ಕುರುಗೋಡು ತಾಲೂಕಿನ ಕೋಳೂರು ಗ್ರಾಮದಲ್ಲಿ ಸಲ್ಲೇಖನ ವ್ರತದ ಮೇಲೆ ಬೆಳಕು ಚೆಲ್ಲುವ ನಾಲ್ಕು ಜಿನಮೂರ್ತಿ ಶಿಲ್ಪಗಳನ್ನು ವಿಜಯನಗರ ತಿರುಗಾಟ ತಂಡ ಪತ್ತೆಹಚ್ಚಿದೆ. ಈ ಪ್ರದೇಶದಲ್ಲಿ ಈ ಹಿಂದೆ ಜೈನಧರ್ಮದವರು ವಾಸವಾಗಿದ್ದರು ಎನ್ನುವುದಕ್ಕೆ ಈ ನಾಲ್ಕು ಶಿಲ್ಪಗಳು ಸಾಕ್ಷಿಯಾಗಿ ನಿಂತಿವೆ.

ಕುರುಗೋಡು: ತಾಲೂಕಿನ ಕೋಳೂರು ಗ್ರಾಮದಲ್ಲಿ ಸಲ್ಲೇಖನ ವ್ರತದ ಮೇಲೆ ಬೆಳಕು ಚೆಲ್ಲುವ ನಾಲ್ಕು ಜಿನಮೂರ್ತಿ ಶಿಲ್ಪಗಳನ್ನು ವಿಜಯನಗರ ತಿರುಗಾಟ ತಂಡ ಪತ್ತೆಹಚ್ಚಿದೆ.

ಅವುಗಳಲ್ಲಿ ಒಂದು ಶಿಲ್ಪ 7 ಅಡಿ ಎತ್ತರ, 3 ಅಡಿ ಅಗಲವಿದ್ದರೆ, ಉಳಿದ ಮೂರು ಶಿಲ್ಪಗಳು 5 ಅಡಿ ಎತ್ತರ, 3 ಅಡಿ ಅಗಲವಿದೆ. ಸುಂದರವಾದ ನಾಲ್ಕು ಜಿನ ಶಿಲ್ಪಗಳ ಮುಕ್ಕೊಡೆಯ ಕೆಳಗೆ ಪದ್ಮಾಸನದಲ್ಲಿ ಕುಳಿತ ಜಿನ ಮೂರ್ತಿ ಶಿಲ್ಪಗಳನ್ನು ಕೆತ್ತಲಾಗಿದೆ. ಜಿನಮೂರ್ತಿಗಳ ಮೇಲೆ ಎಡಬದಿ ಚಂದ್ರ ಮತ್ತು ಬಲಬದಿ ಸೂರ್ಯನ ಚಿತ್ರಗಳಿವೆ. ತಳಭಾಗದಲ್ಲಿ ಹಸು ಮತ್ತು ಖಡ್ಗದ ಚಿತ್ರಗಳ ಕೆತ್ತಲಾಗಿದೆ. ಈ ಶಿಲ್ಪ ನಾಶಮಾಡಿದವರು ಹಸುಕೊಂದ ಪಾಪಕ್ಕೆ ಗುರಿಯಾಗುವರು ಎಂಬುದಾಗಿ ಈ ಚಿತ್ರ ಸೂಚಿಸುತ್ತದೆ. ಆದರೆ ಇಲ್ಲಿರುವ ಯಾವ ಶಿಲ್ಪಗಳಲ್ಲೂ ಲಿಪಿ ಇಲ್ಲ ಎಂದು ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಹಿರಿಯ ಶ್ರೇಣಿ ಸಹಾಯಕ ಪ್ರಾಧ್ಯಾಪಕ ಗೋವಿಂದ ತಿಳಿಸಿದರು.

