ಪಟ್ಟಣದ ಕಾಳಮ್ಮನಗರದಲ್ಲಿ ಕೊಲೆಯಾದ ರಂಜಿತಾ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭಾನುವಾರ ಸಂಜೆ ಭೇಟಿ ನೀಡಿ, ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ಪಕ್ಷದ ವತಿಯಿಂದ ₹5 ಲಕ್ಷ ಪರಿಹಾರಧನ ವಿತರಣೆ
ಕನ್ನಡಪ್ರಭ ವಾರ್ತೆ ಯಲ್ಲಾಪುರಪಟ್ಟಣದ ಕಾಳಮ್ಮನಗರದಲ್ಲಿ ಕೊಲೆಯಾದ ರಂಜಿತಾ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭಾನುವಾರ ಸಂಜೆ ಭೇಟಿ ನೀಡಿ, ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಅವರು, ಪಕ್ಷದ ವತಿಯಿಂದ ₹5 ಲಕ್ಷ ಪರಿಹಾರಧನ ವಿತರಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ದಲಿತ, ಹಿಂದುಳಿದ, ಬಡ ಹಿಂದೂ ಮಹಿಳೆಯ ಬರ್ಬರ ಕೊಲೆ ಖಂಡನೀಯ. ಇದು ಲವ್ ಜಿಹಾದ್ ಪ್ರಕರಣವಾಗಿದ್ದು, ಇದಕ್ಕೆ ಸರ್ಕಾರ ಬೇರೆ ಬಣ್ಣ ಬಳಿಯದೇ ಸೂಕ್ತ ತನಿಖೆ ನಡೆಸಿ, ದಲಿತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.ರಾಜ್ಯದ ಗೃಹ ಇಲಾಖೆ ಸಂಪೂರ್ಣ ನಿಷ್ಕ್ರಿಯವಾಗಿರುವುದರಿಂದ ರಾಜ್ಯದಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿವೆ. ಹುಬ್ಬಳ್ಳಿಯ ನೇಹಾ ಹತ್ಯೆ ಪ್ರಕರಣದ ನೆನಪು ಮಾಸುವ ಮುನ್ನವೇ ಈ ಘಟನೆ ಆಗಿರುವುದು ಖೇದಕರ. ಮೃತ ರಂಜಿತಾ ಕುಟುಂಬಕ್ಕೆ 2 ಎಕರೆ ಜಮೀನು, ₹50 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.ಬಿಜೆಪಿಯವರು ಏನು ಮಾತನಾಡಿದರೂ ಸರ್ಕಾರ ಕೋಮುವಾದಿಗಳೆಂಬ ಪಟ್ಟ ನೀಡುತ್ತದೆ. ಇಂತಹ ಘಟನೆಗಳು ನಡೆದಾಗ ತನಿಖೆ ಮುನ್ನವೇ ಲವ್ ಜಿಹಾದ್ ಅಲ್ಲ ಎಂದು ಘೋಷಿಸುತ್ತದೆ. ಸರ್ಕಾರ ಕೈಕಟ್ಟಿ ಕುಳಿತಿರುವುದರಿಂದಲೇ ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿವೆ ಎಂದು ಟೀಕಿಸಿದರು.ದೇಶದ್ರೋಹಿಗಳ ಪೋಷಿಸುತ್ತಿರುವ ಕಾಂಗ್ರೆಸ್ ಸರ್ಕಾರ: ಆರೋಪರಾಜ್ಯ ಸರ್ಕಾರ ನಿಷ್ಕ್ರಿಯಗೊಂಡಿದ್ದು, ಕಾಂಗ್ರೆಸ್ ಸರ್ಕಾರ ದೇಶದ್ರೋಹಿಗಳನ್ನು ಪೋಷಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.
