ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಪೇಟೆವಿಜಯನಗರದಲ್ಲಿ ಗೌರಿ-ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಜಿಲ್ಲೆಯಲ್ಲಿ ಈ ಬಾರಿ ಒಟ್ಟು ೨೦೩೦ಕ್ಕೂ ಹೆಚ್ಚು ಗಣೇಶನ ಮೂರ್ತಿಗಳು ಪ್ರತಿಷ್ಠಾಪನೆ ಆಗಲಿವೆ.ಹೌದು! ಜಿಲ್ಲಾದ್ಯಂತ ವಿಘ್ನನಿವಾರಕನ ಆರಾಧನೆಗೆ ಭಕ್ತರು, ತುದಿ ಗಾಲಿನಲ್ಲಿ ನಿಂತಿದ್ದು, ಕಳೆದ ಎರಡು ದಿನಗಳಿಂದ ಸಕಲ ಸಿದ್ದತೆ ನಡೆಸಿದ್ದಾರೆ. ಅದರಲ್ಲಿಯೂ ಜಿಲ್ಲಾ ಕೇಂದ್ರ ಹೊಸಪೇಟೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ.ಹೊಸಪೇಟೆ ನಗರ ೮೮, ಗ್ರಾಮೀಣ ಪೊಲೀಸ್ ಠಾಣೆ ೧೦೫, ಟಿಬಿ ಡ್ಯಾಂ ೨೭, ಚಿತ್ತವಾಡ್ಗಿ ೪೫, ಬಡಾವಣೆ ೪೫, ಹಂಪಿ ೧೫ ಹಾಗೂ ಕಮಲಾಪುರ ೬೯ ಒಟ್ಟು ೩೯೪ ಗಣೇಶ ಮೂರ್ತಿಗಳು.ಕೂಡ್ಲಿಗಿ ೧೦೨, ಗುಡೇಕೋಟೆ ೪೮, ಕೊಟ್ಟೂರು ೧೧೫, ಹೊಸಹಳ್ಳಿ ೧೩೮, ಅರಸಿಕೆರೆ ೧೭೬, ಚಿಗಟೇರಿ ೭೬, ಹಡಗಲಿ ೧೦೫, ಹೂವಿನ ಹಡಗಲಿ ೧೪೫, ಇಟಗಿ ೧೦೦ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ೨೦೩೦ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಗೊಳ್ಳಲಿವೆ. ಹಬ್ಬವನ್ನು ಶಾಂತಿಯುತವಾಗಿ ನಡೆಸುವ ನಿಟ್ಟಿನಲ್ಲಿ ವಿಜಯನಗರ ಜಿಲ್ಲಾ ಪೊಲೀಸ್ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ. ಸಿಸಿ ಕ್ಯಾಮೆರಾದ ಮೂಲಕ ನಿಗಾ ವಹಿಸಲಾಗುವುದು. ಹೊಸಪೇಟೆ ಸೇರಿದಂತೆ ಜಿಲ್ಲೆಯ ನಾನಾ ತಾಲೂಕುಗಳಲ್ಲಿ ಪ್ರಮುಖ ಸ್ಥಳ, ವೃತ್ತಗಳು, ರಸ್ತೆಗಳು ಸಿಸಿ ಕ್ಯಾಮೆರಾ ಕಾರ್ಯನಿರ್ವಹಿಸುತ್ತಿದೆಯೊ ಇಲ್ಲವೊ ಎಂಬುದನ್ನು ಎಸ್ಪಿ ಅರುಣಾಂಗ್ಷು ಗಿರಿ ಪರಿಶೀಲಿಸಿದರು. ಸ್ಥಳೀಯ ಸಂಸ್ಥೆಗಳಿಂದ ೨೪೧ ಹೆಚ್ಚುವರಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುತ್ತಿದ್ದು, ಹೊಸಪೇಟೆ ನಗರದಲ್ಲಿ ಈಗಾಗಲೇ ೧೦೯ ಸಿಸಿ ಕ್ಯಾಮೆರಾಗಳನ್ನು ನಗರಸಭೆಯಿಂದ ಅಳವಡಿಸಲಾಗಿದೆ. ಜಿಲ್ಲೆಯಲ್ಲಿ ಇರುವ ೯ ಸಾವಿರ ಸಿಸಿ ಕ್ಯಾಮೆರಾಗಳನ್ನು ಸಮೀಕ್ಷೆ ನಡೆಸಲಾಗಿದೆ. ಗಣೇಶ ಮೂರ್ತಿ ವಿಸರ್ಜನೆಗೊಳ್ಳುವ ಕಾಲುವೆ ಪ್ರದೇಶ ಹಾಗೂ ಗಣೇಶ ಹೊತ್ತು ತರುವ ಮೆರವಣಿಗೆ ರಸ್ತೆ, ವೃತ್ತಗಳನ್ನು ಪೊಲೀಸರು ಪರಿಶೀಲಿಸಿದ್ದು, ಒಟ್ಟಾರೆ, ಜಿಲ್ಲೆಯಲ್ಲಿ ಗೌರಿ-ಗಣೇಶ ಹಾಗೂ ಈದ್ ಮಿಲಾದ್ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಲು ಅಗತ್ಯ ಎಲ್ಲ ಕ್ರಮಗಳನ್ನು ಪೊಲೀಸ್ ಇಲಾಖೆ ಕೈಗೊಂಡಿದೆ. ಖರೀದಿ ಜೋರು:
ಗೌರಿ-ಗಣೇಶನ ಮೂರ್ತಿ, ಹೂ-ಹಣ್ಣ ಸೇರಿದಂತೆ ಪೂಜಾ ಸಾಮಾಗ್ರಿಗಳ ಖರೀದಿ ಜೋರಾಗಿಯೇ ನಡೆದಿತ್ತು. ಕಳೆದ ಎರಡು ದಿನಗಳಿಂದ ಹಬ್ಬದ ವಸ್ತುಗಳನ್ನು ಖರೀದಿಸಲು ಸಾರ್ವಜನಿಕರು ಹೊಸಪೇಟೆ ನಗರದ ಗಾಂಧಿ ಚೌಕ್, ಮೇನ್ ಬಜಾರ್, ತರಕಾರಿ ಮಾರುಕಟ್ಟೆ ಸೇರಿದಂತೆ ವಿವಿಧ ಭಾಗಗಳಲ್ಲಿ ಮುಗಿ ಬಿದ್ದಿದ್ದರು.