ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ವಿಜಯನಗರ ಜಿಲ್ಲೆ ವಿದ್ಯಾರ್ಥಿಗಳು ಸಜ್ಜು

| Published : Mar 21 2025, 12:34 AM IST

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ವಿಜಯನಗರ ಜಿಲ್ಲೆ ವಿದ್ಯಾರ್ಥಿಗಳು ಸಜ್ಜು
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯನಗರ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಸುವ್ಯವಸ್ಥಿತವಾಗಿ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಜಿಲ್ಲೆಯಲ್ಲಿ 21,429 ಹೊಸ ಮತ್ತು 1271 ಪುನರಾವರ್ತಿತ ವಿದ್ಯಾರ್ಥಿಗಳು ಸೇರಿ ಒಟ್ಟು 22,700 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಸುವ್ಯವಸ್ಥಿತವಾಗಿ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಜಿಲ್ಲೆಯಲ್ಲಿ 21,429 ಹೊಸ ಮತ್ತು 1271 ಪುನರಾವರ್ತಿತ ವಿದ್ಯಾರ್ಥಿಗಳು ಸೇರಿ ಒಟ್ಟು 22,700 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಮಾ. 21ರಿಂದ ಜಿಲ್ಲೆಯ 71 ಪರೀಕ್ಷಾ ಕೇಂದ್ರಗಳಲ್ಲಿ 22,700 ವಿದ್ಯಾರ್ಥಿಗಳು ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯಲ್ಲಿ 340 ಶಾಲೆಗಳಿದ್ದು, 120 ಸರ್ಕಾರಿ, 32 ವಸತಿ, 74 ಅನುದಾನಿತ ಹಾಗೂ 114 ಅನುದಾನರಹಿತ ಶಾಲೆಗಳಿವೆ. ಇದರಲ್ಲಿ 11,376 ಬಾಲಕರು, 11,324 ಬಾಲಕಿಯರು ಇದ್ದಾರೆ. ಹಾಜರಾತಿ ಕೊರತೆ ಇದ್ದ 1714 ವಿದ್ಯಾರ್ಥಿಗಳಿಗೆ ಈ ಬಾರಿ ಪ್ರವೇಶ ಪತ್ರ ಕೊಟ್ಟಿಲ್ಲ. ಪರೀಕ್ಷೆಗೆ ಒಟ್ಟು 962 ಪರೀಕ್ಷಾ ಸಿಬ್ಬಂದಿ ನಿಯೋಜನೆ ಮಾಡಿದ್ದು, 71 ಮುಖ್ಯ ಅಧೀಕ್ಷಕರು ಮತ್ತು 71 ಸ್ಕ್ವಾಡ್‌ ನಿಯೋಜನೆ ಮಾಡಲಾಗಿದೆ. ಮೊದಲ ದಿನ ಪ್ರಥಮ ಭಾಷೆ ಪರೀಕ್ಷೆ ನಡೆಯಲಿದೆ.

ಪರೀಕ್ಷಾ ಕೇಂದ್ರಗಳಲ್ಲಿ ಮೂಲಸೌಕರ್ಯ ವ್ಯವಸ್ಥೆ, ಕೊಠಡಿ ನಿರ್ವಹಣೆ, ಕುಡಿಯುವ ನೀರು, ಶೌಚಾಲಯ, ಬೆಳಕು, ಸೂಕ್ತ ಆಸನ ವ್ಯವಸ್ಥೆ ಸೇರಿದಂತೆ ಪರೀಕ್ಷೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ವೆಬ್ ಕಾಸ್ಟಿಂಗ್‌ಗೆ ವ್ಯವಸ್ಥೆ ಕೂಡ ಮಾಡಲಾಗಿದೆ.

