ಸಾರಾಂಶ
ಮೋದಿ ಅವರು ಸಂವಿಧಾನ ಇಟ್ಟು ಪೂಜೆ ಮಾಡಿದಲ್ಲದೆ, ನಮಸ್ಕಾರ ಮಾಡಿ ಸಂಸತ್ ಪ್ರವೇಶ ಮಾಡಿದರು. ಅಂಬೇಡ್ಕರ್ ಜಯಂತಿ ದಿನದಂದು ಕೇಂದ್ರ ಸರ್ಕಾರವು ಸರ್ಕಾರಿ ರಜೆಯನ್ನು ಘೋಷಣೆ ಮಾಡಿ ಐತಿಹಾಸಿಕ ತೀರ್ಮಾನ ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ದೇಶದ ಪ್ರತಿಯೊಬ್ಬರಿಗೂ ಸಮಾನ ಅವಕಾಶ, ಆರ್ಥಿಕ ಸಮಾನತೆ ದೊರೆತಾಗ ಮಾತ್ರ ಡಾ.ಬಿ.ಆರ್. ಅಂಬೇಡ್ಕರ್ ಕಂಡ ಕನಸು ನನಸಾಗಲು ಸಾಧ್ಯವಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಸಾಮಾಜಿಕ ಸಮಾನತೆ ದೊರೆಯದಿರುವುದು ಬೇಸರದ ಸಂಗತಿ ಎಂದು ಶಾಸಕ ಜಿ.ಟಿ. ದೇವೇಗೌಡ ತಿಳಿಸಿದರು.ವಿಜಯನಗರ 3ನೇ ಹಂತದ ಉದ್ಯಾನವನದಲ್ಲಿ ಆಯೋಜಿಸಿದ್ದ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಡಾ. ಅಂಬೇಡ್ಕರ್ 21ನೇ ಶತಮಾನದಲ್ಲಿ ಜಗತ್ತಿನ ಮಹಾನ್ ನಾಯಕರಾಗಿ ಹೊರ ಹೊಮ್ಮಿದ್ದಾರೆ. ಅವರಂತಹ ವಿಶ್ಚಜ್ಞಾನಿ ಬೇರೊಬ್ಬರು ಇಲ್ಲ. ಅದಕ್ಕಾಗಿಯೇ ಇಂದು ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲು ಕಾರಣವಾಗಿದೆ ಎಂದರು.ಮೋದಿ ಅವರು ಸಂವಿಧಾನ ಇಟ್ಟು ಪೂಜೆ ಮಾಡಿದಲ್ಲದೆ, ನಮಸ್ಕಾರ ಮಾಡಿ ಸಂಸತ್ ಪ್ರವೇಶ ಮಾಡಿದರು. ಅಂಬೇಡ್ಕರ್ ಜಯಂತಿ ದಿನದಂದು ಕೇಂದ್ರ ಸರ್ಕಾರವು ಸರ್ಕಾರಿ ರಜೆಯನ್ನು ಘೋಷಣೆ ಮಾಡಿ ಐತಿಹಾಸಿಕ ತೀರ್ಮಾನ ಮಾಡಲಾಗಿದೆ. ಕರ್ನಾಟಕದಲ್ಲಿ ಸಂವಿಧಾನದ ಪೀಠಿಕೆ ಓದಿಸುವ ಕಾರ್ಯಕ್ಕೆ ರಾಜ್ಯ ಸರ್ಕಾರ ಜಾರಿಗೆ ತಂದಿತ ಎಂದರು.ಸತ್ಯ ಎಂದಿಗೂ ಸಾಯಲ್ಲ, ಸುಳ್ಳು ಸತ್ತುಹೋಗುತ್ತದೆ. ಅಂಬೇಡ್ಕರ್ ಅವರ ಬದುಕು, ಬರಹ, ಹೋರಾಟ, ಶ್ರಮ, ನೋವು ಜೀವನದಲ್ಲಿ ಯಾರೂ ಅನುಭವಿಸಲು ಸಾಧ್ಯವಿಲ್ಲ. ಅಷ್ಟರ ಮಧ್ಯೆದಲ್ಲೂ ಯಾರ ಮೇಲೂ ಅತಿಕ್ರಮಣ ಮಾಡಲಿಲ್ಲ. ಶಾಂತಿ, ಸಹನೆ ಮತ್ತು ತಾಳ್ಮೆಯುತ ಹೋರಾಟ ಮಾಡಿದರು. ಹೋರಾಟದ ಮೂಲಕ ಶಿಕ್ಷಣ, ದೇವಾಲಯಗಳಿಗೆ ಪ್ರವೇಶ ಕೊಡಿಸಿದರು. ಮಹಿಳೆಯರಿಗೆ ಸಮಾನತೆ ಕೊಡಿಸಲು ರಾಜೀನಾಮೆ ನೀಡಿ ಹೋರಾಟ ಮಾಡಿದರು, ಕೃಷಿಕರ ಪರವಾಗಿ ಹೋರಾಟ ಮಾಡಿದ್ದರಿಂದಾಗಿ ಎಲ್ಲಾ ಜಾತಿ, ಧರ್ಮದವರಿಗೆ ಅನುಕೂಲವಾಗುವಂತೆ ಮತ್ತು ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗುವಂತೆ ಮಾಡಿದರು ಎಂದು ಅವರು ತಿಳಿಸಿದರು.