ಕೊತ್ತತ್ತಿ ಗ್ರಾಮದಲ್ಲಿ ಭತ್ತ ನಾಟಿ ಮಾಡಿ ವಿಜಯೇಂದ್ರ ಸಂಭ್ರಮ

| Published : Mar 05 2025, 12:37 AM IST

ಕೊತ್ತತ್ತಿ ಗ್ರಾಮದಲ್ಲಿ ಭತ್ತ ನಾಟಿ ಮಾಡಿ ವಿಜಯೇಂದ್ರ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮದ ಸುಕೇಂದ್ರ ಹಾಗೂ ಶಿವಬಸಪ್ಪ ಅವರಿಗೆ ಸೇರಿದ ಎರಡು ಎಕರೆ ಜಮೀನಿನಲ್ಲಿ ಭತ್ತದ ನಾಟಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಭತ್ತದ ನಾಟಿ ಕಾರ್ಯಕ್ಕೆ ಜಮೀನನ್ನು ಹದಗೊಳಿಸಲಾಗಿತ್ತು. ನಾಟಿ ಮಾಡುವುದಕ್ಕೆ ರೈತ ಮಹಿಳೆಯರು ಸಿದ್ಧರಾಗಿ ಬಂದಿದ್ದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಕೊತ್ತತ್ತಿ ಗ್ರಾಮದಲ್ಲಿ ಭತ್ತ ನಾಟಿ ಮಾಡುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಂಭ್ರಮಿಸಿದರು. ನಾಟಿ ಮಾಡಿದ ನಂತರ ರೈತರ ಜೊತೆಯೇ ಕುಳಿತು ಸಾಮೂಹಿಕ ಭೋಜನ ಸ್ವೀಕರಿಸಿದರು.

ಗ್ರಾಮದ ಸುಕೇಂದ್ರ ಹಾಗೂ ಶಿವಬಸಪ್ಪ ಅವರಿಗೆ ಸೇರಿದ ಎರಡು ಎಕರೆ ಜಮೀನಿನಲ್ಲಿ ಭತ್ತದ ನಾಟಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಭತ್ತದ ನಾಟಿ ಕಾರ್ಯಕ್ಕೆ ಜಮೀನನ್ನು ಹದಗೊಳಿಸಲಾಗಿತ್ತು. ನಾಟಿ ಮಾಡುವುದಕ್ಕೆ ರೈತ ಮಹಿಳೆಯರು ಸಿದ್ಧರಾಗಿ ಬಂದಿದ್ದರು.

ಶ್ವೇತ ವಸ್ತ್ರಧರಿಸಿ ಬಂದಿದ್ದ ಬಿ.ವೈ.ವಿಜಯೇಂದ್ರ ಅವರು ಪಂಚೆಯನ್ನು ಸೊಂಟಕ್ಕೆ ಕಟ್ಟಿ, ಹಸಿರು ಟವೆಲ್‌ನ್ನು ತಲೆಗೆ ಸುತ್ತಿಕೊಂಡು ಮಧ್ಯಾಹ್ನ ೧೨ ಗಂಟೆ ವೇಳೆಗೆ ಕೆಸರುಗದ್ದೆಗಿಳಿದರು. ರೈತ ಮಹಿಳೆಯರೊಂದಿಗೆ ಸೇರಿಕೊಂಡು ಭತ್ತದ ಪೈರುಗಳನ್ನು ಹಿಡಿದು ನಾಟಿ ಮಾಡಿದರು. ಇವರೊಂದಿಗೆ ಕೆ.ಸಿ.ನಾರಾಯಣಗೌಡ, ಸತೀಶ್ ರೆಡ್ಡಿ, ಎಸ್.ಸಚ್ಚಿದಾನಂದ, ಡಾ.ಸಿದ್ದರಾಮಯ್ಯ, ಡಾ.ಎನ್.ಎ.ಸ್.ಇಂದ್ರೇಶ್ ಕೂಡ ಸಾಥ್ ನೀಡಿದರು.

ನಾಟಿ ಕಾರ್ಯಕ್ಕೆ ಸಾಂಕೇತಿಕ ಚಾಲನೆ ನೀಡಿದ ವಿಜಯೇಂದ್ರ ಅವರು ಗದ್ದೆಯಿಂದ ಹೊರಬಂದರು. ನಾಟಿ ಕಾರ್ಯ ಮುಗಿಸಿ ರೈತ ಮಹಿಳೆಯರಿಗೆ ಉಡುಗೊರೆಗಳನ್ನು ವಿತರಿಸಿದರು. ಕಾರ್ಯಕ್ರಮ ನಡೆದ ಪಕ್ಕದಲ್ಲೇ ಹಾಕಿರುವ ಪೆಂಡಾಲ್ ಕೆಳಗೆ ಊಟ ವಿತರಿಸಲಾಯಿತು. ಅವರೆಕಾಳು ಕೂಟು, ಮುದ್ದೆ, ಅನ್ನ, ಸಾಂಬಾರ್, ಮೈಸೂರು ಪಾಕ್ ಉಣಬಡಿಸಲಾಯಿತು. ವಿಜಯೇಂದ್ರ ಅವರು ರೈತರ ಜೊತೆಯೇ ಕುಳಿತು ಸಾಮೂಹಿಕ ಭೋಜನ ಮಾಡಿದರು.