ಕೊರೋನಾ ಹಾವಳಿಗೆ ತತ್ತರಿಸಿದ್ದ ವಿಜಯನಗರ ಜಿಲ್ಲೆ ಜನತೆ

| Published : Dec 24 2023, 01:45 AM IST

ಕೊರೋನಾ ಹಾವಳಿಗೆ ತತ್ತರಿಸಿದ್ದ ವಿಜಯನಗರ ಜಿಲ್ಲೆ ಜನತೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊರೋನಾ ಮೂರು ಅಲೆಗಳ ಸಂದರ್ಭದಲ್ಲಿ ವಿಜಯನಗರ ಜಿಲ್ಲೆಯ ಜನರು ನಲುಗಿ ಹೋಗಿದ್ದರು. ಈಗ ನಾಲ್ಕನೇ ಅಲೆಯ ಮುನ್ಸೂಚನೆ ದೊರೆತಿದೆ. ಹೀಗಾಗಿ ಆಸ್ಪತ್ರೆಗಳು ಕೊರೋನಾ ಎದುರಿಸಲು ಸನ್ನದ್ಧವಾಗುತ್ತಿವೆ. ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ: ಕೊರೋನಾ ಹಾವಳಿಗೆ ವಿಜಯನಗರ ಜಿಲ್ಲೆ ಕೂಡ ತತ್ತರಿಸಿತ್ತು. ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳು ಕೂಡ ಆಗ ಸೇವೆ ನೀಡಿದ್ದವು. ಹಾಗಾಗಿ ಕೊರೋನಾ ನಿಯಂತ್ರಣಕ್ಕೆ ಬರಲು ಖಾಸಗಿ ವೈದ್ಯರು ಕೂಡ ಸಹಕರಿಸಿದ್ದರು. ಈಗ ಮತ್ತೆ ಕೊರೋನಾ ಕಾಣಿಸಿಕೊಂಡಿದ್ದು, ಖಾಸಗಿ ಹಾಗೂ ಸರ್ಕಾರಿ ಸೇವೆಗಳನ್ನು ಮತ್ತೆ ಜಿಲ್ಲಾಡಳಿತ ಸನ್ನದ್ಧಗೊಳಿಸುತ್ತಿದೆ.ಕೊರೋನಾಗೆ ತತ್ತರಿಸಿದ ವಿಜಯನಗರ ಜಿಲ್ಲೆಯಲ್ಲಿ ಮೊದಲ ಅಲೆಯಲ್ಲಿ 15,858 ಜನ ಪಾಸಿಟಿವ್‌ ಆಗಿದ್ದರು. ಈ ಪೈಕಿ 197 ಜನ ಮೃತಪಟ್ಟಿದ್ದರು. ಎರಡನೇ ಅಲೆಯಲ್ಲಿ 26,714 ಜನ ಪಾಸಿಟಿವ್‌ ಆಗಿದ್ದರು. 323 ಜನ ಮೃತಪಟ್ಟಿದ್ದರು. ಮೂರನೇ ಅಲೆಯಲ್ಲಿ 7,979 ಜನ ಪಾಸಿಟಿವ್‌ ಆಗಿದ್ದರು. ಈ ಪೈಕಿ 27 ಜನ ಮೃತಪಟ್ಟಿದ್ದರು. ಈಗ ಕೊರೋನಾ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ ಆರೋಗ್ಯ ಇಲಾಖೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ.

