ವಿಜಯೇಂದ್ರ ನಾಯಕತ್ವ ಒಪ್ಪಲ್ಲ: ರಮೇಶ ಜಾರಕಿಹೊಳಿ

| Published : Oct 29 2024, 01:08 AM IST

ಸಾರಾಂಶ

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನಾಯಕತ್ವವನ್ನು ನಾನು ಒಪ್ಪಲ್ಲ. ಅ‍ವರ ನೇತೃತ್ವದಲ್ಲಿ ನಡೆಯುವ ಮೂರು ಕ್ಷೇತ್ರಗಳ ಉಪ ಚುನಾವಣೆ ಪ್ರಚಾರದಲ್ಲಿ ನಾನು ಭಾಗವಹಿಸುವುದಿಲ್ಲ. ಉಪಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಒಳ್ಳೆಯದಾಗಲಿದೆ ಎಂದು ಮಾಜಿ ಸಚಿವ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನಾಯಕತ್ವವನ್ನು ನಾನು ಒಪ್ಪಲ್ಲ. ಅ‍ವರ ನೇತೃತ್ವದಲ್ಲಿ ನಡೆಯುವ ಮೂರು ಕ್ಷೇತ್ರಗಳ ಉಪ ಚುನಾವಣೆ ಪ್ರಚಾರದಲ್ಲಿ ನಾನು ಭಾಗವಹಿಸುವುದಿಲ್ಲ. ಉಪಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಒಳ್ಳೆಯದಾಗಲಿದೆ ಎಂದು ಮಾಜಿ ಸಚಿವ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಮಹಾರಾಷ್ಟ್ರ ಚುನಾವಣೆಯಲ್ಲಿ ನನಗೆ ಜವಾಬ್ದಾರಿ ಬೇಡ. ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಕೊಡಿ. ಅವರ ಜೊತೆ ಸೇರಿ ನಾನು ಪ್ರಚಾರಕ್ಕೆ ಹೋಗುತ್ತೇನೆ ಎಂದಿದ್ದೇನೆ. ಅಕ್ಕಲಕೋಟ, ಸೋಲಾಪುರ, ಜತ್ತ ಸೇರಿದಂತೆ ಕನ್ನಡ ಬಾಹುಳ್ಯದ ಕ್ಷೇತ್ರದಲ್ಲಿ ಪ್ರಚಾರ ನಡೆಸಲು ಹೇಳಿದ್ದರು. ನಾನು ನೀರಾವರಿ ಇಲಾಖೆ ಸಚಿವನಾಗಿದ್ದಾಗ ಇಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಾಟ್೯ ಟೈಮ್ ನೀರಾವರಿ ಸಚಿವ. ಬಿಬಿಎಂಪಿಗೇ ಹೆಚ್ಚಿನ ಮಹತ್ವ ಕೊಡುತ್ತಾರೆ. ದಯಮಾಡಿ ಫುಲ್ ಟೈಮ್ ನೀರಾವರಿ ಸಚಿವರನ್ನು ಸರ್ಕಾರ ನೇಮಕ ಮಾಡಬೇಕು ಎಂದು ಹೇಳಿದರು.

ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಸಿ.ಪಿ.ಯೋಗೇಶ್ವರ ಒಳ್ಳೆಯ ಹೋರಾಟಗಾರ. ಅವನಿಗೆ ಅನ್ಯಾಯವಾಯಿತು. ಅದಕ್ಕೆ ಕಾಂಗ್ರೆಸ್ ಹೋಗಿ ಚನ್ನಪಟ್ಟಣದ ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾನೆ. ಗೆಲ್ಲುತ್ತಾನೋ ಸೋಲುತ್ತಾನೋ ಗೊತ್ತಿಲ್ಲ ಎಂದು ಮಾರ್ಮಿವಾಗಿ ಹೇಳಿದರು.ಮಾಜಿ ಶಾಸಕ ಮಹೇಶ ಕುಮಠಳ್ಳಿ ಉಪಸ್ಥಿತರಿದ್ದರು.