ತಮ್ಮ ತಮ್ಮ ಕ್ಷೇತ್ರದಲ್ಲಿ ಮೀಸಲಾತಿ ಪ್ರಕಟಗೊಂಡ ತಕ್ಷಣವೇ ಈ ಮೀಸಲಾತಿಯಲ್ಲಿ ನಾನು ಸ್ಪರ್ಧೆ ಮಾಡಲೇಬೇಕು ಎನ್ನುವ ಅಭ್ಯರ್ಥಿಗಳು ತಮ್ಮ ರಾಜಕೀಯ ಮುಖಂಡರನ್ನು ಭೇಟಿ ಮಾಡಿ ಪಕ್ಷದ ಟಿಕೆಟ್‌ ಗಿಟಿಸಿಕೊಳ್ಳಲು ಲಾಬಿ ಶುರುವಾಗಿದೆ.

ಸಿ.ಕೆ. ನಾಗರಾಜಹೊಸಪೇಟೆ: ಬಹು ನಿರೀಕ್ಷಿತ ಜಿ.ಪಂ. ಮತ್ತು ತಾ.ಪಂ. ಚುನಾವಣೆಗೆ ಈಗಾಗಲೇ ಮೀಸಲಾತಿ ಪ್ರಕಟವಾಗಿದೆ. ಮೀಸಲಾತಿ ಪ್ರಕಟಗೊಂಡ ಬೆನ್ನಲ್ಲೇ ಚುನಾವಣೆಯಲ್ಸಿ ಸ್ಪರ್ಧಿಸುವಂತಹ ಆಕಾಂಕ್ಷಿಗಳಲ್ಲಿ ರಾಜಕೀಯ ಹುರುಪು ಶುರುವಾಗಿದೆ.ತಮ್ಮ ತಮ್ಮ ಕ್ಷೇತ್ರದಲ್ಲಿ ಮೀಸಲಾತಿ ಪ್ರಕಟಗೊಂಡ ತಕ್ಷಣವೇ ಈ ಮೀಸಲಾತಿಯಲ್ಲಿ ನಾನು ಸ್ಪರ್ಧೆ ಮಾಡಲೇಬೇಕು ಎನ್ನುವ ಅಭ್ಯರ್ಥಿಗಳು ತಮ್ಮ ರಾಜಕೀಯ ಮುಖಂಡರನ್ನು ಭೇಟಿ ಮಾಡಿ ಪಕ್ಷದ ಟಿಕೆಟ್‌ ಗಿಟಿಸಿಕೊಳ್ಳಲು ಲಾಭಿ ಶುರುವಾಗಿದೆ.

ರಾಜಕೀಯ ಪಕ್ಷದ ಮುಖಂಡರು ಸಹ ಯಾರಿಗೆ ಟಿಕೇಟ್‌ ನೀಡಿದರೆ ಸುಲಭವಾಗಿ ಗೆಲವು ಸಾಧಿಸಬಹುದು ಎನ್ನುವ ಲೆಕ್ಕಾಚಾರ ಹಾಕಿದ್ದು, ಯೋಗ್ಯ, ಸಮರ್ಥ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿದ್ದರೆ, ಆಕಾಂಕ್ಷಿಗಳು ವಿವಿಧ ಮೂಲಗಳಿಂದ ಲಾಬಿ ನಡೆಸುತ್ತಿದ್ದಾರೆ. ಶಾಸಕರು, ಮಾಜಿ ಶಾಸಕರು, ಅಧ್ಯಕ್ಷರು ಮತ್ತಿತರ ಗಣ್ಯರ ಬೆನ್ನು ಹತ್ತಿದ್ದಾರೆ.ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳ ಸದಸ್ಯರ ಅವಧಿ 2021ರ ಏಪ್ರಿಲ್‌, ಮೇ ವೇಳೆಗೆ ಮುಕ್ತಾಯವಾಗಿತ್ತು. 2016ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಗೆದ್ದಿದ್ದ ಸದಸ್ಯರ ಐದು ವರ್ಷದ ಅವಧಿ ಮುಗಿಸಿದ್ದರು. ಅದರ ಬಳಿಕ ಕಾರಣಾಂತರದಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದಿಲ್ಲ. ಇದೀಗ ಮೀಸಲಾತಿ ಪ್ರಕಟಗೊಂಡಿದೆ. ಐದು ವರ್ಷಗಳಿಂದ ಚುನಾವಣೆಗಾಗಿ ಕಾಯುತ್ತಿದ್ದ ಆಕಾಂಕ್ಷಿಗಳಲ್ಲಿ ಮತ್ತೆ ರಾಜಕೀಯ ಚಟುವಟಿಕೆ ಗರಿಗೆದರಿದೆ.

