ಕಲುಬುರ್ಗಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಂಚಿನ ಪ್ರತಿಮೆಯನ್ನು ತೆರವುಗೊಳಿಸಿರುವುದು ಸರಿಯಲ್ಲ. ಅಲ್ಲಿನ ಮಹಾನಗರ ಪಾಲಿಕೆ ಅಧಿಕಾರಿಗಳು ರಾತ್ರೋ ರಾತ್ರಿ ಪ್ರತಿಮೆಯನ್ನು ತೆರವುಗೊಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಹೊಸಪೇಟೆ
ಕಲುಬುರ್ಗಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಂಚಿನ ಪ್ರತಿಮೆಯನ್ನು ತೆರವುಗೊಳಿಸಿರುವುದು ಸರಿಯಲ್ಲ. ಅಲ್ಲಿನ ಮಹಾನಗರ ಪಾಲಿಕೆ ಅಧಿಕಾರಿಗಳು ರಾತ್ರೋ ರಾತ್ರಿ ಪ್ರತಿಮೆಯನ್ನು ತೆರವುಗೊಳಿಸಿದ್ದಾರೆ. ಅದು ಅಲ್ಲದೆ ಕಸದ ಗಾಡಿಯಲ್ಲಿ ಪ್ರತಿಮೆಯನ್ನು ತೆರವುಗೊಳಿಸಿದ್ದಕ್ಕೆ ಕಾರಣವಾದ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಈ ಘಟನೆ ಕುರಿತಂತೆ ರಾಜ್ಯ ಸರ್ಕಾರ ಸೂಕ್ತ ತನಿಖೆ ನಡೆಸಬೇಕು ಎಂದು ಕುರುಬರ ಸಂಘ ಒತ್ತಾಯಿಸುತ್ತದೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ವಿಜಯನಗರ ಜಿಲ್ಲಾ ಕುರುಬರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಎಲ್. ಸಿದ್ದನಗೌಡ ಹೇಳಿದರು.ಇಲ್ಲಿನ ಪತ್ರಿಕಾ ಭವನದಲ್ಲಿ ಸೋಮವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಲುಬುರ್ಗಿಯಲ್ಲಿ ಕುರುಬ ಸಮಾಜದ ವತಿಯಿಂದ ಸ್ಥಾಪಿಸಲಾದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಂಚಿನ ಪ್ರತಿಮೆಯನ್ನು ಯಾವುದೇ ನೋಟೀಸು ನೀಡದೆ ಅಲ್ಲಿನ ಮಹಾನಗರ ಪಾಲಿಕೆ ಅಧಿಕಾರಿಗಳು ರಾತ್ರೋ ರಾತ್ರಿ ಪ್ರತಿಮೆಯನ್ನು ತೆರವುಗೊಳಿಸಿರುವುದನ್ನು ಕುರುಬರ ಸಂಘ ತೀವ್ರವಾಗಿ ಖಂಡಿಸುತ್ತದೆ. ಪ್ರತಿಮೆ ಪ್ರತಿಷ್ಠಾಪನೆ ಮಾಡಿ ಇನ್ನೇನು ಬೆಳಗ್ಗೆ ಅನಾವರಣವಾಗಬೇಕು ಎನ್ನುವಾಗ ಪ್ರತಿಮೆಯನ್ನು ತೆರವುಗೊಳಿಸಿದವರ ಹಿಂದಿನ ಉದ್ದೇಶ ಏನು ಎಂದು ಅವರು ಪ್ರಶ್ನಿಸಿದರು.ಮಾಜಿ ಸಿಎಂ ಸಿದ್ದರಾಮಯ್ಯನವರ ಪ್ರತಿಮೆಯನ್ನು ಕಲುಬುರ್ಗಿಯಲ್ಲಿ ಈ ಹಿಂದೆ ಇದ್ದ ಸ್ಥಳದಲ್ಲಿಯೇ ಮರು ಪ್ರತಿಷ್ಠಾಪನೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಸಲಾಗುತ್ತಿದೆ ಎಂದು ಅವರು ಹೇಳಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ ಅದೇ ಸ್ಥಳದಲ್ಲೇ ಮರು ಸ್ಥಾಪನೆ ಕುರಿತು ಕಾಲವಕಾಶವನ್ನು ಕುರುಬ ಸಂಘದ ರಾಜ್ಯ ಸಮಿತಿ ತೀರ್ಮಾನದಂತೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ರೂಪಿಸಲಾಗುವುದು ಎಂದು ಅವರು ಹೇಳಿದರು.ರಾಜ್ಯ ಕುರುಬ ಸಂಘದ ನಿರ್ದೇಶಕರಾದ ಕೆ.ಎಂ.ಹಾಲಪ್ಪ ಮಾತನಾಡಿ, ರಾಜ್ಯದ ಎಲ್ಲಾ ಸಮುದಾಯದ ಜನಮೆಚ್ಚಿದ ನಾಯಕ ಸಿದ್ದರಾಮಯ್ಯನವರ ಪ್ರತಿಮೆಯನ್ನು ಕಲುಬುರ್ಗಿ ಮಹಾನಗರ ಪಾಲಿಕೆ ತೆರವುಗೊಳಿಸಿರುವುದು ಸಿದ್ದರಾಮಯ್ಯನವರಿಗೆ ಮಾಡಿದ ಅವಮಾನವಾಗಿದೆ. ಇದನ್ನು ಕುರುಬರ ಸಂಘ ತೀವ್ರವಾಗಿ ಖಂಡಿಸುತ್ತದೆ. ಕಲುಬುರ್ಗಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರ ಪ್ರತಿಮೆ ತೆರವುಗೊಳಿಸಿದ ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತೆ ಅದೇ ಸ್ಥಳದಲ್ಲಿ ಪ್ರತಿಮೆ ಪ್ರತಿಷ್ಠಾಪಿಸಲು ಅವಕಾಶ ನೀಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರವಾದ ಹೋರಾಟ ನಡೆಸಲಾಗುವುದು ಎಂದು ಅವರು ಹೇಳಿದರು.
ವಿಜಯನಗರ ಜಿಲ್ಲೆಯ ಹೊಸಪೇಟೆಯ ಯಾವುದಾದರೂ ಪ್ರಮುಖ ವೃತ್ತದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ನಗರಸಭೆಯಿಂದ ಅನುಮತಿ ಪಡೆದುಕೊಂಡು ಸಿದ್ದರಾಮಯ್ಯನವರ ಪ್ರತಿಮೆಯನ್ನು ಇನ್ನು ಆರು ತಿಂಗಳಲ್ಲಿ ಪ್ರತಿಷ್ಠಾಪಿಸಲಾಗುವುದು ಎಂದು ಅವರು ಹೇಳಿದರು.ಕುರುಬರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಜ್ಜಿಗಿ ನಾಗರಾಜ, ಕುರುಬರ ಸಂಘದ ಮುಖಂಡರಾದ ಕೆ. ಬಸವರಾಜ, ಗಂಟೆ ಸೋಮಶೇಖರ್, ಬಂದಿ ಪಂಪಾಪತಿ, ಜ್ಞಾನದೇವ, ಆರ್.ಆರ್. ತಾಯಪ್ಪ, ಮರಿ ರಾಮಣ್ಣ, ಕೆ.ಆರ್. ವೆಂಕಟೇಶ್ ಸೇರಿದಂತೆ ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.