ವಿಜಯನಗರ ಕ್ಷೇತ್ರಕ್ಕೆ ಸಮರ್ಪಕ ಅನುದಾನ ದೊರೆತಿಲ್ಲ

| Published : Nov 19 2024, 12:45 AM IST

ಸಾರಾಂಶ

ವಿಜಯನಗರ ಕ್ಷೇತ್ರದಲ್ಲಿ ತಿರುಗಾಡಿದರೆ ಜನರು ಸಮಸ್ಯೆ ಹೇಳುತ್ತಾರೆ. ಆದರೆ, ಸಮರ್ಪಕ ಅನುದಾನ ನೀಡುತ್ತಿಲ್ಲ.

ಹೊಸಪೇಟೆ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅನುದಾನ ಹಂಚಿಕೆಯಲ್ಲಿ‌ ವಿಜಯನಗರ ಕ್ಷೇತ್ರಕ್ಕೆ ಭಾರಿ ಅನ್ಯಾಯ ಆಗಿದೆ ಎಂದು ಕಾಂಗ್ರೆಸ್‌ ಶಾಸಕ ಎಚ್.ಆರ್‌. ಗವಿಯಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಆನಂದ ಸಿಂಗ್‌ ತಂದ ಅನುದಾನದಲ್ಲೇ ಕಳೆದ ಒಂದೂವರೆ ವರ್ಷ ಕೆಲಸ ನಡೆದಿದೆ. ಸರ್ಕಾರ ಜಿಲ್ಲಾ ಕೇಂದ್ರವಾಗಿರುವ ವಿಜಯನಗರ ಕ್ಷೇತ್ರಕ್ಕೆ ಅನುದಾನ ಒದಗಿಸಬೇಕು. ಹೊಸ ಜಿಲ್ಲೆ ಕಟ್ಟಲು ಅನುದಾನ ಅತಿ ಅವಶ್ಯವಾಗಿದೆ ಎಂದರು.

ವಿಜಯನಗರ ಕ್ಷೇತ್ರದಲ್ಲಿ ತಿರುಗಾಡಿದರೆ ಜನರು ಸಮಸ್ಯೆ ಹೇಳುತ್ತಾರೆ. ಆದರೆ, ಸಮರ್ಪಕ ಅನುದಾನ ನೀಡುತ್ತಿಲ್ಲ. ಹಾಗಾಗಿ ಮೊದಲು ಅನುದಾನ ಒದಗಿಸಬೇಕು ಎಂದು ಶಾಸಕ ಗವಿಯಪ್ಪ ಹೇಳಿದರು.

ಕೆಕೆಆರ್‌ಡಿಬಿಯಿಂದ ನೂತನ ವಿಜಯನಗರ ಜಿಲ್ಲೆಗೆ ಒಟ್ಟು ₹348 ಕೋಟಿ ಅನುದಾನ ಬಿಡುಗಡೆ ಆಗಿದೆ. ಆದರೆ, ಜಿಲ್ಲಾ ಕೇಂದ್ರ ಹೊಸಪೇಟೆಗೆ ಬರೀ ₹22 ಕೋಟಿ ದೊರೆತಿದೆ. ಅದರಲ್ಲಿ ಜಿಲ್ಲಾಸ್ಪತ್ರೆ ಕಟ್ಟಡಕ್ಕೆ ₹12 ಕೋಟಿ ಅನುದಾನ ನೀಡಿರುವೆ. ಇನ್ನುಳಿದ ₹8 ಕೋಟಿ ಅನುದಾನದಲ್ಲಿ ಕ್ಷೇತ್ರದಲ್ಲಿ ಏನು ಕೆಲಸ ಮಾಡೋಕಾಗುತ್ತದೆ ಎಂದು ಪ್ರಶ್ನಿಸಿದರು.

ವಿಜಯನಗರ ಜಿಲ್ಲೆಯ ಬೇರೆ ಕ್ಷೇತ್ರಗಳಿಗೆ ತಲಾ ₹60ರಿಂದ ₹70 ಕೋಟಿ ಅನುದಾನ ನೀಡಲಾಗಿದೆ. ಆದರೆ, ಜಿಲ್ಲಾ ಕೇಂದ್ರವನ್ನೇ ಕಡೆಗಣಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಗೆ ಬರುವ ಅನುದಾನದಲ್ಲಿ ಜಿಲ್ಲಾ ಕೇಂದ್ರದ‌ ಅಭಿವೃದ್ಧಿಗೆ ಉಸ್ತುವಾರಿ ಸಚಿವರು ಶೇ. 25ರಷ್ಟು ಅನುದಾನ ಮೀಸಲಿಡಬೇಕು. ಈ ಕೆಲಸವೂ ನಡೆದಿಲ್ಲ. ಜಿಲ್ಲಾ ಕೇಂದ್ರವಾಗಿರುವ ಹೊಸಪೇಟೆ ಅಭಿವೃದ್ಧಿಗೆ ಅನುದಾನ ಒದಗಿಸುವುದು ಅವಶ್ಯವಾಗಿದೆ. ₹200 ಕೋಟಿ ಅನುದಾನ ಒದಗಿಸಿದರೆ ಕ್ಷೇತ್ರ ಅಭಿವೃದ್ಧಿ ಕಾಣಲಿದೆ ಎಂದು ಹೇಳಿದರು.

ಕಾಂಗ್ರೆಸ್‌ ಶಾಸಕರು ಯಾರೂ ಮಾರಾಟಕ್ಕೆ ಇಲ್ಲ. ನಮ್ಮ ಎಲ್ಲ ಶಾಸಕರು ಒಗ್ಗಟ್ಟಾಗೇ ಇದ್ದೇವೆ. ನನ್ನನ್ನೂ ಸೇರಿಸಿಕೊಂಡಂತೆ ನಮ್ಮ ಯಾವ ಶಾಸಕರನ್ನು ಕೊಂಡುಕೊಳ್ಳಲು ಆಗೋಲ್ಲ ಎಂದು ಪ್ರಶ್ನೆಯೊಂದಕ್ಕೆ ಶಾಸಕ ಗವಿಯಪ್ಪ ಉತ್ತರಿಸಿದರು.