ನನ್ನ ಮಾಹಿತಿ ಪ್ರಕಾರ ಆಡಳಿತ ಪಕ್ಷದಲ್ಲಿ ಹಿರಿಯ ಸಚಿವರು, ಶಾಸಕರು ಸೇರಿ ಏಳೆಂಟು ಜನರು ಮುಖ್ಯಮಂತ್ರಿ ಆಗಲು ಪ್ರಯತ್ನ ನಡೆಸಿದ್ದಾರೆ. ಅದರ ಪರಿಣಾಮ ಆಡಳಿತ ಯಂತ್ರ ಕುಸಿದಿದೆ.

ಕನ್ನಡಪ್ರಭ ವಾರ್ತೆ ಶಿರಸಿ

ರಾಜ್ಯದಲ್ಲಿ ಪ್ರತಿದಿನ ಮುಖ್ಯಮಂತ್ರಿ ಖುರ್ಚಿಗೆ ಪೈಪೋಟಿ ಹೆಚ್ಚುತ್ತಿದೆ. ನನ್ನ ಮಾಹಿತಿ ಪ್ರಕಾರ ಆಡಳಿತ ಪಕ್ಷದಲ್ಲಿ ಹಿರಿಯ ಸಚಿವರು, ಶಾಸಕರು ಸೇರಿ ಏಳೆಂಟು ಜನರು ಮುಖ್ಯಮಂತ್ರಿ ಆಗಲು ಪ್ರಯತ್ನ ನಡೆಸಿದ್ದಾರೆ. ಅದರ ಪರಿಣಾಮ ಆಡಳಿತ ಯಂತ್ರ ಕುಸಿದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.ಸೋಮವಾರ ನಗರದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟವಾದ ಬಹುಮತ ನೀಡಿದ್ದಾರೆ. ಬಿಜೆಪಿಯನ್ನು ವಿರೋಧ ಪಕ್ಷದಲ್ಲಿ‌ ಕೂರಿಸಿದ್ದಾರೆ. ವಿರೋಧ ಪಕ್ಷವಾಗಿ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡುತ್ತಿದ್ದೇವೆ ಹಾಗೂ ಮುಂದೆಯೂ ಮಾಡುತ್ತೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಬಗ್ಗೆಯೂ ಅಸಡ್ಡೆ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದ ರೈತ ಸಮ್ಮಾನ್ ಹಾಗೂ ಬಸವರಾಜ ಬೊಮ್ಮಾಯಿ ಅವರ ರೈತ ವಿದ್ಯಾಸಿರಿಯನ್ನು ಕಾಂಗ್ರೆಸ್ ಸರ್ಕಾರ ರದ್ದು ಮಾಡಿ, ರೈತರ ಸಂಕಷ್ಟಕ್ಕೆ ಯಾವುದೇ ಸ್ಪಂದನೆ ಮಾಡುತ್ತಿಲ್ಲ.‌ ಅತಿವೃಷ್ಟಿಯಲ್ಲೂ ಯಾರೂ ರೈತರ ಕಷ್ಟ ಕೇಳಲಿಲ್ಲ. ಮುಖ್ಯಮಂತ್ರಿ ಖುರ್ಚಿಯ ಕಾಳಗದಲ್ಲಿ ಆಡಳಿತ ಯಂತ್ರ ಕುಸಿದಿದೆ ಎಂದು ಟೀಕಿಸಿದರು. ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ಎಲ್ಲರ ಜೊತೆಗೆ ಚರ್ಚೆ ಮಾಡಿದ್ದೇವೆ. ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೊದಲ ಮೂರ್ನಾಲ್ಕು ದಿವಸ ಉತ್ತರ ಕರ್ನಾಟಕ, ರೈತರ ಸಮಸ್ಯೆ, ಅಲ್ಲಿ ಆಗಬೇಕಿರುವ ನೀರಾವರಿ ಯೋಜನೆಗಳ ಕುರಿತು ಚರ್ಚಿಸಲು ತೀರ್ಮಾನಿಸಿದ್ದೇವೆ. ಕೇಂದ್ರ ಸರ್ಕಾರದ ಯೋಜನೆ ಸರಿಯಾದ ರೀತಿ ಅನುಷ್ಠಾನ ಮಾಡದಿರುವುದು ರಾಜ್ಯ ಕಾಂಗ್ರೆಸ್ ಸರ್ಕಾರದ ದೊಡ್ಡ ಷಡ್ಯಂತ್ರವಾಗಿದೆ. ಇಲ್ಲಿನ ಪ್ರೊಗ್ರೇಸ್ ರಿಪೋರ್ಟ್‌ ನೀಡದೇ ಕೇಂದ್ರದ ಅನುದಾನ ಬರುತ್ತಿಲ್ಲ ಎಂದು ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕಾಂಗ್ರೆಸ್ ಕೇಂದ್ರದ ಮೇಲೆ ಟೀಕೆ ಮಾಡುತ್ತಿದೆ ಎಂದು ಆರೋಪಿಸಿದರು. ಜಲ ಸಂಪತ್ತು ಸಮರ್ಪಕ ಉಪಯೋಗ ಆಗಬೇಕು‌. ಆದರೆ ವೈಜ್ಞಾನಿಕ ವಿಚಾರ ಮಾಡಿ ಯೋಜನೆಗಳು ಬರಬೇಕು. ಅವೈಜ್ಞಾನಿಕವಾಗಿ ಯೋಜನೆ ಜಾರಿಗೆ ತಂದಲ್ಲಿ ಅದಕ್ಕೆ ನಮ್ಮ ವಿರೋಧವಿದೆ ಎಂದು ವರದಾ ಹಾಗೂ ಅಘನಾಶಿನಿ ನದಿ ಜೋಡಣೆ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು. ಬಿಜೆಪಿಯಿಂದ ಉಚ್ಚಾಟನೆಗೊಂಡ ಶಾಸಕ ಯತ್ನಾಳ್ ಸಭೆ ಮಾಡುವುದಕ್ಕೆ ಸ್ವತಂತ್ರರಿದ್ದಾರೆ. ಅದರ ಕುರಿತು ಟೀಕೆ ಮಾಡುವುದಿಲ್ಲ. ಆದರೆ ನಮ್ಮದು ರಾಷ್ಟ್ರೀಯ ಪಕ್ಷವಿದೆ. ರಾಜ್ಯಾಧ್ಯಕ್ಷರ ಆಯ್ಕೆಯ ತೀರ್ಮಾನ ಹೈಕಮಾಂಡ್ ಕೈಗೊಳ್ಳಲಿದೆ. ಯತ್ನಾಳ್ ಪಕ್ಷಕ್ಕೆ ಬರುವುದರ ಕುರಿತು ನನಗೆ ಮಾಹಿತಿಯಿಲ್ಲ ಎಂದರು.ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ, ಹಳಿಯಾಳ ಕ್ಷೇತ್ರದ ಮಾಜಿ ಶಾಸಕ ಸುನೀಲ ಹೆಗಡೆ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್, ಶಿರಸಿ ನಗರ ಮಂಡಲಾಧ್ಯಕ್ಷ ಆನಂದ ಸಾಲೇರ, ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ ಮತ್ತಿತರರು ಇದ್ದರು.ಮುಜುಗರಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಖಾಸಗಿ ಕಾರ್ಯಕ್ರಮದ ನಿಮಿತ್ತ ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿಯ ಕೆಲವು ಮುಖಂಡರು ಹಾಗೂ ಬೆರಳಣಿಕೆಯ ಕಾರ್ಯಕರ್ತರು ಮಾತ್ರ ಶಿಷ್ಟಾಚಾರಕ್ಕೆ ಸ್ವಾಗತಿಸಿದರು. ರಾಜ್ಯಾಧ್ಯಕ್ಷರು ಆಗಮಿಸಿದ ವೇಳೆಯೇ ಸ್ವಾಗತಕ್ಕೆ ಕಾರ್ಯಕರ್ತರೇ ಇಲ್ಲದಿರುವುದು ಕೆಲವರಿಗೆ ಮುಜುಗರ ಉಂಟಾಯಿತಲ್ಲದೇ, ಗ್ರಾಮೀಣ ಭಾಗಕ್ಕೆ ಆಗಮಿಸಿದ ವೇಳೆ ಶಿರಸಿ ಗ್ರಾಮೀಣ ಮಂಡಲಾಧ್ಯಕ್ಷೆ ಗೈರಾಗಿರುವುದು ಕೆಲವರ ಅಸಮಾಧಾನಕ್ಕೂ ಕಾರಣವಾಯಿತು.