ಯಲ್ಲಾಪುರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲವ್ ಜಿಹಾದ್‌ಗೆ ಪ್ರತ್ಯೇಕ ವ್ಯಾಖ್ಯಾನ ಇಲ್ಲ. ಯುವಕರನ್ನು ದಾರಿ ತಪ್ಪಿಸುವ ಕಾಶ್ಮೀರ, ಕೇರಳಗಳಲ್ಲಿ ಲವ್ ಜಿಹಾದ್ ಮೂಲಕ ಹಿಂದೂಗಳನ್ನು ದಮನ ಮಾಡುವ ಪ್ರಕ್ರಿಯೆ ನಡೆದಿದೆ. ಆ ದೃಷ್ಟಿಯಿಂದ ಯಲ್ಲಾಪುರದ ಘಟನೆ ಬಗ್ಗೆ ಇಲ್ಲಿಯ ವಿವಿಧ ಸಂಘಟನೆಗಳು ಮುಂಚೂಣಿಯಲ್ಲಿ ನಿಂತು ಸರ್ಕಾರಕ್ಕೆ ಸ್ಪಷ್ಟ ಸಂದೇಶ ನೀಡಿವೆ. ದಲಿತ ಮಹಿಳೆಯ ಮೇಲೆ ಹಾಡುಹಗಲೇ ಅಮಾನವೀಯ ಕೃತ್ಯ ನಡೆದಿರುವುದನ್ನು ಖಂಡಿಸಲೇಬೇಕು. ಮೃತ ಮಹಿಳೆಯ ಮಗನಿಗೆ ಉಚಿತ ಶಿಕ್ಷಣವನ್ನು ಹರಿಪ್ರಕಾಶ ಕೋಣೆಮನೆ ನೀಡಲು ಮುಂದಾಗಿರುವುದು ಸಮಾಜಕ್ಕೆ ಉತ್ತಮ ಸಂದೇಶ ಎಂದರು.ಬೆಂಗಳೂರಿನಲ್ಲಿ ನಡೆಯುವ ದೇವಾಂಗ ಸಮಾಜದ ಸಮಾವೇಶವನ್ನು ಬಿಟ್ಟು ಈ ಪ್ರಕರಣದ ಗಂಭೀರತೆ ಅರಿತು ಇಲ್ಲಿಗೆ ಬಂದಿದ್ದೇನೆ. ರಾಜ್ಯ ಸರ್ಕಾರದ ತುಷ್ಟೀಕರಣ, ನಿಷ್ಕ್ರಿಯತೆ ನೋಡಿ ಜನ ಬೇಸತ್ತಿದ್ದಾರೆ. ಸಣ್ಣಪುಟ್ಟ ವೈಮನಸ್ಸು ಬಿಟ್ಟು ಒಗ್ಗಟ್ಟಿನಿಂದ ಪಕ್ಷ ಬಲಪಡಿಸಬೇಕು. ಆಗ ಮುಂಬರುವ ಎಲ್ಲ ಚುನಾವಣೆಯಲ್ಲಿ ಜನ ಬೆಂಬಲಿಸುತ್ತಾರೆ ಎಂದರು.ಪ್ರಸ್ತುತ ಜಿಪಂ, ತಾಪಂ, ಗ್ರಾಪಂ ಚುನಾವಣೆಯ ಸಿದ್ಧತೆ ಮಾಡಬೇಕಾಗಿದೆ. ಪ್ರತಿ ಜಿಲ್ಲೆಗೆ ಹೋಗಲಿದ್ದೇನೆ. ಉತ್ತರ ಕನ್ನಡದಲ್ಲಿ ಜ. 9ರಂದು ಪ್ರವಾಸ ಮಾಡಲಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಮಾತನಾಡಿ, ಎಷ್ಟೇ ಕಾರ್ಯಗಳ ಒತ್ತಡ ಇದ್ದರೂ ರಾಜ್ಯಾಧ್ಯಕ್ಷರು ಸಾಮಾನ್ಯ ಮಹಿಳೆಯ ಹತ್ಯೆಯ ಬಗ್ಗೆ ಕುಟುಂಬಕ್ಕೆ ಸಾಂತ್ವನ ಹೇಳುವುದಕ್ಕಾಗಿ ಇಲ್ಲಿಗೆ ಬಂದಿದ್ದಾರೆ. ಯಲ್ಲಾಪುರದ ಸಂಘಟನೆಗಳು ಉತ್ತಮ ಸಂಘಟನೆಯ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ನಾವು ಪಕ್ಷ ಬಲಪಡಿಸಬೇಕಾಗಿದೆ ಎಂದರು.
ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಪ್ರಮುಖರಾದ ನಾಗರಾಜ ನಾಯಕ, ಕೆ.ಜಿ. ನಾಯ್ಕ, ಗುರುಪ್ರಸಾದ ಹೆಗಡೆ, ಪ್ರಸಾದ ಹೆಗಡೆ ಇತರರಿದ್ದರು.