ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ವಿಜಯದಶಮಿ ಆಚರಣೆ

| Published : Oct 14 2024, 01:29 AM IST

ಸಾರಾಂಶ

ಹಿರಿಯ ಅರ್ಚಕರಾದ ರಾಮಸ್ವಾಮಿಭಟ್ಟರ ಮಾರ್ಗದರ್ಶನದಲ್ಲಿ ಅರ್ಚಕರಾದ ನಾರಾಯಣ ಭಟ್ಟರು, ರಾಮ ಭಟ್ಟರು ಹಾಗೂ ವಿಜಯಕುಮಾರ್ ಪೂಜಾ ಕೈಂಕರ್ಯ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಟ್ಟಣದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ವಿಜಯದಶಮಿ ಅಂಗವಾಗಿ ಶನಿವಾರ ವಿಶೇಷ ಪೂಜಾ ಕೈಂಕರ್ಯ ವೈಭವದಿಂದ ಜರುಗಿದವು.

ಶನಿವಾರ ಮುಂಜಾನೆ ಬ್ರಾಹ್ಮಿ ಮಹೂರ್ತದಲ್ಲಿ ಶ್ರೀ ಸ್ವಾಮಿಯ ಮೂಲ ಮೂರ್ತಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ನೈವೇಧ್ಯ, ಸಹಸ್ರ ನಾಮಾರ್ಚನೆ ನಂತರ ಮಹಾಮಂಗಳಾರತಿ ನಡೆಸಲಾಯಿತು. ಸಂಜೆ ಗೋಧೂಳಿ ಲಗ್ನದಲ್ಲಿ ಶ್ರೀ ಸ್ವಾಮಿಯ ಉತ್ಸವ ಮೂರ್ತಿಗಳನ್ನು ರಥದಲ್ಲಿ ಪ್ರತಿಷ್ಠಾಪಿಸಿ, ಸಂಪ್ರದಾಯದ ಆಚರಣೆಯಂತೆ ಕೋಟೆ ರಾಜಬೀದಿಯಲ್ಲಿ ಉತ್ಸವ ನಡೆಸಿದ ನಂತರ ದೇವಾಲಯದ ಆವರಣದಲ್ಲಿ ಪ್ರಾಖಾರೋತ್ಸವ ನಡೆಸಲಾಯಿತು, ನಂತರ ದೇವಾಲಯದ ಪ್ರಾಂಗಣದಲ್ಲಿರುವ ಶಮಿವೃಕ್ಷದ ಸಮೀಪ ಶ್ರೀ ಸ್ವಾಮಿಯ ಅಡ್ಡೆಯನ್ನು ಇಡಲಾಯಿತು. ಧಾರ್ಮಿಕ ವಿಧಿ ವಿಧಾನಗಳ ಆಚರಣೆಯಂತೆ ಪೂಜಾ ಮಹೋತ್ಸವ ಜರುಗಿದ ನಂತರ ಬನ್ನಿ ವೃಕ್ಷಕ್ಕೆ ಶಾಸಕ ಎಚ್.ಡಿ.ರೇವಣ್ಣ ಪೂಜೆ ಸಲ್ಲಿಸಿದರು, ನಂತರ ಅರ್ಚಕ ನಾರಾಯಣ ಭಟ್ಟರು ಕತ್ತಿಯಿಂದ ಬನ್ನಿ ಛೇದಿಸಿದರು.

ಹಿರಿಯ ಅರ್ಚಕರಾದ ರಾಮಸ್ವಾಮಿಭಟ್ಟರ ಮಾರ್ಗದರ್ಶನದಲ್ಲಿ ಅರ್ಚಕರಾದ ನಾರಾಯಣ ಭಟ್ಟರು, ರಾಮ ಭಟ್ಟರು ಹಾಗೂ ವಿಜಯಕುಮಾರ್ ಪೂಜಾ ಕೈಂಕರ್ಯ ನೆರವೇರಿಸಿದರು.

ಶ್ರೀ ಆಧ್ಯಾತ್ಮ ಕಾರ್ಯಾಲಯದಲ್ಲಿ ವೇದಾಭ್ಯಾಸ ಮಾಡುತ್ತಿರುವ ವಟುಗಳು ಶ್ರೀ ಸ್ವಾಮಿಯ ಶ್ಲೋಕಗಳನ್ನು ಪಟಿಸುತ್ತಾ ಕಾರ್ಯಕ್ರಮಕ್ಕೆ ವಿಶೇಷ ಮೆರಗನ್ನು ತಂದರು.

ಶಾಸಕ ಎಚ್.ಡಿ.ರೇವಣ್ಣ, ಪೂಜಾ ಮಹೋತ್ಸವದ ಸೇವಾರ್ಥದಾರರಾದ ಕಾಂತರಾಜು ಹಾಗೂ ಕುಟುಂಬ ಸದಸ್ಯರು, ಪುರಸಭಾ ಸದಸ್ಯ ಕುಮಾರಸ್ವಾಮಿ, ಉದ್ಯಮಿಗಳಾದ ಕೆಎಂಜಿ ಜಗದೀಶ್, ಉಮೇಶ್, ವೆಂಕಟೇಶ್, ಶಂಕರನಾರಾಯಣ ಐತಾಳ್, ಶಂಕರನಾರಾಯಣ, ವೇಣುಗೋಪಾಲ್, ರೇವಣ್ಣಾಚಾರ್, ಇತರರು ಉಪಸ್ಥಿತರಿದ್ದರು.

ಅರ್ಚಕರ ಪುತ್ರನೊರ್ವ ಭಕ್ತರಿಗೆ ಬನ್ನಿ ಪತ್ರೆ ವಿತರಿಸುವ ಸಂದರ್ಭದಲ್ಲಿ ನಾನು ನೀಡಿದಾಗ ಪಡಿಬೇಕು ಇಲ್ಲವೇ ಹೋಗುತ್ತಿರಬೇಕು ಎನ್ನುತ್ತಾ ಭಿಕ್ಷಕರಂತೆ ಬೇಡುತ್ತೀರಲ್ಲಾ ಎಂದು ಪರಿಹಾಸ್ಯ ಮಾಡುವ ರೀತಿಯಲ್ಲಿ ಭಕ್ತರಿಗೆ ರೇಗಿದಾಗ ಭಕ್ತರು ಆಕ್ರೋಶ ವ್ಯಕ್ತಪಡಿಸಿದರು. ಈತನ ವರ್ತನೆಯಿಂದ ಭಕ್ತರು ಬೇಸರಗೊಂಡು ಬನ್ನಿ ಪತ್ರೆ ಪಡೆಯದೇ ತೆರಳುತ್ತಿದ್ದ ದೃಶ್ಯ ಕಂಡುಬಂತು.