ಸಾರಾಂಶ
ನಾಗಮಂಗಲ ತಾಲೂಕಿನ ಚುಂಚನಹಳ್ಳಿ ಗ್ರಾಪಂ ಅಧ್ಯಕ್ಷೆ ವಿಜಯಕುಮಾರಿ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸುವ ಜೊತೆಗೆ ಮುಂದಿನ 6 ವರ್ಷ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿ ಡಿ.ಸಂದೀಪ್ ಆದೇಶ ಹೊರಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ನಾಗಮಂಗಲ
ವೃತ್ತಿಯಲ್ಲಿ ಗುತ್ತಿಗೆದಾರರಾಗಿರುವ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯ ಪತಿ ನಿಯಮ ಉಲ್ಲಂಘಿಸಿ ಗ್ರಾಪಂನಲ್ಲಿ ವಿವಿಧ ಕಾಮಗಾರಿಗಳನ್ನು ನಿರ್ವಹಿಸಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ತಾಲೂಕಿನ ಚುಂಚನಹಳ್ಳಿ ಗ್ರಾಪಂ ಅಧ್ಯಕ್ಷೆ ವಿಜಯಕುಮಾರಿ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸುವ ಜೊತೆಗೆ ಮುಂದಿನ 6 ವರ್ಷ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿ ಡಿ.ಸಂದೀಪ್ ಆದೇಶ ಹೊರಡಿಸಿದ್ದಾರೆ.ತಾಲೂಕಿನ ಚುಂಚನಹಳ್ಳಿ ಗ್ರಾಪಂನ ಹಾಲಿ ಅಧ್ಯಕ್ಷೆ ವಿಜಯಕುಮಾರಿ ಅವರ ಪತಿ ದೇವರಾಜು ಎಂಬುವರು 2021-22ನೇ ಸಾಲಿನಲ್ಲಿ 14 ಮತ್ತು 15ನೇ ಹಣಕಾಸು ಯೋಜನೆಯಡಿ ಚರಂಡಿ, ಗ್ರಾಪಂ ಕಟ್ಟಡ ದುರಸ್ಥಿ, ಕೊಳವೆಬಾವಿ ಕೊರೆಸುವ ಕಾಮಗಾರಿ, ಹೂಳು ತೆಗೆಯುವುದು, ಸಿಸಿ ರಸ್ತೆ ಹಾಗೂ ರಾಂಪ್ ನಿರ್ಮಾಣ ಸೇರಿ ಒಟ್ಟು 9,40,772 ರು.ಗಳ ಕಾಮಗಾರಿಗಳನ್ನು ನಿರ್ವಹಿಸಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 48 (ಎ)(5)ನ್ನು ಉಲ್ಲಂಘಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ವಿಜಯಕುಮಾರಿ ವಿರುದ್ಧ ಕ್ರಮ ಜರುಗಿಸುವ ಕುರಿತು ಜಿಪಂ ಸಿಇಒ ಅವರು 2023ರ ಏ.19ರಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.
ವಿಜಯಕುಮಾರಿ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಸರ್ಕಾರದ ಆದೇಶ ಸಂಖ್ಯೆ ಗ್ರಾಪಂ 1135 ಗ್ರಾಪಂ ಅ2018 ರಡಿ ಅಧಿಕಾರ ಪ್ರತ್ಯಾಯೋಜಿಸಿರುವಂತೆ ವಿಚಾರಣೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ 2023ರ ಸೆ.26ರಂದು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರನ್ನು ಕೋರಲಾಗಿತ್ತು.ವಿಚಾರಣೆ ನಡೆಸಿ ಸಲ್ಲಿಸಿರುವ ವರದಿಯಲ್ಲಿ ವಿಜಯಕುಮಾರಿ ಅವರ ಪತಿ ದೇವರಾಜು ಗ್ರಾಪಂನ ಕಾಮಗಾರಿಗಳನ್ನು ಅವರ ಹೆಸರಿನಲ್ಲಿ ನಿರ್ವಹಣೆ ಮಾಡಿರುವುದು ಕಂಡು ಬಂದಿರುತ್ತದೆ.
ಗ್ರಾಪಂನ ಹಾಲಿ ಸದಸ್ಯ ಮನು ಅವರು ಈ ಹಿಂದೆ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ ಅವಧಿಯಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ(48)(4)ನ್ನು ಉಲ್ಲಂಘಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಸದರಿಯವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣದಡಿ ಕ್ರಮ ಜರುಗಿಸಲು ಹಾಗೂ ಗ್ರಾಪಂನ ಗ್ರೇಡ್-2 ಕಾರ್ಯದರ್ಶಿ ಕುಸುಮ ಮತ್ತು ಪಿಡಿಒ ಸೈಯದ್ ಇಮ್ರಾನ್ ಅಲಿ ವಿರುದ್ಧ ಕರ್ನಾಟಕ ನಾಗರೀಕ ಸೇವಾ ನಿಯಮಗಳು 1957ರನ್ವಯ ಕ್ರಮ ಕೈಗೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿ ಡಿ.ಸಂದೀಪ್ ಅವರು ಜಿಪಂ ಸಿಇಒ ಅವರಿಗೆ ಸೂಚಿಸಿದ್ದಾರೆ.