ಪಾಲ್ಗೊಂಡರು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನಡೆಯುತ್ತಿರುವ ವಿಜಯದಾಸರ ಆರಾಧನೆ ಉತ್ಸವದಲ್ಲಿ ಭಾನುವಾರ ಮೇಘಾಲಯದ ರಾಜ್ಯಪಾಲ ಎಚ್.ಸಿ. ವಿಜಯಶಂಕರ್ ಪಾಲ್ಗೊಂಡರು.

ಮೊದಲು ಶ್ರೀ ಕೃಷ್ಣ ಮುಖ್ಯಪ್ರಾಣರ ದರ್ಶನ ಪಡೆದ ರಾಜ್ಯಪಾಲರು, ಗೀತಾಮಂದಿರದಲ್ಲಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಅನುಗ್ರಹ ಪ್ರಸಾದವನ್ನು ಪಡೆದರು. ಶ್ರೀಪಾದರು ಸಂಕಲ್ಪಿಸಿರುವ ಜಾಗತಿಕ ಮಟ್ಟದ ಧಾರ್ಮಿಕ ಆಂದೋಲನ ಕೋಟಿ ಗೀತಾ ಲೇಖನ ಯಜ್ಞದ ಬಗ್ಗೆ ಮಾಹಿತಿ ಪಡೆದ ಅವರು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೇ ತಾವೂ ಗೀತ ಲೇಖನ ಯಜ್ಞದ ದೀಕ್ಷೆಯನ್ನೂ ಪಡೆದರು.ಕರ್ನಾಟಕದ ಹರಿದಾಸರ ಬಗ್ಗೆ ವಿಶೇಷ ಆಸಕ್ತಿಯನ್ನು ಹೊಂದಿರುವ ರಾಜ್ಯಪಾಲರು ಉಡುಪಿಯ ಪ್ರಸಿದ್ಧ ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣ ದರ್ಶನವನ್ನು ಪಡೆದು, ಭಕ್ತ ಕನಕದಾಸರ ವಿಗ್ರಹಕ್ಕೆ ನಮಿಸಿದರು.ನಂತರ ರಾಜಾಂಗಣದಲ್ಲಿ ನಡೆಯುತ್ತಿರುವ ಶ್ರೀ ವಿಜಯದಾಸರ ಆರಾಧನೆ ಪ್ರಯುಕ್ತ ನಡೆಯುತ್ತಿದ್ದ ಶ್ರೀನಿವಾಸ ಕಲ್ಯಾಣೋತ್ಸವದಲ್ಲೂ ಪಾಲ್ಗೊಂಡರು. ಅವರಿಗೆ ವಿಜಯದಾಸರ ಆರಾಧನೆಯ ಪ್ರಯುಕ್ತ ವಿಶೇಷ ಗೌರವವನ್ನು ಸಲ್ಲಿಸಲಾಯಿತು.ಪರ್ಯಾಯ ಶ್ರೀಪಾದರೊಂದಿಗೆ ಪುತ್ತಿಗೆ ಕಿರಿಯ ಪಟ್ಟದ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು, ಮಠದ ದಿವಾನರಾದ ನಾಗರಾಜ ಆಚಾರ್ಯರು, ಶ್ರೀಗಳ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯರು ಇದ್ದರು.