ಸಂವಿಧಾನದಲ್ಲಿ ಪ್ರತಿ ಪ್ರಜೆಗೂ ಒಂದು ಮತದ ಹಕ್ಕು. ಗುಡಿಸಲಿನಲ್ಲಿ ವಾಸ ಮಾಡುವ ವ್ಯಕ್ತಿಯಿಂದ ಪ್ರಧಾನಿಗೂ ಒಂದು ಮತದ ಹಕ್ಕು ನೀಡಿದರು. ಇಂದು ಗ್ರಾಪಂನಿಂದ ಪಿಎಂ ತನಕ ಸಂವಿಧಾನದಡಿ ಕೆಲಸ ಮಾಡಬೇಕಿದೆ. ಸೊಸೈಟಿಯಲ್ಲಿ ಕೆಲಸ ಮಾಡುತ್ತಿದ್ದ ನಾನು, ಸಿದ್ದರಾಮನಹುಂಡಿಯಲ್ಲಿ ಹುಟ್ಟಿದ ಸಿದ್ದರಾಮಯ್ಯ ಸಿಎಂ, ಚಹಾ ಮಾರುತ್ತಿದ್ದ ಮೋದಿ ಅವರು ಪ್ರಧಾನಿಯಾಗಲು ಸಂವಿಧಾನವೇ ಕಾರಣ ಎಂದರು.ಸಮಾಜದ ಕಟ್ಟಕಡೆಯ ಶೋಷಿತ, ದಮನಿತ, ಹಿಂದುಳಿದ, ದುರ್ಬಲ ವರ್ಗದವರಿಗೆ ಧ್ವನಿ ಕೊಟ್ಟವರು. ಅನ್ಯಾಯ, ನೋವು ಮಾಡಿದ್ದಾರೆಂದು ಎಲ್ಲಿಯೂ ಬರೆದಿಲ್ಲ, ಯಾರಿಗೂ ಹೇಳಿಲ್ಲ. ಅಗಾಧವಾದ ಶಕ್ತಿಯನ್ನು ನೀಡಿದ್ದರೂ ಕೋಪ ಮಾಡಿಕೊಂಡಿರಲಿಲ್ಲ. ದೇವರಿಗೂ ಕೋಪ ಬಂದಿರಬಹುದು. ಅಂಬೇಡ್ಕರ್ ಗೆ ಮಾತ್ರ ಕೋಪ ಬರಲಿಲ್ಲ. ಯಾವುದೇ ವರ್ಗ, ಜನರ ಮೇಲೆ ಕೋಪ ಇರಲಿಲ್ಲ. ಸಮಾನತೆ, ಸುಂದರ ಬದುಕು ಕಟ್ಟಿಕೊಳ್ಳಬೇಕೆಂಬ ಕಾರಣಕ್ಕಾಗಿ ಶಿಕ್ಷಣ ಪಡೆಯುವಂತೆ ಮಾಡಲು ಮೊದಲ ಆದ್ಯತೆ ನೀಡಿದರು. ಅಂತಹ ಮಹಾನ್ ವ್ಯಕ್ತಿ ನೀಡಿರುವ ಸಂದೇಶ ಪಾಲಿಸಬೇಕು ಎಂದು ಅವರು ಕರೆ ನೀಡಿದರು.ವಿಶ್ರಾಂತ ಪ್ರಾಧ್ಯಾಪಕ ಡಾ.ಎನ್.ಎಂ. ತಳವಾರ್ ಅವರು ಮುಖ್ಯ ಭಾಷಣ ಮಾಡಿದರು. ಮುಖಂಡರಾದ ಮಂಜಪ್ಪ, ರವಿಕುಮಾರ್, ಮಂಜುನಾಥ್, ಅಭಿಷೇಕ್, ಪರಶಿವಮೂರ್ತಿ, ಚೈತನ್ಯಕುಮಾರ್, ಶಂಕರ್, ಸುವರ್ಣ ರೆಡ್ಡಿ, ತಂಗಂ, ವಿಜಯಕುಮಾರಿ ಮೊದಲಾದವರು ಇದ್ದರು.----ಕೋಟ್...ಡಾ. ಅಂಬೇಡ್ಕರ್ ಅವರು ಬ್ರಾಹ್ಮಣರ ವಿರೋಧಿ ಎನ್ನುವ ಮಾತನ್ನು ಹೇಳುವುದು ಸುಳ್ಳು. ಅವರೆಂದಿಗೂ ಬ್ರಾಹ್ಮಣರನ್ನು ವಿರೋಧಿಸಿಲ್ಲ, ಬ್ರಾಹ್ಮಣತ್ವವನ್ನು ವಿರೋಧಿಸಿದ್ದೇನೆ ಎಂದು ಹೇಳಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.- ಜಿ.ಟಿ. ದೇವೇಗೌಡ, ಶಾಸಕರು-----------------eom/mys/shekar/