ಸಾರಾಂಶ
ದಾವಣಗೆರೆ : ದುಷ್ಟಶಕ್ತಿಗಳು ಎಷ್ಟೇ ಪ್ರಯತ್ನಿಸಿದರೂ ಬಿ.ವೈ.ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು, ತಡೆಯಲು ಸಾಧ್ಯವಿಲ್ಲ. ಸೂರ್ಯ, ಚಂದ್ರ ಇರುವುದೆಷ್ಟು ಸತ್ಯವೋ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರಿಯುವುದೂ ಅಷ್ಟೇ ಸತ್ಯ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಹರಿಹರ ತಾಲೂಕು ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ವರಿಷ್ಠರ ಸೂಚನೆ ಮೇರೆಗೆ ವಿಜಯೇಂದ್ರ ದೆಹಲಿಗೆ ತೆರಳಿದ್ದು, ದೆಹಲಿ ಪ್ರವಾಸವು ನಿನ್ನೆ ಶನಿವಾರವೇ ನಿಗದಿಯಾಗಿತ್ತು ಎಂದರು.
ನಮ್ಮ ಬಗ್ಗೆ ಮಹಾನುಭಾವನೊಬ್ಬರು ಏನೇನೋ ಮಾತನಾಡುತ್ತಾರೆ. ನೀವು ಜೆಡಿಎಸ್ ಸೇರಿ, ಕಬಾಬ್, ಬಿರಿಯಾನಿ ತಿನ್ನುವಾಗ ಎಲ್ಲಿ ಹೋಗಿದ್ಯಪ್ಪಾ ಹಿಂದೂ ಹುಲಿ? ಜೆಡಿಎಸ್‌ಗೆ ಹೋಗಿದ್ದೆಲ್ಲಾ ನಾಚಿಕೆಯಾಗಲಿಲ್ಲವಾ ನಿಮಗೆ? ಈಗ ಬಿಜೆಪಿ ಸಿದ್ಧಾಂತದ ಬಗ್ಗೆ ಮಾತನಾಡುತ್ತೀರಿ, ಮೋದಿಯವರ ಬಗ್ಗೆ ಮಾತಾಡುತ್ತೀಯಲ್ಲ ಎಂದು, ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ರೇಣುಕಾಚಾರ್ಯ ಏಕವಚನದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತೀರಿ? ನೀವು ಸರ್ಕಾರಿ ಕಾರ್ಯಕ್ರಮಗಳಲ್ಲಿ ನಿಮ್ಮ ಮಕ್ಕಳನ್ನು ಕರೆದುಕೊಂಡು, ವೈಭವೀಕರಿಸಿದ್ದು ಕುಟುಂಬ ರಾಜಕಾರಣ ಅಲ್ವಾ? ಯಡಿಯೂರಪ್ಪನವರು ಕುಟುಂಬ ರಾಜಕಾರಣ ಮಾಡಿಲ್ಲ. ಬಿ.ವೈ.ರಾಘವೇಂದ್ರ ಸಿಂಡಿಕೇಟ್ ಮೆಂಬರ್ ಆಗಿ, ಮೂರು ಸಲ ಸಂಸದರಾಗಿ ಆಯ್ಕೆಯಾಗಿದ್ದಾರೆ ಎಂದು ಅವರು ಹೇಳಿದರು. ವಿಜಯಪುರದಲ್ಲಿ ನಿಮಗೆ ಟಿಕೆಟ್ ಕೊಡಲಿಲ್ಲವೆಂದಿದ್ದರೆ ಕೇರ್ ಆಫ್ ಪುಟ್‌ಪಾತ್ ಆಗುತ್ತಿದ್ದಿರಿ. ಬಬಲೇಶ್ವರ ಕ್ಷೇತ್ರದಲ್ಲಿ ಹೊಂದಾಣಿಕೆ ಮಾಡಿಕೊಂಡು, ಶಾಸಕನಾಗಿದ್ದು ನೀವು. ಇಂತಹ ನೀವು ನಮಗೆ ಹಂದಿಗಳಿಗೆ ಹೋಲಿಸಿದ್ದೀರಿ? ಹಂದಿ ಅಂದರೆ ವಿಷ್ಣುವಿನ ವರಹಾವತಾರ. ನಮಗೆ ದೇವರಿಗೆ ಹೋಲಿಸಿದ್ದಿರಿ, ಧನ್ಯವಾದಗಳು. ನಿಮ್ಮ ಜೊತೆಗೆ ಮೂರ್ಖರ ತಂಡವೇ ಇದೆ ಎಂದು ವಾಗ್ದಾಳಿ ನಡೆಸಿದರು.- - -