ಈ ಪ್ರದೇಶದಲ್ಲಿ ಈ ಹಿಂದೆ ಜೈನಧರ್ಮದವರು ವಾಸವಾಗಿದ್ದರು ಎನ್ನುವುದಕ್ಕೆ ಈ ನಾಲ್ಕು ಶಿಲ್ಪಗಳು ಸಾಕ್ಷಿಯಾಗಿ ನಿಂತಿವೆ. ಇವುಗಳನ್ನು ಸ್ಥಳೀಯರು ವಿವಿಧ ದೇವರುಗಳ ಹೆಸರಿನಲ್ಲಿ ಪೂಜಿಸುತ್ತಿದ್ದಾರೆ ಎಂದು ದೃಶ್ಯಕಲಾ ವಿಭಾಗದ ಕೃಷ್ಣೇಗೌಡ ಹೇಳಿದರು.

ಗ್ರಾಮದ ಮಧ್ಯಭಾಗದಲ್ಲಿರುವ ಪುರಾತನ ಸೂರ್ಯನಾರಾಯಣ ದೇವಸ್ಥಾನದಲ್ಲಿ ನಾಲ್ಕು ಶಾಸನಗಳು ದೊರೆತಿವೆ. ದೇವಸ್ಥಾನದಲ್ಲಿರುವ 103 ಸಾಲಿನ ಬೃಹತ್ ಶಿಲಾ ಶಾಸನದ ಎರಡೂ ಬದಿಗೆ ಸಂಸ್ಕೃತ ಭಾಷೆಯನ್ನು ಕನ್ನಡ ಲಿಪಿಯಲ್ಲಿ ಬರೆಯಲಾಗಿದೆ. ಈ ಶಾಸನವು ಚಾಲುಕ್ಯ ಜಗದೇಕಮಲ್ಲನ ಕಾಲಾವಧಿಯ ಪಾಳೆಗಾರನಾಗಿದ್ದ ಇಮ್ಮಡಿ ಭೀಮರಸನಿಗೆ ಸೇರಿದ್ದಾಗಿದೆ. ಇದು ಬಳ್ಳಾರಿ ಜಿಲ್ಲಾ ಶಾಸನ ಸಂಪುಟದಲ್ಲಿ ಪ್ರಕಟವಾಗಿದೆ. ಶಾಸನದಲ್ಲಿ ನಂದ ಮತ್ತು ಮೌರ್ಯರ ಉಲ್ಲೇಖ ಇರುವುದನ್ನು ಗಮನಿಸಿದ ತಂಡವು ಗ್ರಾಮದಲ್ಲಿ ನಂದ ಮತ್ತು ಮೌರ್ಯರ ಕಾಲದ ಕುರುಹುಗಳು ದೊರೆಯಬಹುದು ಎಂದು ಕಾರ್ಯಕ್ಷೇತ್ರಕ್ಕೆ ತೆರಳಿದಾಗ ಜೈನಧರ್ಮ ಸಂಸ್ಕೃತಿ ಪ್ರತೀಕವಾದ ಮಾಹಿತಿ ನೀಡುವ ಜಿನಮೂರ್ತಿಗಳೆಂದು ತಿಳಿದು ಬಂದವು ಎಂದು ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಎಚ್. ತಿಪ್ಪೇಸ್ವಾಮಿ ತಿಳಿಸಿದರು.

ಸ್ಥಳೀಯರಾದ ವಕೀಲ ಕೆ. ಲಕ್ಷ್ಮಣ, ಮಲ್ಲಿಕಾರ್ಜುನ, ತಿರುಗಾಟ ತಂಡದ ಎಚ್. ತಿಪ್ಪೇಸ್ವಾಮಿ, ಗೋವಿಂದ, ಕೃಷ್ಣೇಗೌಡ, ಸಂಶೋಧಕರಾದ ಇಲ್ಮಾಹಿಲ್ ಸಿದ್ದಿಕಿ, ಅಶೋಕ್ ನಾಯಕ್ ದಿದ್ದಿಗಿ, ಕೆ. ಶಿವರಾಮಪ್ಪ, ಬಂಡ್ರಿ ಪಾಪಯ್ಯ ತಂಡದಲ್ಲಿ ಇದ್ದರು.