ಸಾರಾಂಶ
ಜಿಪಂ ಸಿಇಒ ಆಗಿದ್ದ ಸದಾಶಿವಪ್ರಭು ಅವರ ಜಾಗಕ್ಕೆ ಈಗ ಹೊಸಪೇಟೆ ಸಹಾಯಕ ಆಯುಕ್ತ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಂ ಶಾ ಅವರನ್ನು ನೇಮಕ ಮಾಡಲಾಗಿದೆ.
ಹೊಸಪೇಟೆ: ವಿಜಯನಗರ ಜಿಪಂ ಸಿಇಒ ಹುದ್ದೆ ಈಗ ಮತ್ತೊಮ್ಮೆ ಶಾಸಕ ಎಚ್.ಆರ್. ಗವಿಯಪ್ಪ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ.
ಜಿಪಂ ಸಿಇಒ ಆಗಿದ್ದ ಸದಾಶಿವಪ್ರಭು ಅವರ ಜಾಗಕ್ಕೆ ಈಗ ಹೊಸಪೇಟೆ ಸಹಾಯಕ ಆಯುಕ್ತ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಂ ಶಾ ಅವರನ್ನು ನೇಮಕ ಮಾಡಲಾಗಿದೆ. ಈ ಸ್ಥಳಕ್ಕೆ ಶಾಸಕರ ಜೊತೆಗೆ ಚರ್ಚಿಸದೇ ನೇಮಕ ಮಾಡಲಾಗಿದೆ ಎಂಬುದು ಜಿಲ್ಲೆಯ ಶಾಸಕರ ವಲಯದಲ್ಲಿ ಕೇಳಿ ಬರುತ್ತಿರುವ ಮಾತುಗಳು. ಜಿಪಂ ಸಿಇಒ ಹುದ್ದೆಗೆ ಅಕ್ರಂ ಶಾ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರು ನಿಯೋಜಿಸಿದ್ದಾರೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಬಳಿ ಜಿಲ್ಲೆಯ ಶಾಸಕರು ಸೇರಿ ಚರ್ಚಿಸುತ್ತೇವೆ ಎಂದು ಶಾಸಕ ಎಚ್.ಆರ್. ಗವಿಯಪ್ಪ ಹೇಳಿದ್ದಾರೆ.ಈ ಹಿಂದೆ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನದ ನೇಮಕಾತಿ ವಿಚಾರದಲ್ಲೂ ಶಾಸಕ ಎಚ್.ಆರ್. ಗವಿಯಪ್ಪ ಮುನಿಸಿಕೊಂಡಿದ್ದರು. ಈಗ ಜಿಪಂ ಸಿಇಒ ನಿಯೋಜನೆ ವಿಚಾರದಲ್ಲೂ ಶಾಸಕರು ಹಾಗೂ ಸಚಿವರ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ.
ಜಿಲ್ಲೆಯ ಪ್ರಮುಖ ಹುದ್ದೆಗಳ ನೇಮಕಾತಿ ವಿಷಯದಲ್ಲಿ ಜಿಲ್ಲೆಯ ಶಾಸಕರ ಜೊತೆಗೆ ಚರ್ಚಿಸಬೇಕು ಎಂಬುದು ಸಂಪ್ರದಾಯ. ಆದರೆ, ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಶಾಸಕರ ಜೊತೆಗೆ ಚರ್ಚಿಸದೇ ನಿಯೋಜನೆ ಮಾಡಿದ್ದಾರೆ. ಇನ್ನು ಮಣಿಪುರ ಮೂಲದ ಐಎಎಸ್ ಆಫೀಸರ್ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಂ ಶಾ ಅವರ ಮೇಲೆ ಸಚಿವ ಜಮೀರ್ ಅಹಮದ್ ಖಾನ್‌ಗೆ ವಿಶೇಷ ಪ್ರೀತಿ ಇದೆ. ಹಾಗಾಗಿ ಜಿಪಂ ಸಿಇಒ ಹುದ್ದೆ ಲಭಿಸಿದೆ ಎಂದು ಹೇಳಲಾಗುತ್ತಿದೆ. ಐಎಎಸ್ ಅಧಿಕಾರಿಗಳ ವರ್ಗಾವಣೆ ವಿಚಾರ ಈಗ ಶಾಸಕರು ಹಾಗೂ ಸಚಿವರ ನಡುವೆ ಗುದ್ದಾಟಕ್ಕೆ ಕಾರಣವಾಗಿದ್ದು, ಸಿಎಂ ಸಿದ್ದರಾಮಯ್ಯ ಬಳಿಯೂ ಈ ವಿಷಯ ಚರ್ಚೆಗೆ ಬರಲಿದೆ ಎಂದು ಹೇಳಲಾಗುತ್ತಿದೆ.ಜಿಪಂ ಸಿಇಒ ಹುದ್ದೆ ಬಗ್ಗೆ ಜಿಲ್ಲೆಯ ಶಾಸಕರು ನನ್ನ ಬಳಿ ಚರ್ಚಿಸಿದ್ದಾರೆ. ಹೊಸಪೇಟೆ ಎಸಿ ಆಗಿದ್ದ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಂ ಶಾ ಅವರನ್ನು ನೇಮಕ ಮಾಡಲಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಬಳಿ ಚರ್ಚಿಸಲಾಗುವುದು ಎನ್ನುತ್ತಾರೆ ಶಾಸಕ ಎಚ್.ಆರ್. ಗವಿಯಪ್ಪ.