ಗ್ರಾಮೀಣ ಭಾಗದಲ್ಲಿ ರಾಜಕೀಯ ಚುರುಕು: ಹಲವು ವರ್ಷಗಳಿಂದ ಜಿಪಂ, ತಾಪಂಗಳಿಗೆ ಚುನಾವಣೆ ನಡೆಯದ್ದರಿಂದ ಪ್ರಮುಖ ಪಕ್ಷಗಳ ಕಾರ್ಯಕರ್ತರಲ್ಲಿ ನಿರುತ್ಸಾಹ ಮೂಡಿತ್ತು. ಹಿಂದಿನ ಬಿಜೆಪಿ ಸರ್ಕಾರ, ಈಗಿನ ಕಾಂಗ್ರೆಸ್‌ ಸರ್ಕಾರಗಳು ಚುನಾವಣೆ ನಡೆಸುವ ಆಸಕ್ತಿ ತೋರಿರಲಿಲ್ಲ. ಇದರಿಂದ 2021ರಿಂದಲೇ ಚುನಾವಣೆಗೆ ತೆರೆಮರೆಯಲ್ಲಿ ತಯಾರಿ ನಡೆಸುತ್ತಿದ್ದವರಲ್ಲಿ ನಿರಾಸೆ ಮೂಡಿತ್ತು. ಇದೀಗ ವರ್ಗವಾರು ಮೀಸಲಾತಿ ಪ್ರಕಟವಾಗಿರುವುದರಿಂದ ಶೀಘ್ರದಲ್ಲಿ ಚುನಾವಣೆ ನಡೆಯುವ ನಿರೀಕ್ಷೆ ಹುಟ್ಟುಹಾಕಿದೆ.ಯಾವ ಕ್ಷೇತ್ರದಲ್ಲಿ ಯಾವ ಸಮುದಾಯದ ಅಭ್ಯರ್ಥಿಗೆ ಅವಕಾಶ, ಮಹಿಳಾ ಮೀಸಲು ಕ್ಷೇತ್ರಗಳಲ್ಲಿ ಯಾರಿಗೆ ಅವಕಾಶ, ಮೀಸಲಾತಿಯಿಂದ ಹೊರಗುಳಿಯುವ ಆಕಾಂಕ್ಷಿಗಳು ಯಾವ ಕ್ಷೇತ್ರದತ್ತ ಮುಖ ಮಾಡಲಿದ್ದಾರೆ ಎಂಬುದರ ಮೇಲೆ ಮುಂದಿನ ರಾಜಕೀಯ ಬೆಳವಣಿಗೆಗಳು ಅವಲಂಬಿತವಾಗಲಿವೆ. ಸ್ಪರ್ಧೆಗೆ ಸಿದ್ಧತೆ ಮಾಡಿಕೊಂಡಿದ್ದ ಕೆಲವರು ಮೀಸಲಾತಿ ವ್ಯತಿರಿಕ್ತವಾಗಿ ಬಂದಿದ್ದರಿಂದ ಅಕ್ಕಪಕ್ಕದ, ಸುರಕ್ಷಿತ ಕ್ಷೇತ್ರಗಳತ್ತ ಚಿತ್ತ ಹರಿಸಿದ್ದಾರೆ. ಮಹಿಳಾ ಮೀಸಲಾತಿ ಇದ್ದ ಕ್ಷೇತ್ರದಲ್ಲಿ ತಮ್ಮ ಪತ್ನಿ, ಮಗಳು, ತಾಯಿ ನಿಲ್ಲಿಸಲು ಸಹ ರಾಜಕೀಯ ಮುಖಂಡರು ಮುಂದಾಗಿದ್ದಾರೆ.