ಖಾಸಗಿ ಆಸ್ಪತ್ರೆಗಳ ಸೇವೆ: ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಲ್ಲಿ ದೀಪಾಲಿ ಆಸ್ಪತ್ರೆಯಲ್ಲಿ 40 ಬೆಡ್‌, ಲೈಫ್‌ಲೈನ್‌ ಆಸ್ಪತ್ರೆಯಲ್ಲಿ 20, ಶರನಂ ಆಸ್ಪತ್ರೆಯಲ್ಲಿ 20 ಬೆಡ್‌, ಕೆಎಲ್‌ಎಸ್‌ ಆಸ್ಪತ್ರೆಯಲ್ಲಿ 10 ಬೆಡ್‌ಗಳಲ್ಲಿ ಕೊರೋನಾ ಪಾಸಿಟಿವ್‌ ಆದವರಿಗೆ ಕಾಯ್ದಿರಿಸಿ ಚಿಕಿತ್ಸೆ ನೀಡಲಾಗಿತ್ತು. ಈಗ ಮತ್ತೆ ಈ ಆಸ್ಪತ್ರೆಗಳು ಸೇವೆ ನೀಡಲು ಮುಂದೆ ಬಂದಿದ್ದು, ಕೊರೋನಾ ಅಬ್ಬರ ಹೆಚ್ಚಾದರೆ ಈ ಆಸ್ಪತ್ರೆಗಳಲ್ಲೂ ಸೇವೆ ಲಭ್ಯವಾಗಲಿದೆ.ಕೊರೋನಾದ ಒಂದನೇ, ಎರಡನೇ ಮತ್ತು ಮೂರನೇ ಅಲೆಯಲ್ಲಿ ಈ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ. ಖಾಸಗಿ ಆಸ್ಪತ್ರೆಗಳ ಬಿಲ್‌ ಅನ್ನು ಜನರೇ ಪಾವತಿ ಮಾಡಿದ್ದಾರೆ. ಕೆಲವು ಖಾಸಗಿ ಕಂಪನಿಗಳ ಉದ್ಯೋಗಿಗಳು ಆರೋಗ್ಯ ವಿಮೆಯಿಂದ ಪಾವತಿ ಮಾಡಿದ್ದರೆ, ಇನ್ನೂ ಹಲವರು ನೇರ ಪಾವತಿ ಮಾಡಿದ್ದಾರೆ. ಈ ಆಸ್ಪತ್ರೆಗಳ ಬಿಲ್‌ ಸರ್ಕಾರ ಪಾವತಿ ಮಾಡಿಲ್ಲ.

ಈ ಆಸ್ಪತ್ರೆಗಳಲ್ಲಿ ಕೊರೋನಾ ಪಾಸಿಟಿವ್‌ ಇದ್ದವರಿಗೆ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಪರವಾನಗಿ ನೀಡಿತ್ತು. ಈ ಬಾರಿಯೂ ಎಲ್ಲ ಕ್ರಮಗಳನ್ನು ಕೈಗೊಂಡು ಪರವಾನಗಿ ನೀಡಲು ಜಿಲ್ಲಾಡಳಿತ ಸನ್ನದ್ಧವಾಗಿದೆ. ಹಾಗಾಗಿ ಸರ್ಕಾರಿ ಆಸ್ಪತ್ರೆಗಳ 830 ಬೆಡ್‌ಗಳ ಜೊತೆಗೆ ಖಾಸಗಿ ಆಸ್ಪತ್ರೆಗಳ ಬೆಡ್‌ಗಳು ಕೂಡ ಲಭ್ಯವಾಗಲಿವೆ.

ಆರೋಗ್ಯ ಧಾಮ ಮೂವರು: ಕಳೆದ ವರ್ಷ ಕೋವಿಡ್‌ ವೇಳೆ ಹೂವಿನಹಡಗಲಿಯ ಆರೋಗ್ಯಧಾಮಕ್ಕೆ ಮೂವರಿಗೆ ಸುವರ್ಣ ಆರೋಗ್ಯ ಟ್ರಸ್ಟ್‌ನಿಂದ ಶಿಫಾರಸು ಮಾಡಲಾಗಿತ್ತು. ಈ ಆರೋಗ್ಯ ಧಾಮದಲ್ಲಿ ಮೂವರು ಚಿಕಿತ್ಸೆ ಪಡೆದಿದ್ದು, ಚಿಕಿತ್ಸೆ ವೆಚ್ಚ ₹1,56,900ನ್ನು ಸರ್ಕಾರವೇ ಪಾವತಿ ಮಾಡಿದೆ. ಉಳಿದಂತೆ ಜಿಲ್ಲೆಯ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಬಿಲ್‌ ಪಾವತಿ ಮಾಡಲಾಗಿಲ್ಲ.

