ಕುಷ್ಟಗಿ: ಪಟ್ಟಣದ ಗದಗ ವಾಡಿ ಮಾರ್ಗದಲ್ಲಿರುವ ₹31 ಕೋಟಿ ವೆಚ್ಚದ ರೈಲ್ವೆ ರಸ್ತೆ ಮೇಲ್ಸೇತುವೆ (ಆರ್‌ಒಬಿ) ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಬಾಕಿ ಉಳಿದಿರುವ ಕಾಮಗಾರಿಗಳನ್ನು ಅತಿ ಶೀಘ್ರದಲ್ಲಿ ಪೂರ್ಣಗೊಳಿಸಿ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಸಂಸದ ರಾಜಶೇಖರ ಹಿಟ್ನಾಳ ತಿಳಿಸಿದರು.

ಪಟ್ಟಣದ ರೈಲ್ವೆ ಮೇಲ್ಸೇತುವೆ ಕಾಮಗಾರಿ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಲ್ಸೇತುವೆಯ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಪೇಂಟಿಂಗ್ ಹಾಗೂ ವಿದ್ಯುತ್ ದೀಪಗಳ ಅಳವಡಿಕೆ ಸೇರಿದಂತೆ ಶೇ. 5ರಷ್ಟು ಕಾಮಗಾರಿ ಮಾತ್ರ ಬಾಕಿ ಉಳಿದಿದೆ. ಈ ಕಾಮಗಾರಿಗಳನ್ನು ಇನ್ನೆರಡು ದಿನಗಳಲ್ಲಿ ಪೂರ್ಣಗೊಳಿಸುವಂತೆ ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಕುಷ್ಟಗಿ ಮತ್ತು ಕೊಪ್ಪಳ ಮಾರ್ಗವಾಗಿ ಸಂಚರಿಸುವ ವಾಹನಗಳು ರೈಲ್ವೆ ಗೇಟ್ ಬಳಿ ರೈಲುಗಳ ಸಂಚಾರದ ಸಮಯದಲ್ಲಿ ದೀರ್ಘಕಾಲ ಕಾಯಬೇಕಾಗುತ್ತಿದೆ. ಇದರಿಂದ ವಾಹನ ಸವಾರರಿಗೆ ಸಮಯ ವ್ಯರ್ಥವಾಗುವ ಜತೆಗೆ ಸಂಚಾರಕ್ಕೂ ತೊಂದರೆಯಾಗುತ್ತಿದೆ. ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾದರೆ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಸಾರ್ವಜನಿಕರ ಬಹುದಿನಗಳ ನಿರೀಕ್ಷೆಯಲ್ಲಿರುವ ಈ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

ಸರ್ವಿಸ್ ರಸ್ತೆ ನಿರ್ಮಾಣ: ಮೇಲ್ಸೇತುವೆ ಸುತ್ತಮುತ್ತಲಿನ ಜಮೀನುಗಳಿಗೆ ಎತ್ತಿನ ಬಂಡಿ ಹಾಗೂ ಕೃಷಿ ವಾಹನಗಳಲ್ಲಿ ತೆರಳುವ ರೈತರಿಗೆ ತೊಂದರೆಯಾಗದಂತೆ ಸರ್ವಿಸ್ ರಸ್ತೆ ನಿರ್ಮಿಸಲಾಗುವುದು. ಮೇಲ್ಸೇತುವೆಯ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಿದ ಬಳಿಕ ಸರ್ವಿಸ್ ರಸ್ತೆ ನಿರ್ಮಾಣ ಕಾರ್ಯವನ್ನೂ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದ ಸಂಸದರು, ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಿದ ನಂತರ ಮೇಲ್ಸೇತುವೆಯನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಕಾಂಗ್ರೆಸ್‌ ಮುಖಂಡ ದೊಡ್ಡಬಸವನಗೌಡ ಪಾಟೀಲ್‌ ಬಯ್ಯಾಪುರ, ಲಾಡ್ಲೇಮಷಾಕ ದೋಟಿಹಾಳ, ಉಮೇಶ ಮಂಗಳೂರು, ಮಹಾಂತೇಶ ಅಗಸಿಮುಂದಿನ್‌, ಮೈನುದ್ದೀನ್‌ ಮುಲ್ಲಾ, ಮಾನಪ್ಪ ತಳವಾರ, ಬಸವರಾಜ ಹೊರಪ್ಯಾಟಿ, ನಜೀರಸಾಬ ಮೂಲಿಮನಿ ಇದ್ದರು.


ಕುಷ್ಟಗಿ-ಬೆಂಗಳೂರು ರೈಲು ಸಂಚಾರಕ್ಕೆ ಒತ್ತಾಯ: ಕುಷ್ಟಗಿಯಿಂದ ಬೆಂಗಳೂರಿಗೆ ರೈಲು ಸಂಚಾರ ಆರಂಭಿಸುವಂತೆ ರೈಲ್ವೆ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ವೀರೇಶ ಬಂಗಾರಶೆಟ್ಟರ ಹಾಗೂ ಸಮಿತಿಯ ಸದಸ್ಯರು ಸಂಸದ ರಾಜಶೇಖರ ಹಿಟ್ನಾಳ ಅವರನ್ನು ಒತ್ತಾಯಿಸಿದರು.

ಈಗಾಗಲೇ ಸಿಂಧನೂರು ನಗರದಿಂದ ರೈಲು ಸಂಚಾರ ಆರಂಭವಾಗಿದೆ. ಆದರೆ ಕುಷ್ಟಗಿಯಿಂದ ಇನ್ನೂ ರೈಲು ಸಂಚಾರ ಆರಂಭವಾಗದಿರುವುದೇಕೆ ಎಂದು ಪ್ರಶ್ನಿಸಿದ ಸಮಿತಿ ಸದಸ್ಯರು, ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕುಷ್ಟಗಿಯಿಂದ ಬೆಂಗಳೂರಿಗೆ ರೈಲು ಸಂಚಾರ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ರಾಜಶೇಖರ ಹಿಟ್ನಾಳ, ಈಗಾಗಲೇ ಈ ವಿಷಯವಾಗಿ ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಆದರೆ ರೈಲುಗಳ ಸ್ವಚ್ಛತೆ (ಕ್ಲೀನಿಂಗ್) ಹಾಗೂ ಸರ್ವಿಸ್‌ಗೆ ಸಂಬಂಧಿಸಿದ ಸಮಸ್ಯೆಗಳಿರುವುದಾಗಿ ಅಧಿಕಾರಿಗಳು ತಿಳಿಸಿದ್ದು, ಈ ಕುರಿತು ಮತ್ತೊಮ್ಮೆ ರೈಲ್ವೆ ಅಧಿಕಾರಿಗಳನ್ನು ಮುಖಾಮುಖಿಯಾಗಿ ಭೇಟಿ ಮಾಡಿ ಚರ್ಚಿಸೋಣ. ಸಮಸ್ಯೆಗಳ ಕುರಿತು ಸಮಗ್ರವಾಗಿ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸೋಣ ಎಂದು ತಿಳಿಸಿದರು.