ಒಟ್ಟಾರೆ ವರ್ಗವಾರು ಮೀಸಲಾತಿ ಪ್ರಕಟವಾಗಿರುವುದು ಚುನಾವಣಾ ಸಿದ್ಧತೆಗೆ ಚಾಲನೆ ನೀಡಿದ್ದರೆ, ಕ್ಷೇತ್ರವಾರು ಮೀಸಲಾತಿಯೇ ಆಕಾಂಕ್ಷಿಗಳ ಭವಿಷ್ಯದ ಸ್ಪರ್ಧೆಯ ಚಿತ್ರಣವನ್ನು ನಿರ್ಧರಿಸಿದೆ. ಹೀಗಾಗಿ ಇದೀಗ ಎಲ್ಲರ ಕಣ್ಣು ಕ್ಷೇತ್ರವಾರು ಪಕ್ಷದ ಟಿಕೇಟ್‌ ನತ್ತ ಚಿತ್ತ ನೆಟ್ಟಿದೆ.

ಬೂತ್ ಮಟ್ಟದಲ್ಲಿ ಗಟ್ಟಿ: ಜಿಪಂ, ತಾಪಂ ಮೀಸಲಾತಿಯನ್ನು ಸ್ವಾಗತಿಸುತ್ತೇವೆ. ಬಿಜೆಪಿಯಲ್ಲಿ ಅಭ್ಯರ್ಥಿಗಳು ಟಿಕೇಟ್‌ ಪಡೆಯಲು ಹೆಚ್ಚಿನ ಪೈಪೋಟಿದೆ. ಕಾಂಗ್ರಸ್‌ ಸರ್ಕಾರ ಎಲ್ಲಾ ರಂಗದಲ್ಲಿಯೂ ವಿಫಲವಾಗಿದೆ. ಬಿಜೆಪಿ ಬೂತ್ ಮಟ್ಟದಲ್ಲಿ ಗಟ್ಟಿಯಾಗಿದೆ. ನಮ್ಮ ಪಕ್ಷದ ಕಾರ್ಯಕರ್ತರು ಅತ್ಯಂತ ಉತ್ಸಾಹಭರಿತರಾಗಿ ಚುನಾವಣೆಗೆ ಸನ್ನದ್ದರಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ಎಸ್‌. ಸಂಜೀವರೆಡ್ಡಿ ತಿಳಿಸಿದರು.

ಹೆಚ್ಚಿನ ಪೈಪೋಟಿ: ಜಿಪಂ, ತಾಪಂ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ ಪಕ್ಷದ ಟಿಕೆಟ್‌ ಪಡೆಯಲು ಅಭ್ಯರ್ಥಿಗಳಲ್ಲಿ ಹೆಚ್ಚಿನ ಪೈಪೋಟಿಯಿದೆ. ಪಕ್ಷಕ್ಕಾಗಿ ಶ್ರಮಿಸಿದ ನಿಜವಾದ ಕಾರ್ಯಕರ್ತರನ್ನು ಗುರುತಿಸಿ ಅಂಥವರಿಗೆ ಪಕ್ಷದ ಟಿಕೆಟ್‌ ನೀಡಿ ಅವರನ್ನು ಗೆಲ್ಲಿಸಿಕೊಳ್ಳಲು ಪಕ್ಷದ ಸ್ಥಳೀಯ ಮುಖಂಡರು ಮುಂದಾಗಲಿದ್ದಾರೆ ಎಂದು ಕಾಂಗ್ರೆಸ್‌ ಜಿಲ್ಯಾಧ್ಯಕ್ಷ ಸಿರಾಜ್ ಶೇಖ್‌ ತಿಳಿಸಿದರು.