ಸಾರಾಂಶ
ವಿಜಯೇಂದ್ರ ಅವರು ಪಕ್ಷವನ್ನು ತಳಮಟ್ಟದಿಂದ ಕಟ್ಟುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ.
ಸಾಗರ: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ನಿಯೋಜನೆಗೊಂಡಿರುವ ಹಿನ್ನೆಲೆ ನಗರ ಬಿಜೆಪಿ ವತಿಯಿಂದ ಶನಿವಾರ ಸಾಗರ ಹೋಟೆಲ್ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಿಸಲಾಯಿತು.
ಈ ಸಂದರ್ಭ ನಗರ ಬಿಜೆಪಿ ಅಧ್ಯಕ್ಷ ಕೆ.ಆರ್. ಗಣೇಶಪ್ರಸಾದ್ ಮಾತನಾಡಿ, ಬಿ.ವೈ. ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಆಯ್ಕೆ ಆಗಿರುವುದು ರಾಜ್ಯದ ಬಿಜೆಪಿ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ ಎಂದರು.ವಿಜಯೇಂದ್ರ ಅವರು ಪಕ್ಷವನ್ನು ತಳಮಟ್ಟದಿಂದ ಕಟ್ಟುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ಬಿಜೆಪಿಗೆ ನೆಲೆ ಇಲ್ಲದ ಅನೇಕ ಕ್ಷೇತ್ರಗಳ ಉಸ್ತುವಾರಿ ವಹಿಸಿಕೊಂಡು ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ತಮ್ಮದೇ ಸಂಘಟನಾ ಚತುರತೆ ತೋರಿಸಿದ್ದಾರೆ. ಕೊರೋನಾ ಸಂದರ್ಭ ತಮ್ಮದೇ ಪ್ರತಿಷ್ಠಾನದ ಮೂಲಕ ರೋಗಿಗಳಿಗೆ ಉಚಿತ ಮಾತ್ರೆ, ಔಷಧಿಗಳನ್ನು ವಿತರಿಸುವಲ್ಲಿ ಪ್ರಮುಖಪಾತ್ರ ವಹಿಸಿದ್ದಾರೆ. ಪಕ್ಷ ಸಂಘಟನೆ ಜೊತೆ ಸಾಮಾಜಿಕ ಕಳಕಳಿ ಇರುವ ವಿಜಯೇಂದ್ರ ಅವರ ನಾಯಕತ್ವದಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಲಿದೆ ಎಂದರು.
ರಾಜ್ಯದಲ್ಲಿ ಭೀಕರ ಬರ ಇದ್ದರೂ ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿಗೆ ಬಿದ್ದಿದೆ. ಅಧಿಕಾರ ಉಳಿಸಿಕೊಳ್ಳಲು ಪೈಪೋಟಿ ನಡೆಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ಲೋಕಸಭಾ ಚುನಾವಣೆಯಲ್ಲಿ ಸಂಪೂರ್ಣವಾಗಿ ನೆಲಕಚ್ಚುವಂತೆ ಮಾಡಲು ಪಕ್ಷವು ಈಗಾಗಲೇ ಸನ್ನದ್ಧವಾಗಿದೆ. ಸ್ಥಳೀಯ ಶಾಸಕ ಬೇಳೂರು ಜಿಲ್ಲಾ ಉಸ್ತುವಾರಿ ಸಚಿವರೇ ಯಾರು ಎಂದು ಗೊತ್ತಿಲ್ಲ ಎನ್ನುತ್ತಿದ್ದಾರೆ. ರಾಜ್ಯ ಸರ್ಕಾರದಿಂದ ₹1 ಅನುದಾನ ಸಹ ತರದ ಶಾಸಕರು ಹಾಲಪ್ಪ ಅವರು ಶಾಸಕರಾಗಿದ್ದಾಗ ತಂದ ಅನುದಾನದ ಶಂಕುಸ್ಥಾಪನೆ ನೆರವೇರಿಸುತ್ತಿದ್ದಾರೆ ಎಂದು ಟೀಕಿಸಿದರು.ನಗರಸಭೆ ನಿಕಟಪೂರ್ವ ಅಧ್ಯಕ್ಷೆ ಮಧುರಾ ಶಿವಾನಂದ್, ಸದಸ್ಯ ಆರ್.ಶ್ರೀನಿವಾಸ್ ಮೇಸ್ತ್ರಿ, ವಿ.ಮಹೇಶ್ ಮಾತನಾಡಿದರು.
ಪಕ್ಷದ ಪ್ರಮುಖರಾದ ಸವಿತಾ ವಾಸು, ಮೈತ್ರಿ ಪಾಟೀಲ್, ಅರವಿಂದ ರಾಯ್ಕರ್, ಸತೀಶ್ ಕೆ., ಸತೀಶ್ ಬಾಬು, ಭಾವನಾ ಸಂತೋಷ್, ರವೀಂದ್ರ ಬಿ.ಟಿ., ಕೃಷ್ಣ ಶೇಟ್, ಬಿ.ಎಚ್.ಲಿಂಗರಾಜ್ ಇನ್ನಿತರರು ಹಾಜರಿದ್ದರು.- - - -11ಕೆ.ಎಸ್.ಎ.ಜಿ.1:
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ನಿಯೋಜನೆ ಹಿನ್ನೆಲೆ ನಗರ ಬಿಜೆಪಿ ವತಿಯಿಂದ ಶನಿವಾರ ಸಾಗರ ಹೋಟೆಲ್ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಿಸಲಾಯಿತು. ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.