ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಬಿ.ವೈ.ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನಿಭಾಯಿಸಲು ಆಗುವುದಿಲ್ಲ. ತಕ್ಷಣವೇ ಅವರನ್ನು ಬದಲಾವಣೆ ಮಾಡಬೇಕು ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಆಗ್ರಹಿಸಿದರು.ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಎರಡು ದಿನಗಳ ಹಿಂದೆಯೇ ಶೋಕಾಸ್ ನೋಟಿಸ್ ಬಂದಿದೆ. ಬಿ.ಎಸ್. ಯಡಿಯೂರಪ್ಪ ಹುಟ್ಟು ಹೋರಾಟಗಾರ. ಆದರೆ, ವಿಜಯೇಂದ್ರ ಬಿಎಸ್‌ವೈ ಅವರ ಕಾಲಿನ ಧೂಳಿಗೂ ಸಮನಲ್ಲ. ಜೀನ್ಸ್ ಪ್ಯಾಂಟ್, ಟೀ ಶರ್ಟ್ ಹಾಕಿ ಅಡ್ಡಾಡುವ ವಯಸ್ಸು ಅವರದ್ದು. ಇನ್ನೂ ನಾಲ್ಕು ವರ್ಷಗಳ ಬಳಿಕ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಬೇಕಿತ್ತು. ನಾವು ಯತ್ನಾಳ ಬೆನ್ನಿಗೆ ನಿಲ್ಲುತ್ತೇವೆ. ಕೇಂದ್ರ ನಾಯಕರ ಮನವೊಲಿಸುತ್ತೇವೆ ಎಂದು ಹೇಳಿದರು.ನನ್ನ ಬೆನ್ನಿಗೆ ನಿಲ್ಲುವಂತೆ ವಿಜಯೇಂದ್ರ ಹಿಂದುಳಿದ ನಾಯಕರನ್ನು ಬೆದರಿಸುತ್ತಿದ್ದಾರೆ. ವಿಜಯೇಂದ್ರ ಜೊತೆಯಲ್ಲಿರುವ ಬಹುತೇಕರು ಹಿಂದುಳಿದ ಸಮುದಾಯದವರು. ಲಿಂಗಾಯತ, ಒಕ್ಕಲಿಗರು ಯಾರೂ ಇಲ್ಲ. ಪಾಪ ರೇಣುಕಾಚಾರ್ಯ ರಾಜಕೀಯ ಅಸ್ತಿತ್ವಕ್ಕಾಗಿ ಅವರ ಜೊತೆಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಯಾರಾಗಬೇಕು ಎಂದು ನಾನು ಬಹಿರಂಗವಾಗಿ ಹೇಳಲ್ಲ. ಇನ್ ಡೋರ್ ಸಭೆ ಮಾಡಿ ಕೇಳಲಿ ಹೇಳುತ್ತೇನೆ ಎಂದು ಹೇಳಿದರು.