ಜಿಲ್ಲೆಯ 71 ಪರೀಕ್ಷಾ ಕೇಂದ್ರಗಳಲ್ಲಿ ಈಗಾಗಲೇ ಆಯಾ ಬಿಇಒಗಳ ನಿರ್ದೇಶನದ ಮೇರೆಗೆ ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳ ನೋಂದಣಿ ಸಂಖ್ಯೆಯನ್ನು ನಮೂದು ಮಾಡಲಾಗಿದೆ. ಇನ್ನೂ ಪರೀಕ್ಷಾ ಮುನ್ನಾ ದಿನ ಬಿಇಒಗಳು ಸಭೆ ನಡೆಸಿ; ಮುಖ್ಯ ಅಧೀಕ್ಷಕರು ಮತ್ತು ಸ್ಕ್ವಾಡ್‌ಗಳಿಗೆ ಪರೀಕ್ಷಾ ಮಾರ್ಗಸೂಚಿ ಪಾಲಿಸಲು ನಿರ್ದೇಶನ ಕೂಡ ನೀಡಿದ್ದಾರೆ. ಪರೀಕ್ಷಾ ದಿನ ಝರಾಕ್ಸ್‌ ಅಂಗಡಿಗಳನ್ನು ಕೂಡ ಮುಚ್ಚಲು ನಿರ್ದೇಶನ ನೀಡಲಾಗಿದೆ. ನಕಲಿಗೆ ಅವಕಾಶ ಇಲ್ಲದಂತೆ ಪಾರದದರ್ಶಕವಾಗಿ ಪರೀಕ್ಷೆಗಳನ್ನು ನಡೆಸಲು ಈಗಾಗಲೇ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಸೂಚಿಸಿದ್ದು, ಅದರಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಆಯಾ ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಲು ನಿರ್ದೇಶನ ಕೂಡ ನೀಡಿದ್ದಾರೆ.

ಪರೀಕ್ಷಾ ಕೇಂದ್ರದಿಂದ ದೂರ ಇರುವ ಶಾಲೆಗಳ ಮಕ್ಕಳಿಗೆ ವಾಹನ ಸೌಕರ್ಯ, ಸಕಾಲಕ್ಕೆ ಬಸ್‌ಗಳ ವ್ಯವಸ್ಥೆ ಕೂಡ ಮಾಡಲಾಗುತ್ತಿದೆ. ಪೊಲೀಸರು ಕೂಡ ಪರೀಕ್ಷಾ ಕೇಂದ್ರದ ಸುತ್ತ ಗಸ್ತು ತಿರುಗಲಿದ್ದಾರೆ. ಏ. 4ರ ವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದ್ದು, ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ.

ಶುಭವಾಗಲಿ: ಕನ್ನಡಪ್ರಭ ಹಾರೈಕೆ:

ವಿಜಯನಗರ ಜಿಲ್ಲೆಯ 71 ಪರೀಕ್ಷಾ ಕೇಂದ್ರಗಳಲ್ಲಿ 22,700 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈ ಪೈಕಿ 11,376 ಬಾಲಕರು, 11,324 ಬಾಲಕಿಯರು ಇದ್ದಾರೆ. ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮವಾಗಿ ಬರೆದು, ಉತ್ತಮ ಅಂಕಗಳನ್ನು ಪಡೆಯಲಿ; ಆತಂಕ ಪಡದೇ ಧೈರ್ಯದಿಂದ ಮಕ್ಕಳು ಪರೀಕ್ಷೆ ಬರೆಯಲಿ ಎಂದು ಕನ್ನಡಪ್ರಭ ಜಿಲ್ಲೆ ಮಕ್ಕಳಿಗೆ ಶುಭ ಹಾರೈಸಿದೆ.

ವಿಜಯನಗರ ಜಿಲ್ಲೆಯಲ್ಲಿ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪಾರದರ್ಶಕ ಹಾಗೂ ನಿಯಮಾನುಸಾರ ಪರೀಕ್ಷೆ ನಡೆಸಲು ನಿರ್ದೇಶನ ನೀಡಲಾಗಿದೆ. ವಿದ್ಯಾರ್ಥಿಗಳು ಆತಂಕಗೊಳ್ಳದೇ ಪರೀಕ್ಷೆ ಬರೆಯಲಿ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ ಹೇಳಿದರು.