ವಿಜಯನಗರ ಜಿಲ್ಲೆಯಲ್ಲಿ ಎರಡನೆಯ ಅಲೆ ಭಾರೀ ತೊಂದರೆ ನೀಡಿತ್ತು. ಈ ವೇಳೆ 323 ಜನ ಮೃತಪಟ್ಟಿದ್ದರು. ಜಿಂದಾಲ್‌ ಸೇರಿದಂತೆ ಬಳ್ಳಾರಿ ವಿಮ್ಸ್ ಮತ್ತು ಟ್ರಾಮಾ ಕೇರ್‌ ಸೆಂಟರ್‌ಗಳಲ್ಲಿ ಜನರು ಚಿಕಿತ್ಸೆ ಪಡೆದಿದ್ದರು. ಅಲ್ಲದೇ ಕೊಪ್ಪಳ, ಗದಗ ಜಿಲ್ಲಾಸ್ಪತ್ರೆಗಳಿಗೂ ತೆರಳಿ ಜನರು ಚಿಕಿತ್ಸೆ ಪಡೆದಿದ್ದರು. ಈಗ ಮತ್ತೆ ಕೊರೋನಾ ಕಾಣಿಸಿಕೊಂಡಿರುವುದರಿಂದ ಮುನ್ನೆಚ್ಚರಿಕೆ ಕ್ರಮ ವಹಿಸಿಕೊಂಡಿರುವ ಆರೋಗ್ಯ ಇಲಾಖೆ ಈಗಾಗಲೇ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈಗಾಗಲೇ ಖಾಸಗಿ ಆಸ್ಪತ್ರೆಗಳ ವೈದ್ಯರ ಜತೆಗೆ ಒಂದು ಸುತ್ತಿನ ಮಾತುಕತೆ ನಡೆಸಲಾಗಿದ್ದು, ಖಾಸಗಿ ಆಸ್ಪತ್ರೆಗಳ ವೈದ್ಯರು ಕೂಡ ಬೆಡ್‌ಗಳನ್ನು ಕಾಯ್ದಿರಿಸಿ ಸೇವೆ ನೀಡಲು ಮುಂದಾಗಿದ್ದಾರೆ.

ಕೊರೋನಾ ವೇಳೆ ಖಾಸಗಿ ಆಸ್ಪತ್ರೆಯವರು ವಿಜಯನಗರ ಜಿಲ್ಲೆಯಲ್ಲಿ ಸೇವೆ ನೀಡಿದ್ದಾರೆ. ಇನ್ನೂ ಹೂವಿನಹಡಗಲಿಯ ಆರೋಗ್ಯ ಧಾಮಕ್ಕೆ ಸುವರ್ಣ ಆರೋಗ್ಯ ಟ್ರಸ್ಟ್‌ ವತಿಯಿಂದ ಮೂವರು ಪಾಸಿಟಿವ್‌ ಹೊಂದಿವರಿಗೆ ರೇಫರ್‌ ಮಾಡಲಾಗಿತ್ತು. ₹1,56,900 ಯನ್ನು ಸರ್ಕಾರ ಪಾವತಿ ಮಾಡಿದೆ. ಉಳಿದಂತೆ ಖಾಸಗಿ ಆಸ್ಪತ್ರೆಗಳಿಗೆ ಪಾವತಿ ಮಾಡಲಾಗಿಲ್ಲ ಎಂದು ವಿಜಯನಗರ ಡಿಎಚ್‌ಒ ಡಾ. ಶಂಕರ್‌ ನಾಯ್ಕ ಹೇಳಿದ್ದಾರೆ.