ಏ.12ರಿಂದ 14ನೇ ವಿಜಯಪುರ ಸಾಂಸ್ಕೃತಿಕ ಜನೋತ್ಸವ

| Published : Apr 09 2025, 12:47 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಆವಿಷ್ಕಾರ, ಎಐಡಿಎಸ್‌ಒ, ಎಐಎಮ್‌ಎಸ್‌ಎಸ್ ಹಾಗೂ ಎಐಡಿವೈಒ ನೇತೃತ್ವದಲ್ಲಿ ಗುಮ್ಮಟನಗರಿಯಲ್ಲಿ ಏ.12 ರಿಂದ ಎರಡು ದಿನ ೧೪ನೇ ವಿಜಯಪುರ ಸಾಂಸ್ಕೃತಿಕ ಜನೋತ್ಸವ ನಡೆಯಲಿದೆ ಎಂದು ಆವಿಷ್ಕಾರ ಜಿಲ್ಲಾ ಸಂಚಾಲಕ ಎಚ್.ಟಿ.ಭರತ್‌ಕುಮಾರ ತಿಳಿಸಿದರು

ಕನ್ನಡಪ್ರಭ ವಾರ್ತೆ ವಿಜಯಪುರ

ಆವಿಷ್ಕಾರ, ಎಐಡಿಎಸ್‌ಒ, ಎಐಎಮ್‌ಎಸ್‌ಎಸ್ ಹಾಗೂ ಎಐಡಿವೈಒ ನೇತೃತ್ವದಲ್ಲಿ ಗುಮ್ಮಟನಗರಿಯಲ್ಲಿ ಏ.12 ರಿಂದ ಎರಡು ದಿನ ೧೪ನೇ ವಿಜಯಪುರ ಸಾಂಸ್ಕೃತಿಕ ಜನೋತ್ಸವ ನಡೆಯಲಿದೆ ಎಂದು ಆವಿಷ್ಕಾರ ಜಿಲ್ಲಾ ಸಂಚಾಲಕ ಎಚ್.ಟಿ.ಭರತ್‌ಕುಮಾರ ತಿಳಿಸಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಸಂಸ್ಕೃತಿ ಮತ್ತ ಮೌಲ್ಯಗಳು ಕುಸಿಯುತ್ತಿವೆ. ಇಂದಿನ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಅಶ್ಲೀಲ ಸಿನಿಮಾ ಸಾಹಿತ್ಯಗಳಿಂದ ಪ್ರತಿ ನಿತ್ಯ ಮಹಿಳೆಯರ ಮೇಲಿನ ಅತ್ಯಾಚಾರ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಇನ್ನೊಂದೆಡೆ ಆನ್‌ಲೈನ್ ಗೇಮ್‌ಗಳಿಗೆ ಬಲಿಯಾಗಿ ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಯುವಕರ ಸಂಖ್ಯೆ ಹೆಚ್ಚಾಗುತ್ತಿದೆ. ವಿದ್ಯಾರ್ಥಿ ಯುವಜನರ ಮೇಲಿನ ಸಾಂಸ್ಕೃತಿಕ ದಾಳಿಗಳು ಹೆಚ್ಚಾಗುತ್ತಿವೆ. ಮೊಬೈಲ್‌ಗಳ ಬಳಕೆ ಇಂದು ಒಂದು ಗೀಳಾಗಿ ಪರಿವರ್ತನೆ ಹೊಂದಿದೆ. ಲಾಭದಾಸೆಗೆ ಅಶ್ಲೀಲ ಸಿನಿಮಾಗಳು, ಆನ್‌ಲೈನ್ ಗೇಮ್‌ಗಳನ್ನು ಹರಿಬಿಡುತ್ತಿರುವ ಈ ವ್ಯವಸ್ಥೆಯ ವಿರುದ್ಧ ಒಂದು ಹೊಸ ಸಾಂಸ್ಕೃತಿಕ ಚಳುವಳಿಯನ್ನು ಹರಿಬಿಡಬೇಕಾಗಿದೆ ಎಂದು ಹೇಳಿದರು.

