ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಮುಡಾ ಆರೋಪದಲ್ಲಿ ಯಾವುದೇ ಹುರುಳಿಲ್ಲದಿದ್ದರೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಜೆಡಿಎಸ್ ನ ನಿಖಿಲ್ ಕುಮಾರಸ್ವಾಮಿ ಬೆಂಗಳೂರಿನಿಂದ ಮೈಸೂರಿನವರೆಗೆ ತೂಕ ಕಡಿಮೆ ಆಗಲೆಂದು ವಾಕ್ ಮಾಡಲು ಬಂದಿದ್ದರು ಎಂದು ಕೃಷಿ ಸಚಿವ ಎನ್ .ಚಲುವರಾಯಸ್ವಾಮಿ ಪಾದಯಾತ್ರೆ ಕುರಿತು ಟೀಕಿಸಿದರು.ತಾಲೂಕಿನ ಕೆಆರ್ ಎಸ್ ನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ವಿಚಾರದಲ್ಲಿ ಇಡಿಗೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿದೆ. ಮುಡಾ ಆರೋಪದಲ್ಲಿ ಉರುಳಿಲ್ಲ ಎಂದು ನಮಗೆ ಗೊತ್ತಿತ್ತು. ಆದರೆ, ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಬದಲು ಪುತ್ರನನ್ನು ವಾಕ್ ಮಾಡಲು ಕಳುಹಿಸಿದ್ದರು ಎಂದು ಬಿಜೆಪಿ ಹಾಗೂ ಜೆಡಿಎಸ್ ಜಂಟಿ ಪಾದಯಾತ್ರೆ ಕುರಿತು ವ್ಯಂಗ್ಯವಾಡಿದರು.
ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಕೊಟ್ಟಿದೆ. ಪ್ರಧಾನಿ ಮೋದಿ ಅವರು ಗ್ಯಾರಂಟಿಯಿಂದ ಸಿದ್ದರಾಮಯ್ಯ ಸರ್ಕಾರವನ್ನು ದಿವಾಳಿ ಆಗುತ್ತೆ ಎಂದಿದ್ದರು. ಆದರೆ, ಬಿಜೆಪಿಯವರು ಡೆಲ್ಲಿ, ಬಿಹಾರದಲ್ಲಿ ಗ್ಯಾರಂಟಿ ಘೋಷಣೆ ಮಾಡಿದ್ದಾರೆ. ಇದು ವಿಪರ್ಯಾಸ ಎಂದರು. ಇನ್ನೂ ಮೂರು ವರ್ಷ ಇದ್ದು ಜನಪರ ಕೆಲಸ ಮಾಡುತ್ತೇವೆ. ನಮ್ಮ ಪಕ್ಷದ ವಿಚಾರ ಬಿಜೆಪಿಯವರಿಗೆ ಯಾಕೆ? ಅವರಿಗೆ ಏನು ಸಂಬಂಧ? ವಿಜಯೇಂದ್ರ ತನ್ನ ಅಧ್ಯಕ್ಷ ಸ್ಥಾನ ಖಚಿತಪಡಿಸಿಕೊಳ್ಳಲು 3 ತಿಂಗಳಾಗಿದೆ ಎಂದು ಟೀಕಿಸಿದರು.ನಾವು ಮುಂದಿನ ಚುನಾವಣೆಯನ್ನು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲೇ ಎದುರಿಸುತ್ತೇವೆ. ಆದರೆ, ಬಿಜೆಪಿ ಯಾರ ನೇತೃತ್ವದಲ್ಲಿ ಎದುರಿಸಲಿದೆ ಎಂಬುದನ್ನು ಸ್ಪಷ್ಟಪಡಿಸಲಿ. ಇನ್ನು ಕುಮಾರಸ್ವಾಮಿ ಬಹುಮತ ಬರದಿದ್ದರೇ ಪಕ್ಷ ವಿಸರ್ಜಿಸುತ್ತೇನೆ ಎಂದಿದ್ದರು. ಮೂರು ಚುನಾವಣೆಗಳು ಆಗಿದೆ ಆದರೆ, ಪಕ್ಷ ವಿಸರ್ಜನೆ ಮಾಡಿದ್ದಾರಾ ಎಂದು ಪ್ರಶ್ನಿಸಿದರು.
ಸಿದ್ದು- ಡಿಕೆ ಇಬ್ಬರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದಿದ್ದಾರೆ, ಸುಮ್ಮನೆ ಏಕೆ ಚರ್ಚೆ ಮಾಡಬೇಕು. ನಮ್ಮ ಪಕ್ಷದಲ್ಲಿ ಡಿಕೆ, ಸಿದ್ದು ನಾಯಕತ್ವ ಅಂತೀವಿ. ಆದರೆ ಬಿಜೆಪಿಯಲ್ಲಿ ಯಾರ ನಾಯಕತ್ವ ಇದೆ.ಕಾವೇರಿ ಆರತಿ ವಿಷಯವಾಗಿ ರೈತರನ್ನು ಕರೆದು ಮಾತನಾಡುತ್ತೇನೆ ಎಂದು ಹೇಳಿದ್ದೆವು. ಆದರೆ, ರೈತರು ಆತುರದಿಂದ ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದಾರೆ. ಇದೇ ತಿಂಗಳ 23 ರಂದು ಅರ್ಜಿ ವಿಚಾರಣೆ ಇದೆ. ನ್ಯಾಯಾಲಯ ಕೇಳಿರುವ ಮಾಹಿತಿಯನ್ನು ಒದಗಿಸುತ್ತೇವೆ. ಏನು ತೀರ್ಮಾನ ಬರಲಿದೆ ನೋಡೋಣ ಎಂದರು.
ನ್ಯಾಯಾಲಯ ಏನೇ ತೀರ್ಪು ನೀಡಿದರೂ ಅದಕ್ಕೆ ನಾವು ತಲೆಬಾಗಬೇಕಿದೆ. ಜನರ ವಿಶ್ವಾಸ ಗಳಿಸಲು ಅವರ ಪರ ಇಷ್ಟೆಲ್ಲ ಕೆಲಸ ಮಾಡ್ತಿದ್ದೇವೆ. ರೈತರನ್ನು ಮನವೊಲಿಸಬೇಕಿದೆ. ಅದನ್ನು ಮಾಡುತ್ತೇವೆ. ಕೋರ್ಟ್ ತೀರ್ಮಾನ ನೋಡಿಕೊಂಡು ಕಾವೇರಿ ಆರತಿ ವಿಷಯವಾಗಿ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.