ವಿಪರೀತ ಸ್ವಾರ್ಥ, ದುರಾಸೆ, ಮೋಸ, ವಂಚನೆ, ಪಕ್ಷಪಾತ ಮುಂತಾದವು ಇಂದು ಜನಜೀವನದ ಭಾಗವಾಗಿವೆ. ಪ್ರಾಮಾಣಿಕತೆ, ನೀತಿ, ಮೌಲ್ಯ, ಸಂಸ್ಕೃತಿ, ಆದರ್ಶಗಳ ಬಗ್ಗೆ ಮಾತನಾಡುವವರನ್ನು ಯಾವುದೋ ಲೋಕದಿಂದ ಬಂದವರಂತೆ ನೋಡುವ ವಾತಾವರಣ ಸೃಷ್ಟಿಯಾಗಿದೆ. ಇಂತಹ ವಾತಾವರಣದಲ್ಲಿ ಭಗತ್ ಸಿಂಗ್, ನೇತಾಜಿ, ವಿದ್ಯಾಸಾಗರ, ಜ್ಯೋತಿಬಾ ಫುಲೆ ಮುಂತಾದವರ ವಿಚಾರಗಳನ್ನು, ಉನ್ನತ ನೀತಿ-ಸಂಸ್ಕೃತಿ, ಮೌಲ್ಯಗಳನ್ನು ಜನರಮಧ್ಯದಲ್ಲಿ ಬಿತ್ತುವ ಪ್ರಯತ್ನ ಈ ಗಳಿಗೆಯ ತುರ್ತು ಅವಶ್ಯಕತೆಯಾಗಿದೆ. ಆದ್ದರಿಂದ ಆವಿಷ್ಕಾರ , ಎಐಡಿವೈಒ, ಎಐಎಮ್‌ಎಸ್‌ಎಸ್ ಹಾಗೂ ಎಐಡಿಎಸ್‌ಒ ಆಶ್ರಯದಲ್ಲಿ ೧೪ನೇ ವಿಜಯಪುರ ಸಾಂಸ್ಕೃತಿಕ ಜನೋತ್ಸವವನ್ನು ಸಂಘಟಿಸಲಾಗಿದೆ. ಈ ಕಾರ್ಯಕ್ರಮವನ್ನು ನವೋದಯದ ಹರಿಕಾರ ಜ್ಯೋತಿಬಾ ಫುಲೆ ಅವರ ಜನ್ಮ ದಿನಕ್ಕೆ ಸಮರ್ಪಿಸಲಾಗಿದೆ. ಇಲ್ಲಿ ಹಲವಾರು ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.

ಅಂದು ಸಂಜೆ ೬ಕ್ಕೆ ನಗರದ ಕಂದಗಲ್ ಹನುಮಂತರಾಯ ರಂಗಮಂದಿರಲ್ಲಿ ನಡೆಯಲಿರುವ ಜನೋತ್ಸವವನ್ನು ಜಾಜಿ ಮಲ್ಲಿಗೆ ಕವಿ ಡಾ. ಸತ್ಯಾನಂದ ಪಾತ್ರೋಟ ಉದ್ಘಾಟಿಸಲಿದ್ದಾರೆ. ಎಐಯುಟಿಯುಸಿ ರಾಜ್ಯಾಧ್ಯಕ್ಷ ಕಾ.ಕೆ.ಸೋಮಶೇಖರ ಆಗಮಿಸಲಿದ್ದು, ಅಧ್ಯಕ್ಷತೆ ರಾಜ್ಯ ಕಾರ್ಯದರ್ಶಿ ಸಿದ್ಧಲಿಂಗ ಬಾಗೇವಾಡಿ ವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಲಕ್ಷ್ಮೀ ತೇರದಾಳಮಠ ಅವರಿಂದ ನೃತ್ಯ ರೂಪಕ, ಧಾರವಾಡ ಆಕಾಶವಾಣಿಯ ಕಲಾವಿದೆ ಕೃತಿಕಾ ಜಂಗಿನಮಠ ಕೊಳಲು ವಾದನ, ತಿಕೋಟಾದ ಸ್ವಾಮಿ ವಿವೇಕಾನಂದ ಮಾಡೆಲ್ ಸ್ಕೂಲ್‌ನಿಂದ ಜನಪದ ನೃತ್ಯ ಹಾಗೂ ಭರತನಾಟ್ಯ ಕಲಾವಿದೆ ವಿದೂಷಿ ದೀಕ್ಷಾ ಭೀಸೆ ಹಾಗೂ ದಿವ್ಯಾ ಭೀಸೆ ತಂಡದಿಂದ ನೃತ್ಯ ಪ್ರದರ್ಶನವಿದೆ.

ಮೂಲ ಬಾದಲ್ ಸರ್ಕಾರ ರಚಿಸಿದ, ರಾಜೇಂದ್ರ ಕಾರಂತ್ ಕನ್ನಡಕ್ಕೆ ರೂಪಾಂತರಿಸಿದ ನಾಟಕ ಮೋಜಿನ ಸೀಮೆಯಾಚೆ ಒಂದೂರು ಪ್ರದರ್ಶನ. ಈ ನಾಟಕವನ್ನು ಭಾನುಪ್ರಕಾಶ್ ಕಡಗತ್ತೂರು ನಿರ್ದೇಶಿಸಿದ್ದು, ಮುತ್ತುರಾಜ ಗೌರಾಣಿ ಸಂಗೀತ ಹಾಗೂ ಅರುಣ ರಾಜ್ ತಬಲಾ ಸಾಥ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಎಐಡಿವೈಒ ರಾಜ್ಯ ಕಾರ್ಯದರ್ಶಿ ಸಿದ್ಧಲಿಂಗ ಬಾಗೇವಾಡಿ , ಗೀತಾ.ಎಚ್ ಸೇರಿ ಇತರರು ಇದ್ದರು.